ADVERTISEMENT

ಔರಾದ್ | ಜೆಜೆಎಂ ಪ್ರಗತಿ ಪರಿಶೀಲನಾ ಸಭೆಗೆ ಗೈರು: 17 ಗುತ್ತಿಗೆದಾರರಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 15:13 IST
Last Updated 23 ಆಗಸ್ಟ್ 2024, 15:13 IST

ಔರಾದ್: ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆ.21ರಂದು ನಡೆದ ಜಲ ಜೀವನ ಮಿಷನ್ (ಜೆಜೆಎಂ) ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಗೆ ಗೈರು ಹಾಜರಾದ 17 ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ.

ಗುತ್ತಿಗೆದಾರರಾದ ರಾಮಚಂದ್ರ ಡಾಕುಳಗಿ, ದೀಪಾಕುಮಾರಿ ಬೀರಪ್ಪ, ಶ್ರೀನಿವಾಸ ಬಿ.ಕರಾಡೆ, ಶಿವರಾಜ ಫುಲೇಕರ್, ಬಂಡೆಪ್ಪ ಕಂಟೆ, ಹರೀಶ್ ವಡೆಯರ್, ಮಾಣಿಕರಾವ ಯಾಬಾ, ಗುರುಸ್ವಾಮಿ, ಜೆಎಂ ಕನ್ಸ್‌ಟ್ರಕ್ಷನ್, ಸುದರ್ಶನ ಬಿರಾದಾರ, ಮಾಲಬಾ ಎಂ. ಉದಾಜಿ, ಕಮಲಾಕರ ಜೆ.ಪಾಟೀಲ, ಸಂಜುಕುಮಾರ ಮಾಶೆಟ್ಟೆ ಪ್ರಕಾಶ ಕೋಟೆ, ಸಂಗಮೇಶ ಕೊಟರ್ಕಿ, ವಿನೋದಕುಮಾರ ವಿ. ಅಪ್ಪೆ, ಅಮೃತಪ್ಪ ಮಾಶೆಟ್ಟೆ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಜಿ.ಪಂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಔರಾದ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

ಆ.21ರಂದು ಶಾಸಕ ಪ್ರಭು ಚವಾಣ್ ಅವರು ಕರೆದ ಪ್ರಗತಿ ಪರಿಶೀಲನಾ ಸಭೆಗೆ ಹಾಜರಾಗಿ ತಮ್ಮ ಅಧೀನದಲ್ಲಿ ನಡೆಯುತ್ತಿರುವ ಜೆಜೆಎಂ ಕಾಮಗಾರಿ ಕುರಿತು ಮಾಹಿತಿ ನೀಡಲು ತಿಳಿಸಲಾಗಿತ್ತು. ಆದರೆ ತಾವು ಸಭೆಗೆ ಗೈರು ಹಾಜರಾಗಿದ್ದು, ನೋಟಿಸ್ ತಲುಪಿದ ಮೂರು ದಿನಗಳಲ್ಲಿ ಉತ್ತರ ನೀಡಬೇಕು ಎಂದು 17 ಗುತ್ತಿಗೆದಾರರಿಗೆ ಅವರು ಸೂಚಿಸಿದ್ದಾರೆ.

ADVERTISEMENT

ಔರಾದ್ ಹಾಗೂ ಕಮಲನಗರ ತಾಲ್ಲೂಕಿನಲ್ಲಿ ಜೆಜೆಎಂ ಕಾಮಗಾರಿ ಸಂಪೂರ್ಣವಾಗಿ ಕಳಪೆ ಗುಣಮಟ್ಟದಿಂದ ಕೂಡಿದೆ. ತಾಲ್ಲೂಕಿನ ಜನ ಛೀಮಾರಿ ಹಾಕುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರೇ ನೇರ ಹೊಣೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಶಾಸಕರು ಸಭೆಯಲ್ಲಿದ್ದ ಜಿ.ಪಂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಲಿಂಗ ಬಿರಾದಾರ ಅವರಿಗೆ ಸೂಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.