ADVERTISEMENT

ಭಾಲ್ಕಿ | ಚೆಂಡು ಹೂವು ಬೆಳೆದು ₹1.5 ಲಕ್ಷ ಗಳಿಸಿದ ರೈತ

ಕೃಷಿಯಲ್ಲಿನ ನಷ್ಟ ತಪ್ಪಿಸಲು ಬಹುಬೆಳೆ ಪದ್ಧತಿ ಅಳವಡಿಕೆ, 60 ದಿನಗಳಲ್ಲಿ ಲಾಭ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 4:29 IST
Last Updated 26 ನವೆಂಬರ್ 2024, 4:29 IST
<div class="paragraphs"><p>ಭಾಲ್ಕಿ ತಾಲ್ಲೂಕಿನ ಧಾರಜವಾಡಿಯ ರೈತ ರತನ ದಿಗಂಬರರಾವ್ ಕರಾಳೆ ಅವರ ಹೊಲದಲ್ಲಿ ಸಮೃದ್ಧವಾಗಿ ಬೆಳೆದಿರುವ ಚೆಂಡು ಹೂವಿನ ಬೆಳೆ</p></div>

ಭಾಲ್ಕಿ ತಾಲ್ಲೂಕಿನ ಧಾರಜವಾಡಿಯ ರೈತ ರತನ ದಿಗಂಬರರಾವ್ ಕರಾಳೆ ಅವರ ಹೊಲದಲ್ಲಿ ಸಮೃದ್ಧವಾಗಿ ಬೆಳೆದಿರುವ ಚೆಂಡು ಹೂವಿನ ಬೆಳೆ

   

ಭಾಲ್ಕಿ: ಕೃಷಿಯಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವವರೇ ಮಧ್ಯೆ ರೈತ ರತನ ದಿಗಂಬರರಾವ್ ಎರಡು ತಿಂಗಳ ಬೆಳೆಯಾದ ಚೆಂಡು ಹೂವಿನ ಬೆಳೆಯನ್ನು ಬೆಳೆದು ಅರವತ್ತು ದಿನಗಳಲ್ಲಿ ನಿವ್ವಳ ಒಂದೂವರೆ ಲಕ್ಷ ಆದಾಯ ಗಳಿಸಿದ್ದಾರೆ.

ತಾಲ್ಲೂಕಿನ ಧಾರಜವಾಡಿ ಗ್ರಾಮದವರಾದ ರತನ ಅವರು ಕೃಷಿಯನ್ನು ಲಾಭದಾಯಕವಾಗಿಸಲು ಬಹುಬೆಳೆ ಪದ್ಧತಿ ಅಳವಡಿಸಿಕೊಂಡಿದ್ದಾರೆ. ನನಗಿರುವ ಐದು ಎಕರೆ ಜಮೀನಿನ ಒಂದು ಎಕರೆ ಭೂಮಿಯಲ್ಲಿ ಆಗಸ್ಟ್ ತಿಂಗಳ ಮೂರನೇ ವಾರದಲ್ಲಿ ಸುಮಾರು ಐದು ಸಾವಿರ ಚೆಂಡು ಹೂವಿನ ಸಸಿಗಳನ್ನು ನಾಟಿ ಮಾಡಲಾಗಿತ್ತು. ಕೊಳವೆ ಬಾವಿಯಲ್ಲಿರುವ 2 ಇಂಚು ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದೇನೆ. ಈ ಪದ್ಧತಿ ಮೂಲಕ ಹೂವಿನ ಬೆಳೆಗಳಿಗೆ ನೀರುಣಿಸಿ ಕೆಂಪು, ಹಳದಿ ಬಣ್ಣಗಳ ಚೆಂಡು ಬೆಳೆದಿದ್ದೇನೆ.

