ಬೀದರ್: ಜಿಲ್ಲೆಯಲ್ಲಿ ಹೊಸ ವರ್ಷದ ಮೊದಲ ದಿನ 44 ಹೆಣ್ಣು ಹಾಗೂ 47 ಗಂಡು ಸೇರಿ ಒಟ್ಟು 91 ಶಿಶುಗಳು ಜನಿಸಿವೆ. ಬಹುತೇಕ ಮಕ್ಕಳು ಸರ್ಕಾರಿ ಆಸ್ಪತ್ರೆಗಳಲ್ಲೇ ಜನಿಸಿದ್ದು, ಎಲ್ಲರೂ ಆರೋಗ್ಯಯುತವಾಗಿದ್ದಾರೆ. ಕುಟುಂಬ ಯೋಜನೆಯ ಜಾಗೃತಿಯಿಂದಾಗಿ ಜಿಲ್ಲೆಯಲ್ಲಿ ಮಕ್ಕಳ ಜನನ ಪ್ರಮಾಣ ಕಡಿಮೆಯಾಗಿದೆ.
‘ಬ್ರಿಮ್ಸ್‘ ಆಸ್ಪತ್ರೆಯಲ್ಲಿ 2019ರ ಜನವರಿ 1 ರಂದು 6 ಗಂಡು ಹಾಗೂ 9 ಹೆಣ್ಣು ಸೇರಿ ಒಟ್ಟು 15 ಮಕ್ಕಳು ಜನಿಸಿವೆ. ಏಳು ಸಿಸೆರಿಯನ್ ಹಾಗೂ ಎಂಟು ಸಾಮಾನ್ಯ ಹೆರಿಗೆಗಳು ಆಗಿವೆ. ನಗರ ಪ್ರದೇಶದಲ್ಲಿ ಶೇ 70 ರಷ್ಟು ಹೆರಿಗೆಗಳು ಬ್ರಿಮ್ಸ್ ಆಸ್ಪತ್ರೆಯಲ್ಲೇ ಆಗುತ್ತಿವೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿ.ಎಸ್.ರಗಟೆ ತಿಳಿಸಿದರು.
2017ರಲ್ಲಿ 17,246 ಗಂಡು ಹಾಗೂ 15,479 ಹೆಣ್ಣು ಸೇರಿ ಒಟ್ಟು 32,725 ಮಕ್ಕಳು ಜನಿಸಿದರೆ, 2018ರ ಅಂತ್ಯದ ವರೆಗೆ 16,064 ಗಂಡು ಹಾಗೂ 14,583 ಹೆಣ್ಣು ಸೇರಿ ಒಟ್ಟು 30,647 ಮಕ್ಕಳು ಜನಿಸಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಒಂದು ವರ್ಷದಲ್ಲಿ 2,078 ಮಕ್ಕಳ ಜನನ ಪ್ರಮಾಣ ಕಡಿಮೆಯಾಗಿದೆ.
‘ವಿಶ್ವದಲ್ಲಿ ಹೊಸ ವರ್ಷದ ಮೊದಲ ದಿನ 3,95,072 ಶಿಶುಗಳು ಜನಿಸಿವೆ. ಕಳೆದ ವರ್ಷ 3,86,000 ಮಕ್ಕಳು ಜನಿಸಿದ್ದವು. ಒಂದು ವರ್ಷದ ಅವಧಿಯಲ್ಲಿ ಮಕ್ಕಳ ಜನನ 9,072 ರಷ್ಟು ಕಡಿಮೆಯಾಗಿದೆ. ಭಾರತದಲ್ಲಿ ಕಳೆದ ವರ್ಷ 69,070 ಹಾಗೂ ಈ ವರ್ಷ 69,944 ಮಕ್ಕಳು ಜನಿಸಿವೆ. ದೇಶದಲ್ಲಿ ಜನನ ಪ್ರಮಾಣ ಹೆಚ್ಚುತ್ತಲೇ ಇದೆ. ಆದರೆ ಜಿಲ್ಲೆಯಲ್ಲಿ ಜನನ ಪ್ರಮಾಣ ಕಡಿಮೆಯಾಗಿದೆ’ ಎನ್ನುತ್ತಾರೆ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಇಂದುಮತಿ ಪಾಟೀಲ.
‘ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ‘ಮಾಲಾ’ ಹಾಗೂ ‘ಛಾಯಾ’ ಮಾತ್ರೆಗಳು ಸುಲಭವಾಗಿ ದೊರಕುತ್ತಿವೆ. ಮೆಡಿಕಲ್‌ಗಳಲ್ಲಿ ಗರ್ಭನಿರೋಧಕ ಮಾತ್ರೆಗಳು ಲಭ್ಯ ಇವೆ. ‘ಅಂತರ’ ಗರ್ಭನಿರೋಧಕ ಚುಚ್ಚುಮದ್ದು ನಂತರ ಜನ ಹೆಚ್ಚು ಜಾಗೃತರಾಗಿದ್ದಾರೆ. ಕುಟುಂಬ ಯೋಜನೆ ಅಳವಡಿಸಿಕೊಳ್ಳಲು ‘ಅಂತರ’ಕ್ಕಾಗಿ ಹೆಚ್ಚು ಆಸಕ್ತಿ ತೋರಿದ್ದಾರೆ. ಇದರಿಂದ ಜನನ ಪ್ರಮಾಣ ಕಡಿಮೆಯಾಗಿದೆ. ಮುಂದಿನ ವರ್ಷ ಜನನ ಇನ್ನಷ್ಟು ಇಳಿಯಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.
‘ಗರ್ಭಪಾತ ಹಾಗೂ ಹೆಣ್ಣು ಭ್ರೂಣ ಹತ್ಯೆ ನಿಷೇಧದ ನಂತರ ಜನರಲ್ಲಿ ಕಾನೂನು ಭಯ ಉಂಟಾಗಿದೆ. ಇದರಿಂದ ಲಿಂಗ ತಾರತಮ್ಯ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗಿದೆ. ಗಂಡು ಹೆಣ್ಣಿನ ಅನುಪಾತ ಯಥಾವತ್ತಾಗಿ ಮುಂದುವರಿದಿದೆ. ಬರುವ ದಿನಗಳಲ್ಲಿ ಸರಿ ಹೋಗುವ ನಿರೀಕ್ಷೆ ಇದೆ ಎಂದು ಹೇಳುತ್ತಾರೆ.
‘ಥೈಲ್ಯಾಂಡ್‌ನಲ್ಲಿ ಕಳೆದ ವರ್ಷ ಜನನ ಪ್ರಮಾಣ ಕಡಿಮೆಯಾಗಿದೆ. ದಂಪತಿಗೆ ಉತ್ತೇಜನ ನೀಡಲು ಅಲ್ಲಿನ ಆರೋಗ್ಯ ಇಲಾಖೆ
ಹೊಸ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಕ್ಕಳ ಜನನಕ್ಕೆ ಅಗತ್ಯ ಪೋಷಕಾಂಶಗಳುಳ್ಳ ‘ಮ್ಯಾಜಿಕ್ ಮಾತ್ರೆ’ಗಳನ್ನು ಕೊಡುತ್ತಿದೆ. ಜನ ಜನಸಂಖ್ಯೆ ಅಧಿಕ ಇರುವ ದೇಶಗಳು ಜನಸಂಖ್ಯೆ ನಿಯಂತ್ರಣಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತಂದಿವೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎ.ಜಬ್ಬಾರ್ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.