ಬೀದರ್: ಅಂತರ್ಜಲ ಮರುಪೂರಣಕ್ಕಾಗಿ ಬೀದರ್ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಕೆಲಸವಾಗಿದೆ.
ಹಳೆಯ ಕೆರೆಗಳಲ್ಲಿ ತುಂಬಿಕೊಂಡಿದ್ದ ಹೂಳು ತೆಗೆದು ಅಭಿವೃದ್ಧಿ ಪಡಿಸಿರುವುದಲ್ಲದೇ ಹೊಸ ಸರೋವರಗಳನ್ನು ನಿರ್ಮಿಸಿರುವುದರಿಂದ ದೊಡ್ಡ ಬದಲಾವಣೆಯ ಸೂಚನೆಗಳು ಸಿಗಲಾರಂಭಿಸಿವೆ.
ದೇಶದ 75ನೇ ಸ್ವಾತಂತ್ರ್ಯ ಉತ್ಸವದ ಅಂಗವಾಗಿ ಕೇಂದ್ರ ಸರ್ಕಾರವು ಪ್ರತಿ ಜಿಲ್ಲೆಯಲ್ಲಿ 75 ಹೊಸ ‘ಅಮೃತ ಸರೋವರ’ಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿತು. ಅದರಲ್ಲಿ ಬೀದರ್ ಜಿಲ್ಲೆ ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಿನ ಸಾಧನೆ ಮಾಡಿದೆ. ಗುರಿಗಿಂತ ಅಧಿಕ ಸಾಧನೆ ಜಿಲ್ಲೆಯಲ್ಲಾಗಿದೆ. ಇಡೀ ಜಿಲ್ಲೆಯಲ್ಲಿ 110 ಹೊಸ ‘ಅಮೃತ ಸರೋವರ’ಗಳು ನಿರ್ಮಾಣಗೊಂಡಿದ್ದು, ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ಬಹುತೇಕ ಸರೋವರಗಳು ತುಂಬಿ ತುಳುಕುತ್ತಿವೆ.
ಇನ್ನು, ಸಣ್ಣ ನೀರಾವರಿ ಇಲಾಖೆಗೆ ಸೇರಿದ 90 ಕೆರೆಗಳು ಹಾಗೂ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವ 19 ದೊಡ್ಡ ಕೆರೆಗಳ ಹೂಳು ಕೂಡ ತೆಗೆಯಲಾಗಿದೆ. ಅವುಗಳು ಕೂಡ ತುಂಬಿಕೊಂಡಿವೆ. ಹೆಚ್ಚಿನ ಕೆರೆಗಳನ್ನು ‘ನರೇಗಾ’ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗಿದೆ. ಹೋದ ವರ್ಷದ ಬೇಸಿಗೆಯಲ್ಲಿಯೇ ಕೆಲಸ ಕೈಗೆತ್ತಿಕೊಂಡು, ಮಳೆಗಾಲಕ್ಕೂ ಮುನ್ನವೇ ಮುಗಿಸಿದ್ದರಿಂದ ಅದರ ಫಲ ಈ ವರ್ಷದ ಮಳೆಗಾಲದ ನಂತರ ನೋಡುವಂತಾಗಿದೆ.
‘ನರೇಗಾ’ ಯೋಜನೆಯಡಿ ಕೆಲಸ ಕೈಗೆತ್ತಿಕೊಂಡಿದ್ದರಿಂದ ಸಾವಿರಾರು ದುಡಿಯುವ ಕೈಗಳಿಗೆ ಕೆಲಸ ಸಿಕ್ಕಿತು. ಬೀದರ್ ತಾಲ್ಲೂಕುವೊಂದರಲ್ಲೇ ಸರಿಸುಮಾರು 17,500ಕ್ಕೂ ಹೆಚ್ಚು ಜನರು ನರೇಗಾ ಅಡಿ ಕೆಲಸ ಮಾಡಿದ್ದಾರೆ. ಇಡೀ ಜಿಲ್ಲೆಯಲ್ಲಿ ಈ ಸಂಖ್ಯೆ ಸಾಕಷ್ಟಿದೆ. ಇದರ ಪರಿಣಾಮದಿಂದ ವಲಸೆ ಪ್ರಮಾಣ ಕೂಡ ಸಾಕಷ್ಟು ಪ್ರಮಾಣದಲ್ಲಿ ತಗ್ಗಿತು ಎಂದು ಜಿಲ್ಲಾ ಪಂಚಾಯಿತಿ ಮೂಲಗಳು ತಿಳಿಸಿವೆ. ‘ನರೇಗಾ’ ಕಾಮಗಾರಿಗಳಲ್ಲಿಯೇ ಹೆಚ್ಚಿನವರು ತೊಡಗಿಸಿಕೊಂಡಿದ್ದರಿಂದ ಖಾಸಗಿಗಳಲ್ಲಿ ಕಾರ್ಮಿಕರ ಕೊರತೆ ಉಂಟಾಯಿತು. ಇದರಿಂದ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಯಿತು. ಇಷ್ಟೇ ಅಲ್ಲ, ಅವರ ಕೂಲಿಯಲ್ಲೂ ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ.
