ಬಸವಕಲ್ಯಾಣ: ನಗರದ ಐತಿಹಾಸಿಕ ಕೋಟೆಯ ಮೇಲೆ ಹಾರಾಡುತ್ತಿರುವ ರಾಷ್ಟ್ರ ಧ್ವಜದ ಅಂಚು ಹರಿದಿದ್ದರೂ ನೋಡುವವರಿಲ್ಲ.
ನೂರು ಅಡಿ ಎತ್ತರದ ಕಂಬಕ್ಕೆ ಕಟ್ಟಿರುವ ಧ್ವಜ ಹರಿದಿರುವುದನ್ನು ಕೋಟೆ ವೀಕ್ಷಣೆಗೆ ಬಂದಿರುವ ಹಲವಾರು ಪ್ರವಾಸಿಗರು ನೋಡಿದ್ದಾರೆ. ಸಂಬಂಧಿತರಿಗೂ ವಿಷಯ ತಿಳಿಸಿದ್ದಾರೆ ಎನ್ನಲಾಗಿದೆ. ಆದರೂ ಅದನ್ನು ಸೋಮವಾರ ಸಂಜೆಯವರೆಗೂ ತೆಗೆದಿರಲಿಲ್ಲ.
ಹರಿದ ಸ್ಥಿತಿಯಲ್ಲಿ ಅನೇಕ ದಿನಗಳಿಂದ ತ್ರಿವರ್ಣ ಧ್ವಜ ಹಾರಾಡುತ್ತಿದ್ದರೂ ಸಂಬಂಧಿಸಿದವರು ಅದರ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳದಿರುವುದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಎತ್ತರದ ಕಂಬಕ್ಕೆ ಕಟ್ಟಿರುವ ಧ್ವಜ ದೊಡ್ಡದಾಗಿದ್ದು, ಅದು ಬಿರುಗಾಳಿಗೆ ಹರಿದಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಹೈದರಾಬಾದ್‌ನಲ್ಲಿ ಮಾತ್ರ ಅಂಥ ಧ್ವಜಗಳು ಸಿಗುತ್ತವೆ. ಅಲ್ಲಿಂದ ಹೊಸ ಧ್ವಜ ತರಿಸಿ ಕಟ್ಟಲಾಗುವುದು' ಎಂದು ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಆಯುಕ್ತ ಜಗನ್ನಾಥ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.