ADVERTISEMENT

'371ಕ್ಕೆ ತಗಾದೆ; ಶಕ್ತಿ ಪ್ರದರ್ಶನದ ಬಿಸಿ'

ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಪ್ರತಿಭಟನೆಗೆ ವ್ಯಾಪಕ ಬೆಂಬಲ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 15:10 IST
Last Updated 29 ಜೂನ್ 2024, 15:10 IST
ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹಾಗೂ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಪ್ರಮುಖರು ಬೀದರ್‌ನಲ್ಲಿ ಶನಿವಾರ ಸಚಿವರಾದ ಈಶ್ವರ ಬಿ. ಖಂಡ್ರೆ, ರಹೀಂ ಖಾನ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹಾಗೂ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಪ್ರಮುಖರು ಬೀದರ್‌ನಲ್ಲಿ ಶನಿವಾರ ಸಚಿವರಾದ ಈಶ್ವರ ಬಿ. ಖಂಡ್ರೆ, ರಹೀಂ ಖಾನ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಬೀದರ್‌: ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಸಂವಿಧಾನದ 371(ಜೆ) ವಿರುದ್ಧ ತಗಾದೆ ತೆಗೆದಿರುವ ಬೆಂಗಳೂರಿನ ಹಸಿರು ಪ್ರತಿಷ್ಠಾನ ವೇದಿಕೆಯ ವಿರುದ್ಧ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯು ಶಕ್ತಿ ಪ್ರದರ್ಶನದ ಮೂಲಕ ಶನಿವಾರ ಬಿಸಿ ಮುಟ್ಟಿಸಿತು.

ಹಸಿರು ಪ್ರತಿಷ್ಠಾನ ವೇದಿಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಮಿತಿ ಮುಖಂಡರು, 371(ಜೆ) ವಿರೋಧಿಸಿದರೆ ಭಾರತದ ಸಂವಿಧಾನವನ್ನು ವಿರೋಧಿಸಿದಂತೆ. ಒಂದುವೇಳೆ 371(ಜೆ) ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸಿದರೆ ರಾಜಧಾನಿಯಲ್ಲಿ ಶಕ್ತಿ ಪ್ರದರ್ಶನ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಕರೆ ನೀಡಿದ್ದ ಹೋರಾಟಕ್ಕೆ ಉತ್ತಮ ಬೆಂಬಲ ವ್ಯಕ್ತವಾಯಿತು. ವಿವಿಧ ಶಿಕ್ಷಣ ಸಂಸ್ಥೆಗಳು, ಬೀದರ್‌ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ, ಗಾಂಧಿ ಗಂಜ್‌ ಮರ್ಚಂಟ್‌ ಅಸೋಸಿಯೇಶನ್‌, ಸಂಘ ಸಂಸ್ಥೆಗಳು, ವಿವಿಧ ರಾಜಕೀಯ ಪಕ್ಷಗಳು ಬೇಷರತ್‌ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದವು. ನಗರದ ಎಲ್ಲ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಛತ್ರಪತಿ ಶಿವಾಜಿ ಮಹಾರಾಜ ವೃತ್ತದವರೆಗೆ ಪ್ರತಿಭಟನಾಕಾರರು ಸೇರಿದ್ದರು. 

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್‌, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಸಲ್ಲಿಸಿ, 371(ಜೆ) ವಿರುದ್ಧ ಅನಗತ್ಯ ಗೊಂದಲ ಸೃಷ್ಟಿಸುತ್ತಿರುವ ಹಸಿರು ಪ್ರತಿಷ್ಠಾನದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ವೈಜನಾಥ ಪಾಟೀಲ ಸೇರಿದಂತೆ ಅನೇಕರ ಹೋರಾಟದ ಪ್ರತಿಫಲವಾಗಿ 2013ರಲ್ಲಿ ಅಂದಿನ ಕಾಂಗ್ರೆಸ್‌ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಕಲ್ಯಾಣ ಕರ್ನಾಟಕಕ್ಕೆ 371(ಜೆ) ಪ್ರಕಾರ ವಿಶೇಷ ಸ್ಥಾನಮಾನ ಕಲ್ಪಿಸಿದೆ. ಈಗಷ್ಟೇ ಅದು ಅನುಷ್ಠಾನಕ್ಕೆ ಬರುತ್ತಿದೆ. ಅಷ್ಟರಲ್ಲಾಗಲೇ ಅದರ ವಿರುದ್ಧ ಪಟ್ಟಭದ್ರರು ಧ್ವನಿ ಎತ್ತುತ್ತಿದ್ದಾರೆ. ರಾಜ್ಯದ 24 ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಸುಳ್ಳು ಹೇಳಿ ಅಪಪ್ರಚಾರ ಮಾಡುತ್ತಿದ್ದಾರೆ. ಜನವಿರೋಧಿ ಶಕ್ತಿಗಳಿಗೆ ತಕ್ಕ ಉತ್ತರ ನೀಡುವುದಕ್ಕಾಗಿ ಸಭೆ ಆಯೋಜಿಸಲಾಗಿದೆ ಎಂದು ಸಮಿತಿ ಮುಖಂಡರು ಹೇಳಿದರು.

