ಬಸವಕಲ್ಯಾಣ (ಬೀದರ್): ವಿಶ್ವಬಸವಧರ್ಮ ಟ್ರಸ್ಟ್‌ನಿಂದ ಇಲ್ಲಿನ ಅನುಭವ ಮಂಟಪದ ಪರಿಸರದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ 45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ–2024ಕ್ಕೆ ಶನಿವಾರ ಅದ್ದೂರಿ ಚಾಲನೆ ಸಿಕ್ಕಿತು.
ತ್ರಿಪುರಾಂತ ಕೆರೆ ದಂಡೆಯ ಹಚ್ಚ ಹಸಿರಿನ ಪರಿಸರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರದ ನೂರಾರು ಶರಣ–ಶರಣೆಯರು ಭಾಗವಹಿಸಿ ಮೆರುಗು ತಂದುಕೊಟ್ಟರು.
ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಹಾಗೂ ನಾಡಿನ ಹಲವು ಮಠಾಧೀಶರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 12ನೇ ಶತಮಾನದ ಕಲ್ಯಾಣದ ವೈಭವ ಮತ್ತೆ ಮರುಕಳಿಸಬೇಕು. ಪ್ರಜಾಪ್ರಭುತ್ವದ ಮೊದಲ ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನೂತನ ಅನುಭವ ಮಂಟಪದ ಮೂಲಕ ಬಸವಾದಿ ಶರಣರ ವಿಚಾರಧಾರೆಗಳು ಜಗತ್ತಿಗೆ ತಲುಪಬೇಕು. ಇದರ ಪರಿಸರದಲ್ಲಿ ನೂತನ ವಚನ ವಿಶ್ವವಿದ್ಯಾಲಯ ಸ್ಥಾಪಿಸಿ, ಶರಣರ ವಿಚಾರಕ್ರಾಂತಿಯ ಅಧ್ಯಯನ, ಸಂಶೋಧನೆಗೆ ಪೂರಕ ವಾತಾವರಣ ಸೃಷ್ಟಿಸಬೇಕೆಂದು ಗಣ್ಯರು ಹೇಳಿದರು. ಕೇಂದ್ರ ಸರ್ಕಾರವು ಬಸವ ಜಯಂತಿಯನ್ನು ರಾಷ್ಟ್ರಮಟ್ಟದಲ್ಲಿ ಆಚರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಪೂರ್ವಕವಾದ ಮನವಿಯನ್ನು ಸ್ವಾಮೀಜಿಗಳು ಮಾಡಿದರು. ಅದಕ್ಕೆ ಶರಣರು ಕರತಾಡನದ ಮೂಲಕ ಮುದ್ರೆ ಒತ್ತಿದರೆ, ಅಧಿಕಾರಸ್ಥರು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುವುದಾಗಿ ಎಲ್ಲರೆದುರು ಭರವಸೆ ನೀಡಿದಾಗ ಕರತಾಡನ ಸದ್ದು ಮತ್ತಷ್ಟು ಹೆಚ್ಚಾಯಿತು.
ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಅವರು ಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆ ಮಾಡಿ, ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಸವ ಜಯಂತಿ ರಾಷ್ಟ್ರಮಟ್ಟದಲ್ಲಿ ಆಚರಣೆಗೆ ನನ್ನ ಸಹಮತವಿದೆ. ಆ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವೆ. ಇಷ್ಟೇ ಅಲ್ಲ, ಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂಬ ಕೂಗು ಅರ್ಥಪೂರ್ಣವಾದುದು. ಸಂಬಂಧಿಸಿದವರು ಆ ಕೆಲಸ ಮಾಡಬೇಕು. ಕನ್ನಡ ನಾಡು, ಶರಣರ ನಾಡು. ಕನ್ನಡ ನಾಡಿನ ಹೆಸರು ಶರಣರ ನಾಡಾಗಿ ಪರಿವರ್ತಿಸಿದ ಕೀರ್ತಿ ಶರಣರಿಗೆ ಸಲ್ಲುತ್ತದೆ. ನಾಡಿಗೆ ಬಸವಾದಿ ಶರಣರು ಕೊಟ್ಟ ಕೊಡುಗೆ ಅಷ್ಟಿಷ್ಟಲ್ಲ ಎಂದು ಹೇಳಿದರು.
