ADVERTISEMENT

ಬೀದರ್‌: ಮತ್ತೆ ಚಿಗುರಿದ ವಿಮಾನಯಾನ ಕನಸು

ಬೀದರ್‌–ಬೆಂಗಳೂರು ನಾಗರಿಕ ವಿಮಾನಯಾನ ಸೇವೆಗೆ ₹13.48 ಕೋಟಿಗೆ ಅನುಮೋದನೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 7 ನವೆಂಬರ್ 2024, 8:00 IST
Last Updated 7 ನವೆಂಬರ್ 2024, 8:00 IST
ಬೀದರ್‌ ವಿಮಾನ ನಿಲ್ದಾಣ
ಬೀದರ್‌ ವಿಮಾನ ನಿಲ್ದಾಣ   

ಬೀದರ್‌: ಬೀದರ್‌–ಬೆಂಗಳೂರು ನಡುವೆ ನಾಗರಿಕ ವಿಮಾನಯಾನ ಸೇವೆ ಪುನರಾರಂಭಗೊಳ್ಳುವ ಕನಸು ಮತ್ತೆ ಚಿಗುರೊಡೆದಿದೆ.

ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯು ಬೀದರ್‌–ಬೆಂಗಳೂರು ನಡುವೆ ವಿಮಾನಯಾನ ಸೇವೆ ಆರಂಭಿಸಲು ಒಂದು ವರ್ಷದ ಅವಧಿಗೆ ₹13.48 ಕೋಟಿ ಅನುದಾನ ಒದಗಿಸಲು ಅನುಮೋದನೆ ನೀಡಿರುವುದೇ ಇದಕ್ಕೆ ಮುಖ್ಯ ಕಾರಣ. ಅಕ್ಟೋಬರ್‌ 28ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಮಾನಯಾನ ಸೇವೆ ಪುನರಾರಂಭಿಸಲು ನಿರ್ಧರಿಸಲಾಗಿತ್ತು. ಅಲ್ಲಿ ನಿರ್ಧಾರ ಕೈಗೊಂಡು ಕಳಿಸಿದ ಪ್ರಸ್ತಾವಕ್ಕೆ ಇಲಾಖೆಯು ಮಂಗಳವಾರ (ನ.5) ಈ ಆದೇಶ ಹೊರಡಿಸಿದೆ. ಇದರಿಂದ ಶೀಘ್ರ ವಿಮಾನ ಹಾರಾಡುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ.

ಇಲಾಖೆಯು ಏಕಮುಖ ಏಕ ಸಂಚಾರಕ್ಕೆ ₹32,450ರಂತೆ ವಾರ್ಷಿಕ ಒಟ್ಟು ₹1.18 ಕೋಟಿ ಮತ್ತು ಶೇ 2ರಷ್ಟು ಅಬಕಾರಿ ಸುಂಕ, ಶೇ 1ರಷ್ಟು ವ್ಯಾಟ್‌ ರಿಯಾಯಿತಿ ಭರಿಸುವುದಕ್ಕೂ ಅನುಮೋದನೆ ನೀಡಿದೆ. ಒಟ್ಟು ಮೊತ್ತದಲ್ಲಿ ಇಲಾಖೆಯು ಶೇ 30ರಷ್ಟು ಹಾಗೂ ಶೇ 70ರಷ್ಟು ಸಹಾಯ ಧನವನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ (ಕೆಕೆಆರ್‌ಡಿಬಿ) ಭರಿಸಲಾಗುತ್ತದೆ. ವಿಮಾನ ಸೇವೆ ಕಾರ್ಯಾಚರಣೆಗೆ ಕೆಎಸ್‌ಐಐಡಿಸಿ ನಿಗಮವು ‘ಘೋಡಾವಟ್‌ ಎಂಟರ್‌ಪ್ರೈಸೆಸ್‌ ಪ್ರೈವೇಟ್‌ ಲಿಮಿಟೆಡ್‌ (ಸ್ಟಾರ್‌ ಏರ್‌ಲೈನ್ಸ್‌) ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಆರ್ಥಿಕ ಇಲಾಖೆಯು ಕೆಟಿಪಿಪಿ ಕಾಯ್ದೆ 1999ರ ಕಲಂ 4(ಜಿ) ಅಡಿ ವಿನಾಯಿತಿ ಕೂಡ ನೀಡಿದೆ.

