ADVERTISEMENT

2023ರಲ್ಲಿ ಬೀದರ್ ಜಿಲ್ಲೆಯಲ್ಲಿ 90,785 ಪ್ರಕರಣ ಇತ್ಯರ್ಥ: ನ್ಯಾಯಾಧೀಶ ಕನಕಟ್ಟೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2024, 4:41 IST
Last Updated 22 ಫೆಬ್ರುವರಿ 2024, 4:41 IST
ಎಸ್‌.ಕೆ. ಕನಕಟ್ಟೆ
ಎಸ್‌.ಕೆ. ಕನಕಟ್ಟೆ   

ಬೀದರ್‌: ‘2023ನೇ ಇಸ್ವಿಯಲ್ಲಿ ಜಿಲ್ಲೆಯಲ್ಲಿ ನಾಲ್ಕು ರಾಷ್ಟ್ರೀಯ ಲೋಕ ಅದಾಲತ್‌ ಸಂಘಟಿಸಲಾಗಿತ್ತು. ಅದರಲ್ಲಿ ಒಟ್ಟು 90,785 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಕೆ.ಕನಕಟ್ಟೆ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಒಟ್ಟು ಪೆಂಡಿಂಗ್‌ ಇದ್ದ 7,844 ಹಾಗೂ ವ್ಯಾಜ್ಯಪೂರ್ವ 82,941 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ’ ಎಂದು ಮಾಹಿತಿ ಹಂಚಿಕೊಂಡರು.

ಒಟ್ಟು ₹73.71 ಕೋಟಿ ವಸೂಲಾತಿ, ಪರಿಹಾರ ಒದಗಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 18 ಜೋಡಿಗಳು ರಾಜಿ ಸಂಧಾನದ ಮೂಲಕ ಒಂದಾಗಿದ್ದಾರೆ. ಇದು ಸಂತಸದ ವಿಷಯ ಎಂದು ಹೇಳಿದರು. 

ADVERTISEMENT

ಈ ವರ್ಷವೂ ಲೋಕ ಅದಾಲತ್‌ನಲ್ಲಿ, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಹೆಚ್ಚಾಗಿ ಇತ್ಯರ್ಥಗೊಳಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕೆಲ್ಲ ಮಾಧ್ಯಮಗಳು ಹೆಚ್ಚು ಪ್ರಚಾರ ನೀಡಬೇಕು. ಸಾರ್ವಜನಿಕರು ಕೂಡ ಸಹಕರಿಸಬೇಕು. ಕಳೆದ ಸಲದ ಲೋಕ ಅದಾಲತ್‌ಗಿಂತ ಈ ಬಾರಿ ಹೆಚ್ಚು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲಾಗುವುದು. 2024ರ ಫೆ. 20ರವರೆಗೆ ಜಿಲ್ಲೆಯಲ್ಲಿ ಒಟ್ಟು 30,830 ಪ್ರಕರಣಗಳು ಬಾಕಿ ಇವೆ ಎಂದು ಮಾಹಿತಿ ನೀಡಿದರು.

ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಿ ಮಾಡಿಕೊಳ್ಳುವುದರಿಂದ ಕಕ್ಷಿದಾರನಿಗೆ ನ್ಯಾಯಾಲಯದ ಶುಲ್ಕ ವಾಪಸ್‌ ಮಾಡಲಾಗುವುದು. ಮೇಲ್ಮನವಿಗೆ ಅವಕಾಶ ಇರುವುದಿಲ್ಲ. ಎರಡೂ ಪಕ್ಷದವರು ದ್ವೇಷ ಮರೆತು ಸುಮಧುರ ಬಾಂಧವ್ಯ ಹೊಂದಲು ಲೋಕ ಅದಾಲತ್‌ನಲ್ಲಿ ಅವಕಾಶ ಇದೆ ಎಂದು ಹೇಳಿದರು. 

ಜಿಲ್ಲೆಯಲ್ಲಿ ಬರುವ ಮಾರ್ಚ್‌ 9ರಂದು ಬೃಹತ್‌ ಲೋಕ ಅದಾಲತ್‌ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಅದಾಲತ್‌ ನಡೆಯಲಿದೆ. ಆಸ್ತಿಪಾಲು ವಿಭಾಗ ಜೀವನಾಂಶ, ಚೆಕ್ ಬೌನ್ಸ್‌, ವಿದ್ಯುತ್ ಪ್ರಕರಣಗಳು, ಕಂದಾಯ ಅಪರಾಧಿಕ ಪ್ರಕರಣ, ಕಾರ್ಮಿಕರ ಪ್ರಕರಣಗಳು, ಬ್ಯಾಂಕ್ ಪ್ರಕರಣಗಳು, ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಇದೆ. ಜಿಲ್ಲೆಯ ಜನ ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.

ಪ್ರಾಧಿಕಾರದ ಜಗದೀಶ್ವರ ದೊರೆ, ಆಕಾಶ ಸಜ್ಜನ, ರಾಹುಲ್‌, ಜೀವನ್‌, ಯೋಹಾನ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.