ADVERTISEMENT

ಬೀದರ್‌ | ಕುಸಿದ ಫಲಿತಾಂಶ; ತಗ್ಗಿದ ಪಿಯು ಬೇಡಿಕೆ

ಕಳೆದ ವರ್ಷಕ್ಕೆ ಹೋಲಿಸಿದರೆ ಸರ್ಕಾರಿ ಬಾಲಕ/ಬಾಲಕಿಯರ ಪಿಯು ಕಾಲೇಜಿನಲ್ಲಿ ಪ್ರವೇಶ ಕಡಿಮೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 12 ಜೂನ್ 2024, 6:00 IST
Last Updated 12 ಜೂನ್ 2024, 6:00 IST
ಬೀದರ್‌ನ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಕಾಂಪೌಂಡ್‌ ಕುಸಿದಿರುವುದು
ಬೀದರ್‌ನ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಕಾಂಪೌಂಡ್‌ ಕುಸಿದಿರುವುದು   

ಬೀದರ್‌: ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿದಿರುವ ಕಾರಣ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ನಿಧಾನ ಗತಿಯಲ್ಲಿ ನಡೆಯುತ್ತಿದೆ.

ನಗರದಲ್ಲಿ ಬಾಲಕ ಹಾಗೂ ಬಾಲಕಿಯರ ಪ್ರತ್ಯೇಕವಾದ ಎರಡು ಸರ್ಕಾರಿ ಪಿಯು ಕಾಲೇಜುಗಳಿವೆ. ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಎರಡೂ ಕಾಲೇಜುಗಳಲ್ಲಿ ಈ ವರ್ಷ ಹೇಳಿಕೊಳ್ಳುವಂತಹ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದುವರೆಗೆ ಪ್ರವೇಶ ಪಡೆದಿಲ್ಲ.

ಎರಡೂ ಕಾಲೇಜುಗಳಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಿವೆ. ಸರ್ಕಾರಿ ಬಾಲಕರ ಪಿಯು ಕಾಲೇಜಿನಲ್ಲಿ ಪ್ರತಿ ವರ್ಷ ಸರಾಸರಿ ಪ್ರಥಮ ಪಿಯುಗೆ 110ರಿಂದ 120 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳುತ್ತಾರೆ. ಇಷ್ಟೇ ಸಂಖ್ಯೆಯ ವಿದ್ಯಾರ್ಥಿಗಳು ದ್ವಿತೀಯ ವರ್ಷದಲ್ಲೂ ಮುಂದುವರಿಯುತ್ತಾರೆ. ಆದರೆ, ಈ ವರ್ಷ ಮೊದಲ ವರ್ಷಕ್ಕೆ 40, ದ್ವಿತೀಯ ವರ್ಷಕ್ಕೆ 45 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

ADVERTISEMENT

ಜೂನ್‌ 14ರಂದು ಪ್ರವೇಶಕ್ಕೆ ಕೊನೆಯ ದಿನವಿದೆ. ಇದರ ಬಳಿಕ ದಂಡ ರಹಿತ ಶುಲ್ಕ ಪಾವತಿಗೆ ಕೆಲ ದಿನಗಳವರೆಗೆ ವಿಸ್ತರಿಸಲಾಗುತ್ತದೆ. ಆದರೆ, ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಒಟ್ಟಾರೆ ಆಶಾದಾಯಕವಾದ ಬೆಳವಣಿಗೆಯಿಲ್ಲ. ‘ಬರುವ ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಪ್ರವೇಶ ತೆಗೆದುಕೊಳ್ಳುವ ವಿಶ್ವಾಸ ಇದೆ ಎನ್ನುತ್ತಾರೆ ಕಾಲೇಜಿನ ಪ್ರಾಚಾರ್ಯರು. 13 ಜನ ಉಪನ್ಯಾಸಕರಿದ್ದಾರೆ. ವಾಣಿಜ್ಯಶಾಸ್ತ್ರದ ವಿಷಯಕ್ಕೆ ಅತಿಥಿ ಉಪನ್ಯಾಸಕರನ್ನು ತೆಗೆದುಕೊಳ್ಳಲಾಗಿದೆ.

ಇನ್ನು, ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರತಿ ವರ್ಷ ಪಿಯು ಮೊದಲ ವರ್ಷಕ್ಕೆ 280ರಿಂದ 300ರವರೆಗೆ ವಿದ್ಯಾರ್ಥಿನಿಯರು ಪ್ರವೇಶ ಪಡೆದುಕೊಳ್ಳುತ್ತಾರೆ. ದ್ವಿತೀಯ ವರ್ಷಕ್ಕೂ ಬಹುತೇಕ ಅಷ್ಟೇ ಸಂಖ್ಯೆಯಲ್ಲಿ ಇರುತ್ತಾರೆ. ಆದರೆ, ಈ ವರ್ಷ 108 ವಿದ್ಯಾರ್ಥಿನಿಯರಷ್ಟೇ ಪ್ರವೇಶ ಪಡೆದಿದ್ದಾರೆ. ದ್ವಿತೀಯ ವರ್ಷಕ್ಕೆ 136 ವಿದ್ಯಾರ್ಥಿಗಳ ಪ್ರವೇಶ ಮುಗಿದಿದೆ. ‘ಎಸ್‌ಎಸ್‌ಎಲ್‌ಸಿಗೆ ಪರೀಕ್ಷೆ ಆಗಬೇಕಿದ್ದು, ಅದು ಮುಗಿದು ಫಲಿತಾಂಶ ಬಂದ ನಂತರ ವಿದ್ಯಾರ್ಥಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು’ ಎಂದು ಕಾಲೇಜಿನ ಪ್ರಾಚಾರ್ಯ ವಿಜಯಕುಮಾರ ತೋರಣಾ ‘ಪ್ರಜಾವಾಣಿ’ಗೆ ತಿಳಿಸಿದರು. 14 ಜನ ಉಪನ್ಯಾಸಕರಲ್ಲಿ ಎರಡು ವರ್ಷಗಳಿಂದ ಕಾಮರ್ಸ್‌ ವಿಭಾಗದಲ್ಲಿ ಉಪನ್ಯಾಸಕರೇ ಇಲ್ಲ.

