ADVERTISEMENT

ಖಟಕಚಿಂಚೋಳಿ: ಪದವೀಧರನ ಕೈ ಹಿಡಿದ ಸಮಗ್ರ ಕೃಷಿ

5 ಎಕರೆ ಜಮೀನಿನಲ್ಲಿ ತರಕಾರಿ, ತೋಟಗಾರಿಕೆ ಬೆಳೆ

ಗಿರಿರಾಜ ಎಸ್ ವಾಲೆ
Published 18 ಜುಲೈ 2024, 5:33 IST
Last Updated 18 ಜುಲೈ 2024, 5:33 IST
ಖಟಕಚಿಂಚೋಳಿ ಹೋಬಳಿಯ ಚಳಕಾಪುರ ಗ್ರಾಮದ ರೈತ ಅಶೋಕ ಸಂಗೋಳಗೆ ತಮ್ಮ ಹೊಲದಲ್ಲಿ ಬೆಳೆದ ಮಾವಿನ ಗಿಡ
ಖಟಕಚಿಂಚೋಳಿ ಹೋಬಳಿಯ ಚಳಕಾಪುರ ಗ್ರಾಮದ ರೈತ ಅಶೋಕ ಸಂಗೋಳಗೆ ತಮ್ಮ ಹೊಲದಲ್ಲಿ ಬೆಳೆದ ಮಾವಿನ ಗಿಡ   

ಖಟಕಚಿಂಚೋಳಿ: ಸಮೀಪದ ಚಳಕಾಪುರ ಗ್ರಾಮದ ಪದವೀಧರ ಯುವ ರೈತ ಅಶೋಕ ಸಂಗೋಳಗೆ ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡ ಸಮಗ್ರ ಕೃಷಿ ಪದ್ಧತಿ ಅವರ ಆದಾಯ ಹೆಚ್ಚಿಸಿದೆ.

ತಮ್ಮ ಐದು ಎಕರೆ ಜಮೀನಿನಲ್ಲಿ ಒಂದೂವರೆ ಎಕರೆಯಲ್ಲಿ 500 ಮಹಾಗನಿ ಗಿಡ, 500 ಮಾವಿನ ಗಿಡ, 400 ಜಾಪಳ, ನಿಂಬೆಹಣ್ಣು, ನುಗ್ಗೆಕಾಯಿ, ಟೊಮೆಟೊ, ಮೆಣಸಿನಕಾಯಿ ಸೇರಿದಂತೆ ಇನ್ನಿತರ ತೋಟಗಾರಿಕೆ ಬೆಳೆಗಳನ್ನು ಬೆಳೆದಿದ್ದಾರೆ.

ಗಿಡಗಳಿಗೆ ಸಮಯಕ್ಕೆ ಸರಿಯಾಗಿ ನೀರು ಹಾಯಿಸುವುದು, ಕಳೆ ತೆಗೆಯುವುದು ಮಾಡಿರುವುದರಿಂದ ಗಿಡಗಳು ಚೆನ್ನಾಗಿ ಬೆಳೆದು ಹೆಚ್ಚಿನ ಇಳುವರಿ ನೀಡುತ್ತಿವೆ. ಉಳಿದ ಪ್ರದೇಶದಲ್ಲಿ ಸಾಂಪ್ರಾದಾಯಿಕ ಬೆಳೆಗಳಾದ ಜೋಳ, ಗೋಧಿ, ಉದ್ದು ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆದು ವರ್ಷಕ್ಕೆ ಖರ್ಚು, ವೆಚ್ಚ ಸೇರಿ ₹5 ಲಕ್ಷದವರೆಗೆ ಆದಾಯ ಪಡೆಯುತ್ತಿದ್ದಾರೆ.

ADVERTISEMENT

ಕಡಿಮೆ ನಿರ್ವಹಣಾ ವೆಚ್ಚ, ಅತಿ ಕಡಿಮೆ ಸಂಖ್ಯೆಯಲ್ಲಿ ಕಾರ್ಮಿಕ ಬಳಕೆ, ಹೆಚ್ಚು ಪ್ರಮಾಣದಲ್ಲಿ ತಿಪ್ಪೆ ಗೊಬ್ಬರ ಉಪಯೋಗಿಸಿ ಮಣ್ಣಿನ ಫಲವತ್ತತೆ ಕಾಪಾಡಿಕೊಂಡಿದ್ದಾರೆ.

ಎರಡು ಎಕರೆಯಲ್ಲಿ 8*6 ಅಡಿ ಅಂತರದ ಸಾಲಿನಲ್ಲಿ ಕಬ್ಬು ಬೆಳೆದಿದ್ದಾರೆ. ಕಬ್ಬಿನ ಸಾಲಿನ ಮಧ್ಯದ ಜಾಗದಲ್ಲಿ ಮೆಣಸಿನಕಾಯಿ, ಪಾಲಕ, ಚವಳಿಕಾಯಿ, ಬೆಂಡೆಕಾಯಿ ಸೇರಿದಂತೆ ವಿವಿಧ ತರಕಾರಿಗಳನ್ನು ಪ್ರತಿ ವರ್ಷ ಬೆಳೆದು ಹಣ ಗಳಿಸುತ್ತಾರೆ.

‘ನಾನು ಮುಂದಿನ ದಿನಗಳಲ್ಲಿ ಕೃಷಿಯೊಂದಿಗೆ ಜಾನುವಾರು ಸಾಕುವ ಆಸೆ ಹೊಂದಿದ್ದೇನೆ. ಹವಾಮಾನ ಏರುಪೇರಿನಿಂದ ಬೆಳೆ ಬೆಳೆಯದ ಸಮಯದಲ್ಲಿ ಜಾನುವಾರುಗಳಿಂದ ಆದಾಯ ಪಡೆಯಬಹುದು’ ಎನ್ನುತ್ತಾರೆ ರೈತ ಅಶೋಕ.

‘ರೈತರು ಜಿಲ್ಲೆಯ ವಾತಾವರಣದ ಮಾಹಿತಿಯನ್ನು ಪಡೆದು ಅದಕ್ಕೆ ಅನುಗುಣವಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆದು ಹೆಚ್ಚಿನ ಇಳುವರಿ ಪಡೆಯಬೇಕು. ಕಡ್ಡಾಯವಾಗಿ ಹೊಲಗಳ ಮಣ್ಣು ಪರೀಕ್ಷೆ ಮಾಡಿಸಬೇಕು. ಇದರಿಂದ ತಮ್ಮ ಭೂಮಿಗೆ ಯಾವ ಪೋಷಕಾಂಶ ಕೊರತೆಯಿದೆ ಅನ್ನುವ ನಿಖರ ಮಾಹಿತಿ ದೊರಕಲಿದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ಮಲ್ಲಿಕಾರ್ಜುನ ನಿಂಗದಳ್ಳಿ ತಿಳಿಸಿದ್ದಾರೆ.

ಖಟಕಚಿಂಚೋಳಿ ಹೋಬಳಿಯ ಚಳಕಾಪುರ ಗ್ರಾಮದ ರೈತ ಅಶೋಕ ಸಂಗೋಳಗೆ ತಮ್ಮ ಹೊಲದಲ್ಲಿ ಬೆಳೆದ ತೋಟಗಾರಿಕೆ ಗಿಡಗಳು
ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಆರ್ಥಿಕ ಸಂಕಷ್ಟದಿಂದ ದೂರವಾಗಬಹುದು
ಅಶೋಕ ಸಂಗೋಳಗೆ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.