ಔರಾದ್: ಇಲ್ಲಿಯ ಆರು ಜನ ಬಾಲ ಪ್ರತಿಭೆಗಳಿಗೆ ಮೊದಲ ಬಾರಿ ಸ್ಯಾಂಡಲ್ ವುಡ್‌ನಲ್ಲಿ ನಟಿಸುವ ಅವಕಾಶ ಸಿಕ್ಕಿರು ವುದು ಪಾಲಕರಲ್ಲಿ ಹಾಗೂ ಜಿಲ್ಲೆಯ ಜನರಲ್ಲಿ ಸಂತಸ ತಂದಿದೆ.
ವಿವೇಕ ಸಜ್ಜನ್ ಅವರ ನಿರ್ದೇಶನದಲ್ಲಿ ತೆರೆ ಕಾಣಲಿರುವ ಜಬರ್ದಸ್ತ್ ಲವ್ವರ್ ಕನ್ನಡ ಸಿನಿಮಾದಲ್ಲಿ ಇಲ್ಲಿಯ ಸ್ವಾಮಿದಾಸ್ ಡಾನ್ಸ್ ಅಕಾಡೆಮಿಯ ಆರು ಜನ ಬಾಲ ಪ್ರತಿಭೆಗಳಿಗೆ ನಟಿಸಲು ಅವಕಾಶ ಸಿಕ್ಕಿದೆ.
ಈ ಚಿತ್ರದಲ್ಲಿ ರೂಪೇಶ್ ಜಿ.ರಾಜ್ ನಾಯಕರಾಗಿ ಮಧುಶ್ರೀ ಹಾಗೂ ಖುಷಿ ನಾಯಕಿಯಾಗಿ ನಟಿಸಿದ್ದಾರೆ. ನಟಿ ಖುಷಿ ಜತೆ ಈ ಬಾಲಕರಿಗೆ ಸಂಭಾಷಣೆ ನಡೆಸಲು ಹಾಗೂ ಹಾಡೊಂದರಲ್ಲಿ ನೃತ್ಯ ಮಾಡಲು ಅವಕಾಶ ಸಿಕ್ಕಿದೆ.
‘ಡಾನ್ಸ್ ಅಕಾಡೆಮಿಯಲ್ಲಿ 40 ಜನ ಬಾಲ ಪ್ರತಿಭೆಗಳು ತರಬೇತಿ ಪಡೆಯುತ್ತಿದ್ದಾರೆ. ಈ ಪೈಕಿ ವಚನಶ್ರೀ ಟಂಕಸಾಲೆ, ಪ್ರಾಪ್ತಿ ಗಿರಣೆ, ಸ್ಪೂರ್ತಿ ಅನೀಲ, ಸಮೃದ್ಧಿ, ಓಂಕಾರ ಸಿಂಗೋಡೆ ಹಾಗೂ ಬಸವಕಿರಣ ಎಂಬ ಪುಟಾಣಿಗಳು ಜಬರ್ದಸ್ತ್ ಲವ್ವರ್ ಚಿತ್ರದಲ್ಲಿ ನಟಿಸಿ ಇಡೀ ಸಿನಿಮಾ ತಯಾರಕ ತಂಡದ ಮೆಚ್ಚುಗೆ ಗಳಿಸಿದ್ದಾರೆ’ ಎಂದು ಕಲಾವಿದ ಸ್ವಾಮಿದಾಸ ಮೇತ್ರೆ ತಿಳಿಸಿದ್ದಾರೆ.
‘ಈ ರೀತಿಯ ಚಿತ್ರಕ್ಕೆ ಬಾಲ ಕಲಾವಿದರ ಅಗತ್ಯವಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ನಾವು ನಮ್ಮ ಅಕಾಡೆಮಿಗೆ ಬರುವವರಿಗೆ ಉತ್ತಮ ತರಬೇತಿ ನೀಡಿದ್ದೇವೆ. ಪಾಲಕರ ಸ್ಪೂರ್ತಿ ಹಾಗೂ ಮಕ್ಕಳ ಆಸಕ್ತಿಯಿಂದಾಗಿ ಅವರಿಗೆ ಸಿನಿಮಾದಲ್ಲಿ ನಟನೆಗೆ ಅವಕಾಶ ಸಿಕ್ಕಿದೆ. ಜತೆಗೆ ನಾನೂ ಈ ಚಿತ್ರದಲ್ಲಿ ಕಲಾವಿದನಾಗಿ ಕೆಲಸ ಮಾಡಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಸನ್ಮಾನ: ಸ್ಯಾಂಡಲ್‌ವುಡ್‌ನಲ್ಲಿ ಮೊದಲ ಬಾರಿ ಅವಕಾಶ ಪಡೆದ ತಾಲ್ಲೂಕಿನ ಆರು ಜನ ಬಾಲ ಪ್ರತಿಭೆಗಳನ್ನು ಪಟ್ಟಣದ ನಾಗರಿಕರ ವೇದಿಕೆ ಸನ್ಮಾನಿಸಿ ಗೌರವಿಸಿದೆ.
ಹಿರಿಯ ವೈದ್ಯ ಕಲ್ಲಪ್ಪ ಉಪ್ಪೆ, ಸಂಪನ್ಮೂಲ ಶಿಕ್ಷಕ ನಾಗನಾಥ ಚಿಟ್ಮೆ, ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಶಿವಕುಮಾರ ಘಾಟೆ, ಕಾಯಕಯೋಗಿ ಟ್ರಸ್ಟ್ ಕಾರ್ಯದರ್ಶಿ ಅನೀಲ ಜಿರೋಬೆ, ಮುಖ್ಯ ಶಿಕ್ಷಕ ಚಂದ್ರಕಾಂತ ನಿರ್ಮಳೆ, ಮಲ್ಲಿಕಾರ್ಜುನ ಟಂಕಸಾಲೆ, ಶಿವಾ ಗಿರಣೆ ಪುಟಾಣಿಗಳ ಸಾಧನೆಯನ್ನು ಕೊಂಡಾಡಿ ಹರಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.