ಮಳೆಗೆ ಹಸಿ ಹಿಡಿಯುವ ಕೊಠಡಿ ಕಾಲೇಜು ಸಮೀಪವೇ ಕಸದ ರಾಶಿ ನಗರದ ಓಲ್ಡ್‌ ಸಿಟಿಯಲ್ಲಿ ಒಂದೇ ಆವರಣದಲ್ಲಿ ಸರ್ಕಾರಿ ಬಾಲಕ/ಬಾಲಕಿಯರ ಪಿಯು ಕಾಲೇಜುಗಳಿವೆ. ಎರಡಕ್ಕೂ ಪ್ರತ್ಯೇಕ ಪ್ರಾಚಾರ್ಯ ಸಿಬ್ಬಂದಿಗಳಿದ್ದಾರೆ. ಇತ್ತೀಚೆಗೆ ಸುರಿದ ಮಳೆಯಿಂದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಕಾಂಪೌಂಡ್‌ ಕುಸಿದು ಬಿದ್ದಿದೆ. ಇನ್ನು ಎರಡೂ ಕಟ್ಟಡಗಳು ಬಹಳ ಹಳೆಯದಾಗಿದ್ದು ಸತತ ಮಳೆ ಬಂದರೆ ಗೋಡೆಗಳೆಲ್ಲ ಹಸಿಯಾಗುತ್ತವೆ. ಕಾಲೇಜಿನ ಕಾಂಪೌಂಡ್‌ಗೆ ಹೊಂದಿಕೊಂಡಂತೆ ಸಾರ್ವಜನಿಕರು ಅಪಾರ ಪ್ರಮಾಣದಲ್ಲಿ ಕಸ ಚೆಲ್ಲುತ್ತಾರೆ. ಇದರಿಂದ ದುರ್ಗಂಧಕ್ಕೆ ಕಾರಣವಾಗಿದೆ. ಬೇರೆ ಕಡೆ ಕಸ ಹಾಕಲು ವ್ಯವಸ್ಥೆ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ತಿಳಿಸಿದರು.

ಬೀದರ್‌ ಜಿಲ್ಲೆಯಲ್ಲಿ ಒಟ್ಟು 24 ಪಿಯು ಕಾಲೇಜುಗಳಿವೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿದಿರುವುದರಿಂದ ಈ ವರ್ಷ ಪ್ರವೇಶ ಪಡೆಯುವವರ ಸಂಖ್ಯೆ ಕಡಿಮೆ ಇದೆ.
ಚಂದ್ರಕಾಂತ ಶಹಬಾದಕರ್‌, ಡಿಡಿಪಿಯು
ರಾಜ್ಯದ ಆದರ್ಶ ಪಿಯು ಕಾಲೇಜುಗಳಲ್ಲಿ ನಮ್ಮ ಕಾಲೇಜು ಕೂಡ ಆಯ್ಕೆಯಾಗಿದೆ. ವಿಜ್ಞಾನದ ಜೊತೆಗೆ ಕಂಪ್ಯೂಟರ್‌ ಸೈನ್ಸ್‌ ಕೂಡ ಹೇಳಿಕೊಡಲಾಗುತ್ತಿದೆ. ಹೊಸ ಲ್ಯಾಬ್‌ ಕೂಡ ಸಿದ್ಧವಾಗಿದೆ.
ಮಲ್ಲಿಕಾರ್ಜುನ ಲದ್ದೆ, ಪ್ರಾಚಾರ್ಯರು, ಸರ್ಕಾರ ಬಾಲಕರ ಪಿಯು ಕಾಲೇಜು, ಬೀದರ್‌
ಮಳೆಯಿಂದಾಗಿ ಇತ್ತೀಚೆಗೆ ಕಾಲೇಜು ಕಾಂಪೌಂಡ್‌ ಕುಸಿದಿದೆ. ವಿದ್ಯಾರ್ಥಿನಿಯರಿಗೆ ಕೊಠಡಿಗಳು ಶೌಚಾಲಯ ಸಮಸ್ಯೆ ಇಲ್ಲ. ಇನ್ನೂ ಕಾಲಾವಕಾಶ ಇರುವುದರಿಂದ ಹೆಚ್ಚಿನ ವಿದ್ಯಾರ್ಥಿನಿಯರು ಪ್ರವೇಶ ಪಡೆಯುವ ವಿಶ್ವಾಸ ಇದೆ.
ವಿಜಯಕುಮಾರ ತೋರಣಾ, ಸರ್ಕಾರಿ ಬಾಲಕಿಯರ ಪಿಯು ಕಾಲೇಜು, ಬೀದರ್‌
ಕಾಲೇಜಿನ ಕಾಂಪೌಂಡ್‌ಗೆ ಹೊಂದಿಕೊಂಡಂತೆ ಕಸದ ರಾಶಿ ಬಿದ್ದಿದ್ದು ದುರ್ಗಂಧಕ್ಕೆ ಕಾರಣವಾಗಿದೆ
ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಸಾಲುಗಟ್ಟಿ ನಿಂತಿರುವುದು ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.