ಅಂತರ್ಜಲ ಹೆಚ್ಚಳ– ಹೆಚ್ಚಾಗಲಿದೆ ಹಸಿರು: ಕೆರೆಗಳು ಮೈದುಂಬಿಕೊಂಡಿರುವುದರಿಂದ ಅಂತರ್ಜಲದ ಮೇಲೂ ಪರಿಣಾಮ ಬೀರಿದೆ. ಈಗಾಗಲೇ ಅದರ ಸೂಚನೆಗಳು ಸಿಗಲಾರಂಭಿಸಿವೆ. ಜಿಲ್ಲೆಯ ಹಲವೆಡೆ ಕೊಳವೆಬಾವಿಗಳು ಬತ್ತಿ ಹೋಗಿದ್ದವು. ಎಲ್ಲೆಲ್ಲಿ ಹೂಳು ತೆಗೆದು, ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆಯೋ ಆ ಕೆರೆಗಳಲ್ಲಿ ಮಳೆ ನೀರು ಸಂಗ್ರಹವಾಗಿ, ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗಿದೆ.
ಇನ್ನು, ಹೊಸದಾಗಿ ಅಭಿವೃದ್ಧಿಪಡಿಸಿದ ಹಾಗೂ ಹಳೆಯ ಕೆರೆಗಳು ತುಂಬಿದ ನಂತರ ಅದರ ಸುತ್ತಮುತ್ತ ಸಸಿಗಳನ್ನು ನೆಡಲು ಯೋಜಿಸಲಾಗಿದೆ. ಈಗಾಗಲೇ ಈ ನಿಟ್ಟಿನಲ್ಲಿ ಕೆಲಸ ಆರಂಭವಾಗಿದ್ದು, ಹಸಿರಿನ ಪ್ರಮಾಣವೂ ಬರುವ ದಿನಗಳಲ್ಲಿ ಹೆಚ್ಚಾಗುತ್ತದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು.
ಸೀಬೆ, ಗೋಡಂಬಿ, ಮಾವು ಸೇರಿದಂತೆ ಇತರೆ ಜಾತಿಯ ಸಸಿಗಳನ್ನು ಹೆಚ್ಚಾಗಿ ನೆಡಲಾಗುತ್ತಿದೆ. ಕೆರೆ ಸಮೀಪದ ರೈತರು ಕೂಡ ಈಗ ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ಹೊರಬಂದು ತೋಟಗಾರಿಕೆ ಬೆಳೆಗಳತ್ತ ಒಲವು ತೋರಿಸುತ್ತಿದ್ದಾರೆ. ಕೆರೆಗಳ ಅಭಿವೃದ್ಧಿ ನಂತರ ಚಿತ್ರ ಹೇಗೆ ಬದಲಾಗುತ್ತಿದೆ ಎನ್ನುವುದಕ್ಕೆ ದೊಡ್ಡ ಸಾಕ್ಷಿ ಎಂದು ಹೇಳಿದರು.
ಈ ವರ್ಷ ಜಿಲ್ಲೆಯ ಎಲ್ಲ ಕೆರೆ, ಕಟ್ಟೆಗಳು ತುಂಬಿರುವುದರಿಂದ ಬೇಸಿಗೆಯಲ್ಲಿ ಅಂತರ್ಜಲದ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುವುದಿಲ್ಲ. ಪಶು–ಪಕ್ಷಿಗಳಿಗೂ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಇದರಿಂದ ಸ್ವಲ್ಪ ಪ್ರಮಾಣದಲ್ಲಾದರೂ ಉಷ್ಣ ತಗ್ಗಿ, ಬೇಸಿಗೆಯಲ್ಲಿ ಬಿಸಿಲು ಕೂಡ ಸ್ವಲ್ಪ ತಗ್ಗುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಹೆಚ್ಚಿನ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರ ಪರಿಣಾಮ ಅಂತರ್ಜಲ ಹೆಚ್ಚಾಗಿದೆ
–ಡಾ. ಗಿರೀಶ ಬದೋಲೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯಿತಿ
ಬೀದರ್ ತಾಲ್ಲೂಕು ಒಂದರಲ್ಲೇ 17 ಕೆರೆಗಳ ಹೂಳು ತೆಗೆದು ಅಭಿವೃದ್ಧಿಗೊಳಿಸಲಾಗಿದೆ. ಈಗ ಅವುಗಳೆಲ್ಲ ನೀರಿನಿಂದ ನಳನಳಿಸುತ್ತಿವೆ
–ಕಿರಣ ಪಾಟೀಲ ಕಾರ್ಯನಿರ್ವಾಹಕ ಅಧಿಕಾರಿ ಬೀದರ್ ತಾಲ್ಲೂಕು ಪಂಚಾಯಿತಿ
ಯಾವ್ಯಾವ ಕೆರೆ? ಎಷ್ಟು ಅಭಿವೃದ್ಧಿ? 110 ಅಮೃತ ಸರೋವರ 90 ಸಣ್ಣ ಕೆರೆಗಳು 19 ದೊಡ್ಡ ಕೆರೆಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.