ADVERTISEMENT

ಪ್ರಯಾಣಿಕರ ಬೇಡಿಕೆಯ ಸಮಯಕ್ಕೆ ತಕ್ಕಂತೆ ವಿಮಾನ ಸಂಚರಿಸದ ಕಾರಣ ಕಂಪನಿಯ ಆದಾಯದಲ್ಲಿ ನಷ್ಟ ಉಂಟಾಗಿ ‘ಸ್ಟಾರ್‌ ಏರ್‌’, ಒಪ್ಪಂದದ ಅವಧಿ ಪೂರ್ಣಗೊಳ್ಳುವುದಕ್ಕೂ ಮುನ್ನವೇ 2023ರ ಡಿಸೆಂಬರ್‌ 26ರಂದು ಬೀದರ್‌–ಬೆಂಗಳೂರು ವಿಮಾನ ಸಂಚಾರ ಸ್ಥಗಿತಗೊಂಡಿತ್ತು. ವಿಮಾನ ಹಾರಾಟದ ಸಮಯ ಬದಲಿಸಿ ವಿಮಾನ ಸಂಚಾರ ಪುನರಾರಂಭಿಸಬೇಕೆಂದು ಬೀದರ್‌ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಸತತವಾಗಿ ಸರ್ಕಾರವನ್ನು ಆಗ್ರಹಿಸುತ್ತಿದ್ದವು. ಅದಕ್ಕೆ ಸರ್ಕಾರ ಕೊನೆಗೂ ಸ್ಪಂದಿಸಿದೆ. ಇದರಿಂದ ಉದ್ಯಮ ವಲಯ ಸಂತಸ ವ್ಯಕ್ತಪಡಿಸಿದೆ.

‘ಉಡಾನ್ ಯೋಜನೆಯಡಿ ನೀಡಲಾಗುತ್ತಿದ್ದ ಸಬ್ಸಿಡಿ ಸ್ಥಗಿತಗೊಳಿಸಿದ್ದರಿಂದ ವಿಮಾನ ಯಾನ ಸೇವೆ ಸ್ಥಗಿತವಾಗಿತ್ತು. ರಾಜ್ಯ ಸರ್ಕಾರವೇ ಸಬ್ಸಿಡಿ ನೀಡಿ ಕರುನಾಡ ಕಿರೀಟ ಬೀದರ್‌ಗೆ ವಿಮಾನ ಸೇವೆ ಕಲ್ಪಿಸಲು ನಿರ್ಧರಿಸಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಜಿಲ್ಲೆಯ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣವಾಗುತ್ತಿದೆ. ಬೀದರ್‌ ನಗರದಲ್ಲಿ ಮಹಮೂದ್‌ ಗಾವಾನ್‌ ಮದರಸಾ, ನರಸಿಂಹ ಝರಣಿ ದೇವಸ್ಥಾನ, ಬಹಮನಿ ಕೋಟೆ, ಕರೇಜ್‌ನಂಥ ಪ್ರಮುಖ ಪ್ರವಾಸಿ ತಾಣಗಳಿವೆ. ಬಿದ್ರಿ ಕಲೆಗೆ ಜಿಲ್ಲೆ ಹೆಸರಾಗಿದೆ. ವಿಮಾನಯಾನ ಸೇವೆಯಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಕಾರಣವಾಗಲಿದೆ ಎಂದೂ ಹೇಳಿದರು.

ಪುನಃ ಸ್ಟಾರ್‌ ಏರ್‌ಲೈನ್ಸ್‌ ತೆಕ್ಕೆಗೆ

ಆರ್ಥಿಕ ನಷ್ಟದ ನೆಪವೊಡ್ಡಿ ಒಪ್ಪಂದದ ಅವಧಿಗೂ ಮೊದಲೇ ಬೀದರ್‌–ಬೆಂಗಳೂರು ವಿಮಾನ ಸೇವೆ ರದ್ದುಗೊಳಿಸಿದ್ದ ‘ಸ್ಟಾರ್‌ ಏರ್‌ಲೈನ್ಸ್‌’ನೊಂದಿಗೆ ಪುನಃ ಒಪ್ಪಂದಕ್ಕೆ ಸರ್ಕಾರ ತೀರ್ಮಾನಿಸಿದೆ.

‘ಈ ಹಿಂದೆ ಸ್ಟಾರ್‌ ಏರ್‌ಲೈನ್ಸ್‌ ಜನರಿಗೆ ಅನುಕೂಲಕರವಲ್ಲದ ಸಮಯಕ್ಕೆ ವಿಮಾನ ಸೇವೆ ಕಲ್ಪಿಸಿತ್ತು. ಅದರಿಂದ ನಷ್ಟ ಉಂಟಾಗಿದೆ ಹೊರತು ಬೇರೆ ಯಾವ ಕಾರಣವೂ ಇಲ್ಲ. ಬೆಳಿಗ್ಗೆ 7 ಅಥವಾ 8 ಗಂಟೆಗೆ ಬೀದರ್‌ನಿಂದ್‌ ಬೆಂಗಳೂರು ಸಂಜೆ 6 ಅಥವಾ 7ಕ್ಕೆ ಬೆಂಗಳೂರಿನಿಂದ ಬೀದರ್‌ ಕಡೆಗೆ ವಿಮಾನ ಹಾರಾಟ ಶುರುವಾದರೆ ಎಲ್ಲರಿಗೂ ಅನುಕೂಲವಾಗುತ್ತದೆ. ದೈನಂದಿನ ಕೆಲಸ ಮುಗಿಸಿಕೊಂಡು ಅದೇ ದಿನ ಊರು ತಲುಪಬಹುದು. ಹೀಗಾಗಿ ಸರ್ಕಾರ ವಿಮಾನ ಹಾರಾಟದ ಸಮಯಕ್ಕೆ ಹೆಚ್ಚಿನ ಒತ್ತು ಕೊಡಬೇಕು’ ಎಂದು ಜಿಲ್ಲೆಯ ಉದ್ಯಮಿಗಳು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.