ಅನುಭವದಿಂದ ಕಲಿಯುವ ಪಾಠ ಸಮಾಜದಲ್ಲಿ ಬೇರೊಂದು ಇಲ್ಲ ಎಂಬುದನ್ನು ಶರಣರು ಸಾಬೀತು ಮಾಡಿ ತೋರಿಸಿದ್ದಾರೆ. ಸಮಾಜಕ್ಕಾಗಿ ವೈಯಕ್ತಿಕವಾದ ಬದುಕನ್ನು ತ್ಯಾಗ ಮಾಡಿ ವರ್ಗರಹಿತ, ವರ್ಣರಹಿತ, ಲಿಂಗರಹಿತ ಸಮಾಜ ನಿರ್ಮಿಸಿದವರು ಶರಣರು. ಹುಟ್ಟಿನಿಂದ ಯಾರೂ ಮೇಲು–ಕೀಳಲ್ಲ ಎಂದು ಪ್ರತಿಪಾದಿಸಿದ್ದರು ಎಂದು ತಿಳಿಸಿದರು.
ಯಾವುದಾದರೂ ನೆಲದಲ್ಲಿ ಧಾರ್ಮಿಕ ಕ್ರಾಂತಿ, ಶೈಕ್ಷಣಿಕ ಕ್ರಾಂತಿ, ಸಾಮಾಜಿಕ ಕ್ರಾಂತಿ, ವರ್ಗ, ವರ್ಣರಹಿತ ಸಮಾಜಕ್ಕಾಗಿ ನಡೆದ ಕ್ರಾಂತಿಯಿದ್ದರೆ ಅದು ಕಲ್ಯಾಣ ಕ್ರಾಂತಿ. ಅದನ್ನು ತಿಳಿಯಬೇಕಾದರೆ ಬಸವಕಲ್ಯಾಣಕ್ಕೆ ಬರಲೇಬೇಕು. ದೇಹವೇ ದೇಗುಲವೆಂದು ಹೇಳಿದವರು ಶರಣರು. ಭೌತಿಕ, ಮನುಷ್ಯ ನಿರ್ಮಿತ ದೇವಸ್ಥಾನದ ಬದಲು ದೇಹವೇ ದೇಗುಲ ಮಾಡಿಕೊಂಡವರು ಶರಣರು. ದೇವಸ್ಥಾನ ಕಟ್ಟಿ ಪೂಜಿಸುವ ಶಕ್ತಿಯಿಲ್ಲ. ಶರೀರವನ್ನೇ ದೇಗುಲವಾಗಿ ಪರಿವರ್ತಿಸಿಕೊಂಡವರು ಶರಣರು. ಶರೀರಕ್ಕೆ ಹೆಚ್ಚಿನ ಆದ್ಯತೆ ಕೊಟ್ಟರು. ಶರೀರಕ್ಕೆ ಅಪಮಾನವಾದರೆ, ಭಗವಂತನಿಗೆ ಅಪಮಾನ ಎಂದು ಬಗೆದರು ಎಂದರು.
ದೇವರನ್ನು ಕಂಡುಕೊಳ್ಳಲು ಅಂಗೈಯಲ್ಲಿ ಲಿಂಗ ಕೊಟ್ಟವರು ಶರಣರು. ಏಕಾಗ್ರತೆ ಮೂಲಕ ಆಂತರಿಕ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದರು. ಪ್ರತಿಯೊಂದು ಜೀವಿಯ ಲೋಕಕಲ್ಯಾಣ ಆಗಬೇಕೆಂದು ಬಯಸಿರು. ಅವರ ಪ್ರತಿಯೊಂದು ಮಾತು ಬೆಲೆ ಕಟ್ಟಲಾರದಂಥದ್ದು ಎಂದು ಹೇಳಿದರು.
