ADVERTISEMENT

ಹೆದ್ದಾರಿಯಲ್ಲಿ ಮೊಳಗಿದ ಉಧೋ ಉಧೋ ಜಯಘೋಷ

ಮಹಾರಾಷ್ಟ್ರದ ತುಳಜಾಪುರ ದೇವಿ ದರ್ಶನಕ್ಕೆ ಪಾದಯಾತ್ರೆ ಹೊರಟ ಅಪಾರ ಭಕ್ತರು

ಮಾಣಿಕ ಆರ್ ಭುರೆ
Published 15 ಅಕ್ಟೋಬರ್ 2024, 8:02 IST
Last Updated 15 ಅಕ್ಟೋಬರ್ 2024, 8:02 IST
ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪುರ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಿಂದ ತುಳಜಾಪುರ ದೇವಿ ದರ್ಶನಕ್ಕೆ ಪಾದಯಾತ್ರೆ ಕೈಗೊಂಡಿರುವ ಯುವಕರು
ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪುರ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಿಂದ ತುಳಜಾಪುರ ದೇವಿ ದರ್ಶನಕ್ಕೆ ಪಾದಯಾತ್ರೆ ಕೈಗೊಂಡಿರುವ ಯುವಕರು   

ಬಸವಕಲ್ಯಾಣ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯು ತೆಲಂಗಾಣ, ಆಂಧ್ರ ಮತ್ತು ರಾಜ್ಯದ ಭಕ್ತರು ಕೈಗೊಳ್ಳುವ ಮಹಾರಾಷ್ಟ್ರದ ತುಳಜಾಪುರ ಪಾದಯಾತ್ರೆಯ ಮುಖ್ಯ ಮಾರ್ಗವಾಗಿ ಮಾರ್ಪಟ್ಟಿದೆ. ಕೆಲ ದಿನಗಳಿಂದ ಇಲ್ಲಿಂದ ಅಪಾರ ಭಕ್ತರು ಕಾಲ್ನಡಿಗೆಯಲ್ಲಿ ಹೋಗುತ್ತಿದ್ದು ಎಲ್ಲೆಡೆ 'ಅಂಬಾಬಾಯಿಯ ಉಧೋ ಉಧೋ.’ ತುಳಜಾ ಭವಾನಿ ಮಾತಾ ಕೀ ಜೈ’ ಎಂಬ ಜಯಘೋಷ ಕೇಳಿ ಬರುತ್ತಿದೆ.

ಮಹಾರಾಷ್ಟ್ರದಲ್ಲಿನ ದೇವಸ್ಥಾನಗಳಿಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ತುಳಜಾಭವಾನಿ ಸಹ ಈ ಭಾಗದ ಬಹುತೇಕರ ಮನೆ ದೇವತೆ. ಮನೆಯಲ್ಲಿ ಮದುವೆ ಇತ್ಯಾದಿ ಕಾರ್ಯಕ್ರಮವಿದ್ದರೆ ಮೊದಲು ಈ ದೇವಸ್ಥಾನದಲ್ಲಿ ಹರಕೆ ತೀರಿಸುವುದು ವಾಡಿಕೆ. ದಸರಾ ಹಬ್ಬಕ್ಕೂ ದೇವಿ ದರ್ಶನ ಪಡೆದುಕೊಳ್ಳುತ್ತಾರೆ. ಆದರೂ ಈ ಸಂದರ್ಭದಲ್ಲಿ ಕಾಲ್ನಡಿಗೆ ಮೂಲಕ ಹೋಗುವವರ ಸಂಖ್ಯೆ ಅಧಿಕವಿರುತ್ತದೆ. ವಿಜಯದಶಮಿಯ ದಿನದಿಂದ ಭಕ್ತರು ಗುಂಪುಗುಂಪಾಗಿ ಹೋಗುವುದು ಆರಂಭವಾಗಿದ್ದು ಹುಣ್ಣಿಮೆಯ ದಿನದ ದರ್ಶನ ಪಡೆದು ಹಿಂದಿರುಗುತ್ತಾರೆ.