371(ಜೆ) ಜಾರಿಗೆ ಬಂದ ನಂತರವೂ ಆ ಭಾಗ ದೊಡ್ಡ ಮಟ್ಟದ ಬದಲಾವಣೆ ಕಂಡಿಲ್ಲ. ದೇಶದ ಅನೇಕ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. ಹಿಂದುಳಿದ ಪ್ರದೇಶವನ್ನು ಮುಖ್ಯವಾಹಿನಿಗೆ ತರುವುದು ಇದರ ಉದ್ದೇಶ. ಸಂಸತ್ತಿನಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಸ್ಥಾನಮಾನ ನೀಡಲಾಗಿದೆ. ಅದನ್ನೇ ಪ್ರಶ್ನಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಕೇಳಿದರು.

ಸಚಿವ ಎಚ್‌.ಕೆ. ಪಾಟೀಲ ಅವರು 371(ಜೆ) ವಿರುದ್ಧ ಅಪಸ್ವರ ಎತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಹೊಸ ಆಯ್ಕೆ ಪ್ರಕ್ರಿಯೆ ನಡೆಸದಂತೆ ಒತ್ತಡ ಹೇರಿದ್ದಾರೆ ಎಂದು ಗೊತ್ತಾಗಿದೆ. ಹೀಗೊಂದು ವೇಳೆ ಅವರು ಮಾಡಿದರೆ ಅವರ ವಿರುದ್ಧ ದೊಡ್ಡ ಹೋರಾಟ ಸಂಘಟಿಸಲಾಗುವುದು ಎಂದು ಎಚ್ಚರಿಸಿದರು.

371(ಜೆ) ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ರಚಿಸಬೇಕು. ನೇಮಕಾತಿಯಲ್ಲಿ ಕೃಪಾಂಕ ಮತ್ತು ವಯೋಮಿತಿ ಸಡಿಲಿಸಬೇಕು. ವ್ಯಾಜ್ಯಗಳ ನಿವಾರಣೆಗೆ ಪ್ರತ್ಯೇಕ ಟ್ರಿಬ್ಯುನಲ್‌ ರಚಿಸಬೇಕು. ಎಲ್ಲ ನೇಮಕಾತಿಗಳಿಗೆ ಮೆರಿಟ್‌ ಮೀಸಲಾತಿ ಘೋಷಿಸಬೇಕು. ಖಾಲಿ ಇರುವ ಎಲ್ಲ ಹುದ್ದೆಗಳನ್ನು ತುಂಬಬೇಕು. 371(ಜೆ) ಅನುಷ್ಠಾನಕ್ಕೆ ಸಲಹಾ ಸಮಿತಿ ರಚಿಸಬೇಕೆಂದು ಸಚಿವರಿಗೆ ಒತ್ತಾಯಿಸಿದರು.

ಬಸವಕಲ್ಯಾಣ ಅನುಭವ ಮಂಟಪದ ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ವಿಧಾನ ಪರಿಷತ್‌ ಸದಸ್ಯ ಶಶಿಲ್‌ ಜಿ.ನಮೋಶಿ, ಹುಲಸೂರಿನ ಶಿವಾನಂದ ಸ್ವಾಮೀಜಿ, ಬಸವಮಂಟಪದ ಮಾತೆ ಸತ್ಯಾದೇವಿ, ಚನ್ನಬಸವಾನಂದ ಸ್ವಾಮೀಜಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಿವಶರಣಪ್ಪ ಪಾಟೀಲ, ಹೋರಾಟ ಸಮಿತಿ ಅಧ್ಯಕ್ಷ ಡಾ. ರಜನೀಶ ವಾಲಿ, ಪ್ರಧಾನ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ, ಸಹ ಸಂಚಾಲಕ ವಿನಯ್‌ ಮಾಳಗೆ, ಪ್ರಧಾನ ಸಂಚಾಲಕ ಸುರೇಶ ಚನಶೆಟ್ಟಿ, ಪ್ರಮುಖರಾದ ರಾಜೇಂದ್ರಕುಮಾರ ವಣಗೇರಿ, ಬಸವರಾಜ ಧನ್ನೂರ, ಚಂದ್ರಶೇಖರ ಪಾಟೀಲ, ಅನಿಲ್‌ಕುಮಾರ ಬೇಲ್ದಾರ, ಬಾಬುವಾಲಿ, ಪೂರ್ಣಿಮಾ ಜಿ., ಅಬ್ದುಲ್‌ ಖದೀರ್‌,  ಪಂಡಿತರಾವ್‌ ಚಿದ್ರಿ, ರಘುನಾಥರಾವ್‌ ಮಲ್ಕಾಪೂರೆ, ವಿರೂಪಾಕ್ಷ ಗಾದಗಿ, ಶಶಿಧರ ಹೊಸಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.

ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರಗಳು

ಹಸಿರು ಪ್ರತಿಷ್ಠಾನದ ವಿರುದ್ಧ ಸಿಡಿದೆದ್ದರು ಪಕ್ಷಭೇದ ಮರೆತು ವಿರೋಧ, ಪ್ರತಿಭಟನೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಗೆ ಸಾಕ್ಷಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.