ADVERTISEMENT

ಒಂದು ಸಾರಿ ನಾಟಿ ಮಾಡಿದ ಈ ಚೆಂಡು ಹೂವಿನ ಗಿಡಗಳು ಮೂರು ಸಾರಿ ಹೂವುಗಳನ್ನು ನೀಡುತ್ತವೆ. ಈ ಬೆಳೆಗೆ ಹೆಚ್ಚಿನ ಮುತುವರ್ಜಿ, ಲಾಗೋಡಿಯ ಅವಶ್ಯಕತೆ ಇರುವುದಿಲ್ಲ. ಚೆಂಡು ಹೂವಿನ ಸಸಿ ನಾಟಿ ಮಾಡುವುದರಿಂದ ಹಿಡಿದು ಹೂವು ಕೀಳುವವರೆಗೆ ಹೆಚ್ಚೆಂದರೆ ₹50 ಸಾವಿರ ಖರ್ಚು ಮಾಡಿದ್ದೇನೆ. ದಸರಾ ಹಬ್ಬದ ಸಂದರ್ಭದಲ್ಲಿ ಕೆ.ಜಿ.ಗೆ ₹70, ದೀಪಾವಳಿ, ಬಾರಸಿ ಹಬ್ಬದ ಸಂದರ್ಭಗಳಲ್ಲಿ ₹50, ₹40ನಂತೆ ಸುಮಾರು 40ರಿಂದ 45 ಕ್ವಿಂಟಲ್ ಹೂವುಗಳನ್ನು ಪುಣೆ, ಭಾಲ್ಕಿ, ಬೀದರ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದೇನೆ ಎಂದು ಚೆಂಡು ಹೂವಿನ ಲಾಭದ ರಹಸ್ಯವನ್ನು ರೈತ ರತನ ದಿಗಂಬರರಾವ್ ಬಿಚ್ಚಿಟ್ಟರು.

ಸದ್ಯ ಸಮೀಪದ ಭಾಲ್ಕಿ, ಬೀದರ್ ಮಾರುಕಟ್ಟೆಯಲ್ಲಿ ಚಿಲ್ಲರೆ ಮಾರಾಟಕ್ಕೆ ಹೂವುಗಳನ್ನು ಸಾಗಿಸುತ್ತಿದ್ದೇನೆ. ಚೆಂಡು ಹೂವಿನ ಬೆಳೆಯ ನಂತರ ಕಲ್ಲಂಗಡಿ ಬೆಳೆಯುತ್ತೇವೆ. ಇನ್ನು ಒಂದು ಎಕರೆಯಲ್ಲಿ ಶುಂಠಿ ಬೆಳೆದಿದ್ದೇನೆ. ಸದ್ಯ ಮಾರುಕಟ್ಟೆಯಲ್ಲಿ ಕ್ಟಿಂಟಲ್‌ಗೆ ₹6 ಸಾವಿರ ಬೆಲೆ ಇದೆ. ಈ ಬೆಳೆಗೆ 2 ಲಕ್ಷ ಲಾಗೋಡಿ ಹಾಕಿದ್ದೇನೆ. ಈ ಬೆಳೆಯಿಂದ ಕನಿಷ್ಠ ಎರಡರಿಂದ ಮೂರು ಲಕ್ಷ ರೂಪಾಯಿ ನಿವ್ವಳ ಆದಾಯ ಬರುವ ನಿರೀಕ್ಷೆಯಲ್ಲಿದ್ದೇನೆ. ಉಳಿದ ಭೂಮಿಯಲ್ಲಿ ತೊಗರಿ, ಕಡಲೆ ಬೆಳೆ ಹಾಕಿದ್ದೇನೆ. ನಾನು, ನನ್ನ ಹೆಂಡತಿ ಶ್ರಮ ವಹಿಸಿ ದುಡಿಯುತ್ತೇವೆ. ಹಾಗಾಗಿ ಒಕ್ಕಲುತನದಿಂದ ವಾರ್ಷಿಕ ₹5 ಲಕ್ಷ  ಆದಾಯ ಸಂಪಾದಿಸುತ್ತೇವೆ ಎಂದು ರತನ ಹೇಳಿದರು.

ರೈತರು ಆರ್ಥಿಕ ಸದೃಢತೆ ಸಾಧಿಸಲು ಕೇವಲ ಮಳೆಯಾಶ್ರಿತ ಬೆಳೆಗಳನ್ನೇ ಬೆಳೆಯಲು ಮುಂದಾಗದೆ ಬಹು ಬೆಳೆ ಬೇಸಾಯ ಪದ್ಧತಿ ಅಳವಡಿಸಿಕೊಳ್ಳುವುದು ಉತ್ತಮ.
ರತನ ದಿಗಂಬರರಾವ್, ರೈತ
ರತನ ದಿಗಂಬರರಾವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.