ಬೀದರ್, ಭಾಲ್ಕಿಯ ಭಕ್ತರು ಹುಲಸೂರ ಮತ್ತು ನಿಲಂಗಾ ಮೂಲಕ ಸಾಗುತ್ತಿದ್ದರೆ, ತೆಲಂಗಾಣ, ಆಂಧ್ರ ಮತ್ತು ಕಲಬುರಗಿ ವಿಭಾಗದ ಜಿಲ್ಲೆಗಳ ಭಕ್ತರು ಹುಮನಾಬಾದ್, ಬಸವಕಲ್ಯಾಣ, ಉಮರ್ಗಾದಿಂದ ಹಾದು ಹೋಗುವ ಹೆದ್ದಾರಿಯಿಂದ ಸಾಲು ಸಾಲಾಗಿ ಹೋಗುತ್ತಿರುವುದು ಕಂಡು ಬರುತ್ತಿದೆ. ಮಹಿಳೆ ಮಕ್ಕಳಾದಿಯಾಗಿ ಅನೇಕರು ಬರಿಗಾಲಲ್ಲಿ ನಡೆಯುವವರೇ ಹೆಚ್ಚಾಗಿದ್ದಾರೆ. ರಾಜಕೀಯ ಮುಖಂಡರು, ಅಧಿಕಾರಿಗಳು ಸಹ ಪಾದಯಾತ್ರೆಯಲ್ಲಿ ಕಂಡರು.

ADVERTISEMENT

‘ಸಂಘ ಸಂಸ್ಥೆಯವರು, ವ್ಯಾಪಾರಿಗಳು ಒಂದು ಕಿ.ಮೀ ಗೆ ಒಂದರಂತೆ ಅನ್ನ ದಾಸೋಹದ ಕೇಂದ್ರಗಳನ್ನು ಆರಂಭಿಸಿದ್ದಾರೆ. ತರಮೂಡ ಹತ್ತಿರದಲ್ಲಿ 21 ಜನ ಗೆಳೆಯರ ಬಳಗದಿಂದ 25 ವರ್ಷಗಳಿಂದ ಅನ್ನ ದಾಸೋಹ ನಡೆಸಲಾಗುತ್ತಿದೆ’ ಎಂದು ಬಳಗದ ಚಂದ್ರಶೇಖರ ಸ್ವಾಮಿ ಮತ್ತು ಶಿವರಾಜ ಬಾಲಿಕಿಲೆ ತಿಳಿಸಿದ್ದಾರೆ.

‘ಅಲ್ಲಲ್ಲಿ ಹಣ್ಣು, ನೀರಿನ ಬಾಟಲ್, ಬಿಸ್ಕಿಟ್ ಸಹ ವಿತರಿಸಲಾಗುತ್ತಿದೆ. ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‌ನಿಂದಲೂ ಉಮಾಪುರ ಹತ್ತಿರ ಎರಡು ದಿನಗಳಿಂದ ಉಪಾಹಾರ ಮತ್ತು ಊಟದ ವ್ಯವಸ್ಥೆ ಕೈಗೊಳ್ಳಲಾಗಿದೆ’ ಎಂದು ಪರಿಷತ್ತಿನ ಪ್ರಮುಖರಾದ ರವಿ ನಾವದ್ಗೇಕರ್ ಮತ್ತು ಶ್ರೀನಿವಾಸ ಬಿರಾದಾರ ತಿಳಿಸಿದ್ದಾರೆ.

ಕಾಲ್ನಡಿಗೆಯಲ್ಲಿ ಹೋಗುತ್ತಿದ್ದ ಬಸವಕಲ್ಯಾಣದ ಶಿಕ್ಷಕ ಬಾಲಕೃಷ್ಣ ಪಾಟೀಲ ಮತ್ತು ಅಶ್ವಿನ ಅವರು ಮಾತನಾಡಿ,‘ಎಂಟು ವರ್ಷಗಳಿಂದ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದೇವೆ. ತುಳಜಾಭವಾನಿ ಮನೆ ದೇವರಾಗಿದ್ದರಿಂದ ಸಂಪ್ರದಾಯದ ಪಾಲನೆಗಾಗಿ ಹೋಗುತ್ತಿದ್ದೇವೆ. ಮನಸ್ಸಿಗೆ ಶಾಂತಿ, ನೆಮ್ಮದಿಯೂ ದೊರಕುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.