ADVERTISEMENT

ಚಿಟಗುಪ್ಪ | ಅಗ್ನಿ ಪೂಜೆಗೆ ಹರಿದು ಬಂದ ಭಕ್ತರು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 14:04 IST
Last Updated 28 ನವೆಂಬರ್ 2023, 14:04 IST
ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾದ ವೀರಭದ್ರೇಶ್ವರ ದೇಗುಲದ ಅಗ್ನಿ ಕುಂಡದಲ್ಲಿ ರಥದ ಕಳಸಕ್ಕೆ ವೈದಿಕರು ಪೂಜೆ ಸಲ್ಲಿಸಿದರು
ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾದ ವೀರಭದ್ರೇಶ್ವರ ದೇಗುಲದ ಅಗ್ನಿ ಕುಂಡದಲ್ಲಿ ರಥದ ಕಳಸಕ್ಕೆ ವೈದಿಕರು ಪೂಜೆ ಸಲ್ಲಿಸಿದರು   

ಚಿಟಗುಪ್ಪ: ತಾಲ್ಲೂಕಿನ ಚಾಂಗಲೇರಾದ ವೀರಭದ್ರೇಶ್ವರ ದೇಗುಲದ ಜಾತ್ರೆ ಅಂಗವಾಗಿ ಮಂಗಳವಾರ ಅಗ್ನಿ ಪೂಜೆ ಮಾಡಲಾಯಿತು.

ದೇವರ ವಿಗ್ರಹ ಮೆರವಣಿಗೆ ಮೂಲಕ ಅಗ್ನಿಕುಂಡಕ್ಕೆ ತರುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು. ಗುರುಲಿಂಗ ಶಿವಾಚಾರ್ಯರು ಚಂದನ ಕಟ್ಟಿಗೆ ಮತ್ತು ತುಪ್ಪದಿಂದ ಅಗ್ನಿ ಹೊತ್ತಿಸಿದರು. ಈ ವೇಳೆ ನೆರೆದಿದ್ದ ಭಕ್ತರು ‘ವೀರಭದ್ರೇಶ್ವರ ಮಹಾರಾಜ ಕೀ ಜೈ’, ‘ಹರಹರ ಮಹಾದೇವ’ ಎಂದು ಘೋಷಣೆ ಕೂಗುತ್ತ ಅಗ್ನಿ ಕುಂಡ ಸುತ್ತು ಹಾಕಿದರು. ಪಕ್ಕದಲ್ಲಿದ್ದ ನಂದಿ ಬಸವಣ್ಣನಿಗೆ ನೈವೇದ್ಯ ಅರ್ಪಿಸಿದರು.

ಜಾತ್ರೆ ಅಂಗವಾಗಿ ಇಡೀ ದೇಗುಲಕ್ಕೆ ಹಾಗೂ ಮಹಾದ್ವಾರಕ್ಕೆ ದೀಪಾಲಂಕಾರ ಮಾಡಲಾಗಿತ್ತು. ವೀರಭದ್ರೇಶ್ವರ ದೇವಸ್ಥಾನ ಮತ್ತು ಸುತ್ತಲೂ ತಳಿರು ತೋರಣಗಳಿಂದ ಅಲಂಕರಿಸಲಾಗಿದೆ.

ADVERTISEMENT

ಸಹಸ್ರಾರು ಭಕ್ತರು ಅಗ್ನಿ ದೇವತೆಗೆ ಪೂಜೆ ಸಲ್ಲಿಸಿದರು. ನಂತರ ಕಾಯಿ–ಕರ್ಪೂರ, ಪುಷ್ಪಮಾಲೆ ಹಿಡಿದುಕೊಂಡು ಸರತಿಯಲ್ಲಿ ನಿಂತು ದೇಗುಲ ಪ್ರವೇಶಿಸಿ ದೇವರ ದರ್ಶನ ಮಾಡಿದರು.

ರಥೋತ್ಸವ ನಾಳೆ
ಬುಧವಾರ (ನ.29) ಬೆಳಿಗ್ಗೆ 4ಕ್ಕೆ ಪುರವಂತರ ಸೇವೆ ವೀರಗಾಸೆ ನಂದಿಕೋಲು ಸೇವೆ ಹಾಗೂ ದೇವರ ಬೆಳ್ಳಿ ಪಲ್ಲಕ್ಕಿ ಹಾಗೂ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ. ಭಕ್ತರು ಅಗ್ನಿ ಪ್ರವೇಶ ಮಾಡುವರು. ಬಳಿಕ ಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ. ರಾತ್ರಿ 9 ಗಂಟೆಯಿಂದ 12 ರವರೆಗೆ ತೇರು ಮೈದಾನದಲ್ಲಿ ರಥೋತ್ಸವ ಜರುಗಲಿದೆ. ನಂತರ ರಾತ್ರಿ ಗೀಗಿ ಪದ ಕಲಗಿ ತುರಾಯಿ ಕಾರ್ಯಕ್ರಮಗಳು ಜರುಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.