ಹುಮನಾಬಾದ್: ಪಟ್ಟಣದ ಹೊರವಲಯದ ಬಸವತೀರ್ಥ ಮಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮಿ 2004ರಲ್ಲಿ ಬಸವತೀರ್ಥ ವೀರಭದ್ರೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಜಮೀನು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡಿರುವ ಜಮೀನು ಮತ್ತೆ ದೇವಸ್ಥಾನದ ಹೆಸರಿಗೆ ಆಗಿದೆ ಎಂದು ದೇವಸ್ಥಾನದ ಅಧ್ಯಕ್ಷ ನಾಗೇಶ್ ಕಲ್ಲೂರ್ ತಿಳಿಸಿದರು.
ಪಟ್ಟಣದ ಹೊರವಲಯದ ಬಸವತೀರ್ಥ ವೀರಭದ್ರೇಶ್ವರ ದೇವಾಸ್ಥಾನದ ಹತ್ತಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘2002-03ರಲ್ಲಿ ದೇವಸ್ಥಾನದ ಹೆಸರಿನಲ್ಲಿ ಇದ್ದ ಈ ಜಮೀನು, ರಾಜಕೀಯ ಹಾಗೂ ಅಧಿಕಾರಿಗಳನ್ನು ಬಳಸಿಕೊಂಡು 2004ರಲ್ಲಿ ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದರು. ಈ ಬಗ್ಗೆ 2022-23ರಲ್ಲಿ ಜಿಲ್ಲಾಧಿಕಾರಿ, ಬಸವಕಲ್ಯಾಣ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ನಂತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಐದಾರು ತಿಂಗಳ ಸಮಯ ತೆಗೆದುಕೊಂಡು ಅಕ್ಟೋಬರ್ 4ರಂದು ಬಸವಕಲ್ಯಾಣ ಉಪವಿಭಾಗಾಧಿಕಾರಿ ಆದೇಶದ ಮೇರೆಗೆ ಸರ್ವೇ ನಂ 270ರ 21 ಗುಂಟೆ, 271ರ 04 ಗುಂಟೆ, 272ರ 08 ಗುಂಟೆ ದೇವಸ್ಥಾನದ ಹೆಸರಿಗೆ ವರ್ಗಾವಣೆ ಆಗಿದೆ’ ಎಂದು ಮಾಹಿತಿ ನೀಡಿದರು.
‘ಇದೇ ರೀತಿ ನ್ಯಾಯಾಲಯದ ಆದೇಶ ತಿದ್ದುಪಡಿ ಮಾಡಿ 2018ರಲ್ಲಿ ಕರ್ನಾಟಕ ಸರ್ಕಾರದ ಹೆಸರಿನ ಹುಮನಾಬಾದ್ ಸರ್ವೇ ನಂ. 274, 277, 282 ಹಾಗೂ ಗಡವಂತಿ ಗ್ರಾಮದ 156 ಸರ್ವೇ ಜಮೀನು ಸಹ ಸಿದ್ಧಲಿಂಗ ಸ್ವಾಮಿ ಹೆಸರಿಗೆ ವರ್ಗಾವಣೆಗೊಂಡಿತ್ತು. ಈ ಜಮೀನು ಸಹ ಈಗ ಕರ್ನಾಟಕ ಸರ್ಕಾರದ ಹೆಸರಿಗೆ ಬದಲಾವಣೆಗೊಂಡಿದೆ’ ಎಂದರು.
ಸದಲಾಪುರ ಹಿರೇಮಠ ಸಂಸ್ಥಾನದ ಸಿದ್ಧಲಿಂಗ ಸ್ವಾಮೀಜಿ, ಶಂಕರ್ ಪವಾರ, ಶಂಕರಯ್ಯ ಸ್ವಾಮಿ, ಅನೀಲ ಹಿಂದೊಡ್ಡಿ, ಶೇಷಪ್ಪ ಬಸಗೊಂಡ, ಬಾಬುರಾವ ಪವಾರ, ಕರಬಸಪ್ಪ ಭೀಮಶಟ್ಟಿ, ರಾಜಕುಮಾರ್, ಮಹಾದೇವ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.