ಖಟಕಚಿಂಚೋಳಿ: ಇಲ್ಲಿಯ ರೈತ ವಿಜಯಕುಮಾರ ಸ್ವಾಮಿ ಅವರು ತಮ್ಮ ಒಂದು ಎಕರೆಯಲ್ಲಿ ಬಾಗಲಕೋಟೆಯ ಭಾಗ್ಯ ತಳಿಯ ನುಗ್ಗೆ ಬೆಳೆದಿದ್ದಾರೆ. ಈ ಬೆಳೆ ಪ್ರತಿ ವರ್ಷ ₹ 2 ಲಕ್ಷ ಆದಾಯ ತಂದು ಕೊಡುವ ಮೂಲಕ ಇವರ ಬಾಳನ್ನೇ ಬೆಳಗಿಸಿದೆ.
ಇವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಗಿಡದಿಂದ ಗಿಡಕ್ಕೆ 10 ಅಡಿ ಅಂತರದಂತೆ 500 ನುಗ್ಗೆ ಸಸಿ ನೆಟ್ಟು, ಹನಿ ನೀರಾವರಿ ಅಳವಡಿಸಿದ್ದಾರೆ. ಆರಂಭಿಕವಾಗಿ ಬಾಗಲಕೋಟೆಯಿಂದ ಭಾಗ್ಯ ತಳಿಯ ನುಗ್ಗೆ ಬೀಜವನ್ನು ಕೆ.ಜಿಗೆ ₹ 2 ಸಾವಿರ ದರದಲ್ಲಿ ತಂದು ನಾಟಿ ಮಾಡಿದ್ದಾರೆ.
ನಾಟಿ ಮಾಡಲು ಭೂಮಿ ಹದ, ತಿಪ್ಪೆಗೊಬ್ಬರ ಸೇರಿದಂತೆ ಇನ್ನಿತರ ಖರ್ಚು ವೆಚ್ಚ ಸೇರಿ ಸುಮಾರು ₹10 ಸಾವಿರ ಖರ್ಚು ಮಾಡಿದ್ದಾರೆ. ನಾಟಿ ಮಾಡಿದ ಆರು ತಿಂಗಳ ನಂತರ ಕಟಾವಿಗೆ ಬರುತ್ತದೆ. ಹೀಗೆ ನಾಟಿ ಮಾಡಿದ ನುಗ್ಗೆ ಸತತ ನಾಲ್ಕು ತಿಂಗಳು ಇಳುವರಿ ನೀಡುತ್ತದೆ.
ಸದ್ಯ ಮಾರುಕಟ್ಟೆಯಲ್ಲಿ ನುಗ್ಗೆ ಪ್ರತಿ ಕೆ.ಜಿಗೆ ₹50 ರಿಂದ ₹60 ಕ್ಕೆ ಮಾರಾಟವಾಗುತ್ತಿದೆ. ಇದರಿಂದ ಲಾಭವಾಗುತ್ತದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ನುಗ್ಗೆ ಬೆಲೆಯಲ್ಲಿ ತೀವ್ರ ಕುಸಿತವಾದರೆ ಮಾರಾಟ ಮಾಡದೇ ಹಾಗೇ ಬಿಟ್ಟು ನುಗ್ಗೆ ಬೀಜ ಉತ್ಪಾದನೆ ಮಾಡುತ್ತೇನೆ. ಇದರಿಂದ ನಷ್ಟವಾಗುವುದಿಲ್ಲ ' ಎಂದು ವಿಶ್ವಾಸದ ಮಾತುಗಳನ್ನು ಆಡುತ್ತಾರೆ ರೈತ ವಿಜಯಕುಮಾರ.
ಕಳೆದ ವರ್ಷ ನುಗ್ಗೆ ಬೆಲೆ ಪ್ರತಿ ಕೆಜಿಗೆ ಕೇವಲ ₹ 10 ಕ್ಕೆ ಮಾರಾಟ ಆಗುತ್ತಿತ್ತು. ಆ ಸಮಯದಲ್ಲಿ ಎದೆಗುಂದದೆ ನುಗ್ಗೆ ಬೀಜ ಉತ್ಪಾದನೆ ಮಾಡಲು ಮುಂದಾದೆ. ಆಗ ನುಗ್ಗೆ ಬೀಜ ಪ್ರತಿ ಕೆ.ಜಿಗೆ ₹1500 ರಂತೆ ಮಾರಾಟ ಮಾಡಿ ಲಾಭ ಕಂಡುಕೊಂಡೆ ' ಎಂದು ಸಂತಸ ವ್ಯಕ್ತಪಡಿಸುತ್ತಾರೆ ರೈತ.
ನುಗ್ಗೆ ಬೆಳೆಯ ಸಾಲಿನಲ್ಲಿ ಟೊಮೆಟೊ, ಚವಳೆಕಾಯಿ, ಬೆಂಡೆಕಾಯಿ ಸೇರಿದಂತೆ ವಿವಿಧ ಬಗೆಯ ತರಕಾರಿಗಳನ್ನು ಬೆಳೆಯುತ್ತೇನೆ. ಇದರಿಂದ ದೈನಂದಿನ ಖರ್ಚು ವೆಚ್ಚ ಸಾಗುತ್ತದೆ ಎನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.