ADVERTISEMENT

ಹುಲಸೂರ | 11 ತಿಂಗಳಾದರೂ ಕಾಯಿಕಟ್ಟದ ಪಪಾಯಿ: ಸಂಕಷ್ಟದಲ್ಲಿ ಬೆಳೆಗಾರ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2023, 16:23 IST
Last Updated 18 ನವೆಂಬರ್ 2023, 16:23 IST
ಹುಲಸೂರು ಸಮೀಪದ ಭಾಲ್ಕಿ ತಾಲ್ಲೂಕಿನ ಕೊಂಗಳಿ ಗ್ರಾಮದ ರೈತ ಪಂಚಯ್ಯ ಸ್ವಾಮಿ ಅವರು ಬೆಳೆದ ಪಪಾಯಿ ಗಿಡಗಳು ಕಾಯಿ ಕಟ್ಟದಿರುವುದು
ಹುಲಸೂರು ಸಮೀಪದ ಭಾಲ್ಕಿ ತಾಲ್ಲೂಕಿನ ಕೊಂಗಳಿ ಗ್ರಾಮದ ರೈತ ಪಂಚಯ್ಯ ಸ್ವಾಮಿ ಅವರು ಬೆಳೆದ ಪಪಾಯಿ ಗಿಡಗಳು ಕಾಯಿ ಕಟ್ಟದಿರುವುದು   

ಹುಲಸೂರ: ಆದಾಯದ ನಿರೀಕ್ಷೆಯಲ್ಲಿ ಪಪಾಯಿ ಬೆಳೆದ ಬೆಳೆಗಾರೊಬ್ಬರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಕಾಲಕ್ಕೆ ನಾಟಿ ಮಾಡಿ, ಔಷಧ ಸಿಂಪಡಿಸಿ ಗೊಬ್ಬರ ಹಾಕಿದ್ದರೂ ಪಪಾಯಿ ಗಿಡಗಳು ಹೂ ಬಿಟ್ಟಿಲ್ಲ. ಇದರಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಲ್ಲೂಕಿನ ಸಮೀಪದ ಕೊಂಗಳಿ ಗ್ರಾಮದ ರೈತ ಪಂಚಯ್ಯ ಸ್ವಾಮಿ ತಮ್ಮ ಎರಡು ಎಕರೆ ಜಮೀನಿನಲ್ಲಿ ಪಪಾಯ ಬೆಳೆದಿದ್ದರು. ಮಹಾರಾಷ್ಟ್ರದ ತಾಂಬಳ ವಾಡಿ ಗ್ರಾಮದ ನರ್ಸರಿಯಿಂದ ಸಸಿ ತಂದು ನಾಟಿ ಮಾಡಿದ್ದರು.

ಪಪಾಯ ಸಸಿಗಳು ಏಳು ತಿಂಗಳ ಹೊತ್ತಿಗೆ ಹೂವು ಬಿಟ್ಟು–ಕಾಯಿಕಟ್ಟಬೇಕು. ಆದರೆ, ಗಿಡಗಳಲ್ಲಿ ಹೂ ಮತ್ತು ಕಾಯಿ ಕಾಣದೇ ರೈತ ಪಂಚಯ್ಯ ಪ್ರಗತಿಪರ ರೈತರಿಂದ ಮಾಹಿತಿ ಪಡೆದು ಬೆಳೆಗಳ ಆರೈಕೆ ಮಾಡಿದರೂ ಪ್ರಯೋಜನವಾಗಿಲ್ಲ.

ADVERTISEMENT

‘ಎರಡು ಎಕರೆ ಪ್ರದೇಶದ ಜಮೀನು ಹದ, ನಾಟಿ, ಔಷಧ ಎಂದೆಲ್ಲ ಇಲ್ಲಿವರೆಗೆ ₹3 ಲಕ್ಷ ಖರ್ಚಾಗಿದೆ. ಇದರಲ್ಲಿ ಬೇರೆ ಬೆಳೆಗಳು ಬೆಳೆದಿದ್ದರೆ ಆದಾಯ ಬರುತ್ತಿತ್ತು. ಆದರೆ ಪಪಾಯಿ ನಷ್ಟಕ್ಕೆ ದೂಡಿದೆ’ ಎಂದು ಅಳಲುತೋಡಿಕೊಂಡಿದ್ದಾರೆ.

ಪರಿಹಾರಕ್ಕೆ ಆಗ್ರಹ:

‘ರೈತ ಈಗಾಗಲೇ ಸಾಲ ಮಾಡಿ ಪಪಾಯ ಬೆಳೆದಿದ್ದಾನೆ. ಗಂಡು ಸಸ್ಯಗಳೇ ಹೆಚ್ಚು ಲಭಿಸಿದ್ದರಿಂದ ಅವು ಹೂ ಬಿಡದೆ ಬರೀ ಬೆಳೆದುನಿಂತಿವೆ. ರೈತ ಪಂಚಯ್ಯ ಸ್ವಾಮಿ ಸಂಕಷ್ಟದಲ್ಲಿದ್ದಾನೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತ ಬೆಳೆದಿರುವ ಪಪಾಯಿ ಗಿಡಗಳನ್ನು ಪರಿಶೀಲಿಸಬೇಕು. ರೈತನಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ರೈತನ ಹೊಲಕ್ಕೆ ಭೇಟಿ ಕೊಟ್ಟು ಮಾಹಿತಿ ಪಡೆದಿರುವೆ. ಅವರು ಸಸಿ ಆಯ್ಕೆ ಮಾಡುವ ವೇಳೆ ಸಮಸ್ಯೆಯಾಗಿದೆ. ಅವರಿಗೆ ಸೂಕ್ತ ಗುಣಮಟ್ಟದ ತಳಿ ಸಿಕ್ಕಿಲ್ಲ. ಹೀಗಾಗಿ ಗಿಡಗಳಲ್ಲಿ ಕಾಯಿ ಕಟ್ಟಿಲ್ಲ
ರವೀಂದ್ರ ಜಟಗೊಂಡ ಸಹಾಯಕ ತೋಟಗಾರಿಕೆ ಅಧಿಕಾರಿ ಸಾಯಗಾಂವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.