ADVERTISEMENT

ಔರಾದ್: ಚುನಾವಣೆ ಬಹಿಷ್ಕರಿಸಿದರೂ ನೀಗದ ಸಮಸ್ಯೆ

ಕರಕ್ಯಾಳ: ಸೌಕರ್ಯ ಮರೀಚಿಕೆ, ಗ್ರಾ.ಪಂ ಕೇಂದ್ರ ಘೋಷಣೆಗೆ ಒತ್ತಾಯ

ಮನ್ನಥಪ್ಪ ಸ್ವಾಮಿ
Published 24 ನವೆಂಬರ್ 2022, 4:51 IST
Last Updated 24 ನವೆಂಬರ್ 2022, 4:51 IST
ಔರಾದ್ ತಾಲ್ಲೂಕಿನ ಕರಕ್ಯಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡ ಶಿಥಿಲಗೊಂಡಿದೆ
ಔರಾದ್ ತಾಲ್ಲೂಕಿನ ಕರಕ್ಯಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡ ಶಿಥಿಲಗೊಂಡಿದೆ   

ಔರಾದ್: ತಾಲ್ಲೂಕಿನ ಕರಕ್ಯಾಳ ಗ್ರಾಮಸ್ಥರು ಪ್ರತ್ಯೇಕ ಗ್ರಾಮ ಪಂಚಾಯಿತಿ ಸ್ಥಾನಮಾನ ನೀಡುವಂತೆ ಐದನೇ ಬಾರಿ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಿದರೂ ಸಮಸ್ಯೆಗೆ ಮಾತ್ರ ಪರಿಹಾರ ಸಿಕ್ಕಿಲ್ಲ.

ಸುಮಾರು 5 ಸಾವಿರ ಜನಸಂಖ್ಯೆ ಹೊಂದಿರುವ ಊರಿಗೆ ಪ್ರತ್ಯೇಕ ಗ್ರಾಮ ಪಂಚಾಯಿತಿ ಸ್ಥಾನಮಾನ ನೀಡುವಂತೆ ಈ ಗ್ರಾಮಸ್ಥರು ಹಲವು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಅಕ್ಟೋಬರ್‌ನಲ್ಲಿ ನಡೆಯಬೇಕಿದ್ದ ನಾಲ್ಕು ಸದಸ್ಯ ಸ್ಥಾನದ ಚುನಾವಣೆ ಬಹಿಷ್ಕರಿಸಿದ್ದಾರೆ.

ಈ ಹಿಂದೆ ಡಿಸೆಂಬರ್ 2020, ಮಾರ್ಚ್ 2021, ಡಿಸೆಂಬರ್ 2021, ಮೇ 2022ರಲ್ಲಿ ನಿಗದಿಯಾಗಿದ್ದ ಚುನಾವಣೆ ನಡೆಯಲಿಲ್ಲ.

ADVERTISEMENT

ಕರಕ್ಯಾಳ ಗ್ರಾಮ ಮೊದಲು ಬೆಳಕುಣಿ (ಭು) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿತ್ತು. ಆದರೆ ಕಮಲನಗರ ಪ್ರತ್ಯೇಕ ತಾಲ್ಲೂಕು ಆದ ನಂತರ ಬೆಳಕುಣಿಯನ್ನು ಕಮಲನಗರ ತಾಲ್ಲೂಕಿಗೆ ಹಾಗೂ ಕರಕ್ಯಾಳವನ್ನು ಔರಾದ್ ತಾಲ್ಲೂಕಿನ ಎಕಂಬಾ ಗ್ರಾಮ ಪಂಚಾಯಿತಿಗೆ ಸೇರಿಸಲಾಯಿತು. ಇದಕ್ಕೆ ಕರಕ್ಯಾಳ ಗ್ರಾಮಸ್ಥರು ಮೊದಲಿನಿಂದಲೂ ಆಕ್ಷೇಪ ಮಾಡುತ್ತಾ ಬಂದಿದ್ದಾರೆ.

‘ನಮ್ಮದು ಪ್ರತ್ಯೇಕ ಗ್ರಾಮ ಪಂಚಾಯಿತಿ ಎಂದು ಘೋಷಣೆ ಮಾಡುವಂತೆ ನಿರಂತರ ಹೋರಾಟ ಮಾಡುತ್ತಾ ಬಂದಿದ್ದೇವೆ. ಆದರೂ ಸರ್ಕಾರ ಹಾಗೂ ಜನಪ್ರತಿನಿಧಿಗಳು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಗ್ರಾಮದ ಮುಖಂಡ ಸಿದ್ರಾಮ ಕಲಬುರ್ಗೆ ತಿಳಿಸಿದರು.

‘ನಮ್ಮ ಊರಿನಲ್ಲಿ ಐದು ಸಾವಿರ ಜನಸಂಖ್ಯೆ ಇದ್ದರೂ ಒಂದೇ ಕೊಳವೆ ಬಾವಿ ಇದೆ. ಇದರಿಂದ ಕುಡಿಯುವ ನೀರಿಗಾಗಿ ನಿತ್ಯ ಪರದಾಡಬೇಕಿದೆ. 8ನೇ ತರಗತಿವರೆಗೆ ಸರ್ಕಾರಿ ಶಾಲೆ ಇದ್ದರೂ ಸೂಕ್ತ ಕಟ್ಟಡ ವ್ಯವಸ್ಥೆ ಇಲ್ಲ. ಹಳೆ ಕಟ್ಟಡ ಶಿಥಿಲಗೊಂಡಿದೆ. ಮರಾಠಿ ಮಾಧ್ಯಮದ ಶಾಲೆಯಲ್ಲಿ ಪೂರ್ಣಕಾಲಿಕ ಕನ್ನಡ ಶಿಕ್ಷಕರಿಲ್ಲ. ಎಎನ್‍ಎಂ ಕಟ್ಟಡ ಸದ್ಬಳಕೆಯಾಗುತ್ತಿಲ್ಲ. ಸಮರ್ಪಕ ಪಶು ಆಸ್ಪತ್ರೆಯೂ ಇಲ್ಲ’ ಎಂದು ಗ್ರಾಮಸ್ಥರು ಗೋಳು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.