ಬೀದರ್: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಬೀದರ್ ನಗರದಿಂದ ಬಸವಕಲ್ಯಾಣದ ವರೆಗೆ ಮಂಗಳವಾರ ಸೈಕಲ್ ರ್‍ಯಾಲಿ ನಡೆಯಿತು.
ಬೆಳಿಗ್ಗೆ 6 ಗಂಟೆಗೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸೈಕಲ್ ರ್‍ಯಾಲಿಗೆ ಸಾಂಕೇತಿಕ ಚಾಲನೆ ನೀಡಿದರು. ಬೆಳಕು ಹರಿಯುವ ಹೊತ್ತಿನಲ್ಲಿ ವಾಯು ಪಡೆ ತರಬೇತಿ ಕೇಂದ್ರದ ಸಿಬ್ಬಂದಿ, ಬಿ ಟ್ರ್ಯಾಕ್, ಟೀಮ್ ಯುವಾ ತಂಡದ ಯುವಕರು ಸೇರಿ ಒಟ್ಟು 35 ಸೈಕ್ಲಿಸ್ಟ್‌ಗಳು ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು. ಮಾರ್ಗ ಮಧ್ಯದಲ್ಲಿ ಬೇಮಳಖೇಡ, ಭಾಲ್ಕಿಯ ಯುವಕರೂ ಸೇರಿಕೊಂಡರು.
ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೊನ್ನಿಕೇರಿ ಕ್ರಾಸ್ ವರೆಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ಭಾಲ್ಕಿ ವರೆಗೆ ಸೈಕಲ್ ಓಡಿಸಿದರೆ, ಬೀದರ್ ಉಪ ವಿಭಾಗಾಧಿಕಾರಿ ಮಹಮ್ಮದ್ ನಯೀಮ್ ಮೋಮಿನ್ ಅವರು ಉತ್ಸಾಹದಿಂದ ಪೂರ್ತಿ 90 ಕಿ.ಮೀ ಸೈಕಲ್ ಚಲಾಯಿಸಿ ಗಮನ ಸೆಳೆದರು.
ಬಸವಕಲ್ಯಾಣ ಉಪ ವಿಭಾಗಾಧಿಕಾರಿ ರಮೇಶ ತಲ್ಲೂರ, ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಚಂದ್ರಾ ನಾಯಕ, ಕೇದಾರನಾಥ, ರಾಜ್ಯ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಬೇಬಿ ಬೊಂಗಾ, ಬ್ರಹ್ಮಾನಂದ ರೆಡ್ಡಿ, ಅಭಿಷೇಕ ಚಿಂತಾಮಣಿ, ಟೀಮ್ ಯುವಾ ಸಂಚಾಲಕ ವಿನಯ ಮಾಳಗೆ ಪಾಲ್ಗೊಂಡಿದ್ದರು.
ಶಾಲಾ, ಕಾಲೇಜುಗಳಲ್ಲಿ ಸೆಮಿಸ್ಟರ್, ಅರ್ಧ ವಾರ್ಷಿಕ ಪರೀಕ್ಷೆಗಳು ನಡೆಯುತ್ತಿರುವ ಕಾರಣ ವಿದ್ಯಾರ್ಥಿಗಳ ಪಾಲ್ಗೊಂಡಿರಲಿಲ್ಲ. ನಗರದ ಬರೀದ್‌ಶಾಹಿ ಉದ್ಯಾನದಿಂದ ಚೌಬಾರಾ, ಮಹಮೂದ್ ಗವಾನ ಸ್ಮಾರಕದ ಮಾರ್ಗವಾಗಿ ಬೀದರ್ ಕೋಟೆ ಆವರಣದ ವರೆಗೆ ನಡೆಸಲು ಉದ್ದೇಶಿಸಿದ್ದ ಸೈಕಲ್ ಜಾಥಾ ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.