ಬೀದರ್: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕಾಗಿ ರಾಜ್ಯದಾದ್ಯಂತ ಸಂಚರಿಸುತ್ತಿರುವ ಕನ್ನಡ ರಥಯಾತ್ರೆ ಶುಕ್ರವಾರ ಜಿಲ್ಲೆ ಪ್ರವೇಶಿಸಿತು.
ಕಲಬುರಗಿ ಜಿಲ್ಲೆಯ ಮೂಲಕ ಬೀದರ್ ಜಿಲ್ಲೆ ಗಡಿಭಾಗದ ಹಳ್ಳಿಖೇಡ್ (ಕೆ) ಗ್ರಾಮಕ್ಕೆ ರಥ ಪ್ರವೇಶಿಸುತ್ತಿದ್ದಂತೆ ಕನ್ನಡಾಭಿಮಾನಿಗಳು, ಗ್ರಾಮಸ್ಥರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸ್ವಾಗತ ಕೋರಿದರು.
ಬೀದರ್ ಜಿಲ್ಲೆಯಾದ್ಯಂತ ಸಂಚರಿಸಲಿರುವ ರಥಯಾತ್ರೆಗೆ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪನವರು ಚಾಲನೆ ನೀಡಿದರು. ಅಲಂಕರಿಸಿದ ಕನ್ನಡ ರಥದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಭೈರಪ್ಪನವರು ಮಾಲಾರ್ಪಣೆ ಮಾಡಿದರು. ಈ ವೇಳೆ ಕನ್ನಡಪರ, ಭುವನೇಶ್ವರಿ ತಾಯಿ ಹಾಗೂ ಸಾಹಿತ್ಯ ಸಮ್ಮೇಳನಕ್ಕೆ ಜಯವಾಗಲಿ ಎಂದು ಘೋಷಣೆಗಳನ್ನು ಹಾಕಿದರು.
ಭೈರಪ್ಪನವರು ಮಾತನಾಡಿ, ಕನ್ನಡ ಕಟ್ಟಿದ ಈ ನೆಲ ಶರಣರ ನಾಡಾಗಿದೆ. ಈ ಭವ್ಯ ಪರಂಪರೆಯನ್ನು ಮರೆಮಾಚದೆ ಉಳಿಸಿ ಬೆಳೆಸಲು ಸಮ್ಮೇಳನ ಆಯೋಜಿಸಲಾಗಿದೆ. ಕನ್ನಡ ನುಡಿ ಜಾತ್ರೆಯ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್, ಕನ್ನಡ ನಮ್ಮ ತಾಯಿ ಭಾಷೆ. ನಾವೆಲ್ಲರೂ ಇದನ್ನು ಬೆಳೆಸಬೇಕಾದರೆ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಿಕೊಡಬೇಕು. ಕನ್ನಡದ ಕವಿರಾಜಮಾರ್ಗ ಕೊಟ್ಟ ನೆಲ ಬೀದರ್. ಹನ್ನೆರಡನೆಯ ಶತಮಾನದಲ್ಲಿ ಕಾಯಕ, ದಾಸೋಹ ಜೊತೆಗೆ ಕನ್ನಡವನ್ನು ದೈವತ್ವದ ಭಾಷೆ ಮಾಡಿದರು ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ, ಹುಮನಾಬಾದ್ ತಹಶೀಲ್ದಾರ್ ಅಂಜುಂ ತಬಸುಮ್, ಪರಿಷತ್ತಿನ ಹುಮನಾಬಾದ್ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಲಿಂಗ ವಿ. ನಿರ್ಣಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ರಡ್ಡಿ ಮಾಲಿಪಾಟೀಲ, ಪ್ರೌಢ ಶಾಲೆ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶೇಕ್ ಮೆಹಬೂಬ್ ಪಟೇಲ್ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.