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ, ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಗದಗ ತೋಂಟದಾರ್ಯ ಸಂಸ್ಥಾನ ಮಠದ ತೋಂಟದ ಸಿದ್ದರಾಮ ಸ್ವಾಮೀಜಿ, ಇಳಕಲ್ ಗುರುಮಹಾಂತ ಸ್ವಾಮೀಜಿ, ಹಾರಕೂಡ ಹಿರೇಮಠ ಸಂಸ್ಥಾನದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ನೆಲಮಂಗಲದ ಪವಾಡಶ್ರೀ ಬಸವಣ್ಣ ದೇವರ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಶಾಸಕರಾದ ಶರಣು ಸಲಗರ, ಎಂ.ಜಿ. ಮುಳೆ, ಶಶಿಲ್ ಜಿ. ನಮೋಶಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಮುಖಂಡ ವಿಜಯ್ ಸಿಂಗ್ ಹಾಜರಿದ್ದರು.
ಮೇಘಾಲಯದ ರಾಜಭವನ ಮಂದಿರವಿದ್ದಂತೆ. ನಾನು ರಾಜ್ಯಪಾಲನಾಗಿ ಅಲ್ಲಿಗೆ ಹೋದ ನಂತರ ಅಲ್ಲಿ ಮಾಂಸಾಹಾರ ಹಾಗೂ ಮದ್ಯಪಾನ ಸೇವಿಸುವುದನ್ನು ನಿಷೇಧಿಸಿದ್ದೇನೆಸಿ.ಎಚ್. ವಿಜಯಶಂಕರ್, ಮೇಘಾಲಯದ ರಾಜ್ಯಪಾಲ
‘ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾಡುತ್ತಿರುವ ಕಾರ್ಯ ಶ್ಲಾಘನಾರ್ಹವಾದುದು. ಅನಾಥ ಮಕ್ಕಳಿಗೆ ತಂದೆ–ತಾಯಿಯಾಗಿ ಶಿಕ್ಷಣ, ಸಂಸ್ಕಾರ ಕೊಟ್ಟು ಬೆಳೆಸುತ್ತಿದ್ದಾರೆ. ಸಮಾಜಕ್ಕೆ ಅವರ ಕೊಡುಗೆ ಅಪಾರವಾದುದು’ ಎಂದು ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಹೇಳಿದರು.
ಈ ರಾಜ್ಯಕ್ಕೆ ಮಠ ಮಾನ್ಯಗಳ ಕೊಡುಗೆಗೆ ಬೆಲೆ ಕಟ್ಟಲಾಗದು. ಮಠ, ಮಾನ್ಯಗಳು ಕೆಲಸ ಮಾಡಿರದಿದ್ದರೆ ರಾಜ್ಯದಲ್ಲಿ ಇಂದು ನೋಡುತ್ತಿರುವ ಶೈಕ್ಷಣಿಕ ಕ್ರಾಂತಿ ಅರ್ಧ ಕೂಡ ಆಗುತ್ತಿರಲಿಲ್ಲ ಎಂದರು.
‘ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿರುವುದು ಉತ್ತಮ ಕೆಲಸ. ಆದರೆ, ಅದಕ್ಕೆ ಜೀವಂತಿಕೆ ಬರಬೇಕಾದರೆ ಅದರ ಸನಿಹದಲ್ಲೇ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕು’ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಗದಗ ತೋಂಟದಾರ್ಯ ಸಂಸ್ಥಾನ ಮಠದ ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.
ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಅನುಭವ ಮಂಟಪ ಸ್ಥಾವರ. ಅದಕ್ಕೆ ಜೀವಂತಿಕೆ ಬರಬೇಕಾದರೆ ವಚನಗಳ ಚಿಂತನ ಮಂಥನ ಅಗತ್ಯ. ಅದಕ್ಕಾಗಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಸಚಿವ ಈಶ್ವರ ಬಿ. ಖಂಡ್ರೆಯವರು ಪ್ರಯತ್ನಿಸಿದರೆ ಅದು ಖಂಡಿತವಾಗಿಯೂ ಆಗುತ್ತದೆ ಎಂದರು.
ಗದಗ ತೋಂಟದಾರ್ಯ ಸಂಸ್ಥಾನ ಮಠದ ತೋಂಟದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ವಚನಗಳಲ್ಲಿಯೇ ಸಂವಿಧಾನ ಇದೆ. ಜೀವನ ಮೌಲ್ಯಗಳಿವೆ. ಪ್ರಸ್ತುತ ಹಾಗೂ ಭವಿಷ್ಯದಲ್ಲೂ ವಚನಗಳು ಪ್ರಸ್ತುತವಾಗಿವೆ. ಸಾಂಸ್ಕೃತಿಕ ನಾಯಕ ಬಸವಣ್ಣನ ವಿಚಾರಗಳು ಜಗತ್ತಿಗೆ ತಲುಪಬೇಕು. ಆ ನಿಟ್ಟಿನಲ್ಲಿ ಸರ್ಕಾರ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ಹೇಳಿದರು.
ಸ್ವಾಮೀಜಿಗಳ ಮಾತಿಗೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಸಚಿವ ಈಶ್ವರ ಬಿ. ಖಂಡ್ರೆ, ವಚನ ವಿ.ವಿ. ಸ್ಥಾಪನೆ ಸರ್ಕಾರ ಮಾಡಲಿದೆ. ಇದು ದಶಕಗಳ ಕೂಗು. ಅದಕ್ಕೆ ನಮ್ಮ ಸರ್ಕಾರ ಸ್ಪಂದಿಸಲಿದೆ. ಬಸವಕಲ್ಯಾಣ ಧಾರ್ಮಿಕ, ಆಧ್ಯಾತ್ಮಿಕ ಕೇಂದ್ರವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕಾಗಿದೆ ಎಂದು ತಿಳಿಸಿದರು.
ಅನುಭವ ಮಂಟಪ ಉತ್ಸವಕ್ಕೆ ವಿವಿಧ ಕಡೆಗಳಿಂದ ಜನ ಬಂದಿದ್ದರು. ಕೆಲವರು ಪಾದಯಾತ್ರೆ ಮೂಲಕ ಬಂದರೆ, ಕೆಲವರು ಸ್ವಂತ ವಾಹನ, ಖಾಸಗಿ ವಾಹನಗಳಲ್ಲಿ ಬಂದರು. ಉತ್ಸವದ ಮುನ್ನ ದಿನದಿಂದಲೇ ಅನುಭವ ಮಂಟಪದ ಪರಿಸರದಲ್ಲಿ ಸಂಭ್ರಮ ಮನೆ ಮಾಡಿತ್ತು. ಉತ್ಸವದ ಮೊದಲ ದಿನವಾದ ಶನಿವಾರವಂತೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದರು.
ಬೆಳಿಗ್ಗೆ ನಡೆದ ಧ್ವಜಾರೋಹಣ, ಉದ್ಘಾಟನಾ ಸಮಾರಂಭ ಹಾಗೂ ಗೋಷ್ಠಿಗಳಲ್ಲಿ ಭಾಗವಹಿಸಿದರು. ಪ್ರಸಾದ ಸವಿದರು. ವಿವಿಧ ಮಳಿಗೆಗಳಲ್ಲಿ ವಚನ ಪುಸ್ತಕಗಳನ್ನು ಖರೀದಿಸಿದರು. ಇಳಿಸಂಜೆಯಲ್ಲಿ ಶರಣರ ಸ್ಮಾರಕಗಳಿಗೆ ಭೇಟಿ ಕೊಟ್ಟು ಕಣ್ತುಂಬಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.