ಖಟಕಚಿಂಚೋಳಿ: ಸಮೀಪದ ಡಾವರಗಾಂವ್ ಗ್ರಾಮದ ರೈತ ಅಭಿಮನ್ಯು ಪಾಟೀಲ ತಮ್ಮ ಒಂದು ಎಕರೆ ಪ್ರದೇಶದಲ್ಲಿ ಚೆಂಡು ಹೂ ಬೆಳೆದಿದ್ದಾರೆ. ಇದರಿಂದ ಉತ್ತಮ ಆದಾಯ ಲಭಿಸುತ್ತಿದ್ದು, ಒಂದು ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ಸದ್ಯ ಶ್ರಾವಣವಿರುವುದರಿಂದ ಹೂಗಳಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ ರೈತ ಅಭಿಮನ್ಯು ಬೆಳೆದ ಚೆಂಡು ಹೂವಿಗೆ ಭರ್ಜರಿ ಬೆಲೆ ಸಿಕ್ಕಿದೆ. ಹೀಗಾಗಿ ಆದಾಯದ ಪ್ರಮಾಣವು ಹೆಚ್ಚಾಗಿದೆ.
ರಾಖಿ ಹುಣ್ಣಿಮೆ ಹಾಗೂ ಮೂರನೇ ಸೋಮವಾರ ಎರಡು ಒಂದೇ ದಿನ ಬಂದಿರುವುದರಿಂದ ಹೂಗಳು ಪ್ರತಿ ಕೆಜಿಗೆ ₹60 ರಂತೆ ಮಾರಾಟವಾಗಿವೆ. ಇನ್ನೂ ಬೇರೆ ದಿನಗಳಲ್ಲಿ ಕೆಜಿಗೆ ₹40 ರಂತೆ ಮಾರಾಟ ಆಗುತ್ತಿವೆ ಎನ್ನುತ್ತಾರೆ ರೈತ ಅಭಿಮನ್ಯು.
ಒಂದು ಎಕರೆ ಪ್ರದೇಶದಲ್ಲಿ 3*2 ಅಡಿ ಅಂತರದಲ್ಲಿ 7 ಸಾವಿರ ಸಸಿಗಳನ್ನು ನಾಟಿ ಮಾಡಿದ್ದೇನೆ. ಸಸಿ ನಾಟಿ ಮಾಡಲು ಭೂಮಿ ಹದ, ಔಷಧ ಸಿಂಪಡಣೆ ಸೇರಿದಂತೆ ಇನ್ನಿತರ ಖರ್ಚು, ವೆಚ್ಚ ಸೇರಿ ₹25 ಸಾವಿರ ಖರ್ಚಾಗಿದೆ ಎನ್ನುತ್ತಾರೆ ಅವರು.
ಚೆಂಡು ಹೂ ಕೇವಲ 50 ದಿನಗಳಲ್ಲಿ ಕಟಾವಿಗೆ ಬಂದಿದೆ. ಅದಕ್ಕೆ ತಕ್ಕಂತೆ ಬೆಳೆ ಹುಲುಸಾಗಿ ಬೆಳೆದು ನಿಂತಿದೆ. ಪ್ರತಿ ವಾರಕ್ಕೆ 8 ಕ್ವಿಂಟಲ್ ಇಳುವರಿ ಬರುತ್ತಿದೆ. ಅದಕ್ಕೆ ತಕ್ಕಂತೆ ಬೆಲೆಯೂ ಉತ್ತಮವಾಗಿ ಲಭಿಸುತ್ತಿದೆ. ಮುಂದಿನ ದಿನಗಳಲ್ಲಿ ಇದೇ ಬೆಲೆಯಲ್ಲಿ ಮಾರಾಟವಾದರೆ ಸುಮಾರು ₹1 ಲಕ್ಷ ಆದಾಯ ಸಿಗುತ್ತದೆ ಎಂದು ರೈತ ಅಭಿಮನ್ಯು ಸಂತಸ ವ್ಯಕ್ತಪಡಿಸುತ್ತಾರೆ.
ಜಿಲ್ಲೆಯಲ್ಲಿ ಹೂವಿನ ಪ್ರತ್ಯೇಕ ಮಾರುಕಟ್ಟೆ ಇಲ್ಲ. ಇದರಿಂದ ನಾವು ಕಲಬುರಗಿ, ಹೈದರಾಬಾದ್, ಉದಗೀರ ಸೇರಿದಂತೆ ಇನ್ನಿತರ ಪಟ್ಟಣಗಳಿಗೆ ಕಳಿಸುತ್ತಿದ್ದೇವೆ. ಇದರಿಂದ ಸ್ವಲ್ಪ ಆದಾಯದ ಪ್ರಮಾಣ ಕುಸಿಯುತ್ತಿದೆ. ಒಂದು ವೇಳೆ ಜಿಲ್ಲೆಯಲ್ಲಿ ಮಾರುಕಟ್ಟೆ ಪ್ರಾರಂಭವಾದರೆ ರೈತರಿಗೆ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸುತ್ತಾರೆ.
ಮುಂಬರುವ ದಸರಾ ಹಾಗೂ ದೀಪಾವಳಿ ಹಬ್ಬದಲ್ಲಿ ಚೆಂಡು ಅಗತ್ಯಕ್ಕಿಂತ ಹೆಚ್ಚಿಗೆ ಬೇಕಾಗುತ್ತದೆ. ಹೀಗಾಗಿ ಇನ್ನುಳಿದ ಎರಡು ಎಕರೆ ಪ್ರದೇಶದಲ್ಲಿ ಚೆಂಡು ಹೂವಿನ ಸಸಿಗಳನ್ನು ನಾಟಿ ಮಾಡಲು ನಿರ್ಧರಿಸಿದ್ದೇನೆ. ಈಗ ನಾಟಿ ಮಾಡಿದರೆ ಹಬ್ಬದ ಸಮಯದಲ್ಲಿ ಕಟಾವಿಗೆ ಬರುತ್ತದೆ. ಇದರಿಂದ ಮತ್ತೆ ಕೈತುಂಬಾ ಆದಾಯ ಪಡೆಯಬಹುದು ಎನ್ನುವ ಆತ್ಮವಿಶ್ವಾಸದ ಮಾತುಗಳನ್ನಾಡುತ್ತಾರೆ.
ಮಳೆ ಕೊರತೆ ಹಾಗೂ ಹವಾಮಾನದಲ್ಲಿ ಏರುಪೇರಾಗುತ್ತಿರುವುದರಿಂದ ಸಾಂಪ್ರದಾಯಿಕ ಬೆಳೆಗಳಿಂದ ನಷ್ಟವಾಗುತ್ತಿದೆ. ಆದ್ದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ತುಂದುಕೊಡುವ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದೇನೆ.ಅಭಿಮನ್ಯು ಪಾಟೀಲ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.