ADVERTISEMENT

ಬೀದರ್‌: ಮನಸೂರೆಗೊಳಿಸಿದ ಒಂಬತ್ತು ಸೂರ್ಯಕಿರಣ ವಿಮಾನಗಳ ವೈಮಾನಿಕ ಪ್ರದರ್ಶನ

ಏರ್‌ ಶೋ ನೋಡಿ ಸಂಭ್ರಮಿಸಿದ ಜನ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 14:03 IST
Last Updated 21 ಸೆಪ್ಟೆಂಬರ್ 2024, 14:03 IST
<div class="paragraphs"><p>ಬೀದರ್‌ನಲ್ಲಿ&nbsp;ಸೂರ್ಯಕಿರಣ ವಿಮಾನಗಳ ವೈಮಾನಿಕ ಪ್ರದರ್ಶನ</p></div>

ಬೀದರ್‌ನಲ್ಲಿ ಸೂರ್ಯಕಿರಣ ವಿಮಾನಗಳ ವೈಮಾನಿಕ ಪ್ರದರ್ಶನ

   

(ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ)

ಬೀದರ್‌: ಇಲ್ಲಿನ ಭಾರತೀಯ ವಾಯುಪಡೆ ತರಬೇತಿ ಕೇಂದ್ರಕ್ಕೆ ಸೇರಿದ ಒಂಬತ್ತು ಸೂರ್ಯಕಿರಣ ವಿಮಾನಗಳ ವೈಮಾನಿಕ ಪ್ರದರ್ಶನ ಎಲ್ಲರ ಮನಸೂರೆಗೊಳಿಸಿತು.

ADVERTISEMENT

ಶನಿವಾರ ಸಂಜೆ ನಗರದ ಬಹಮನಿ ಕೋಟೆಯ ಆಗಸದ ಮೇಲೆ ಲೋಹದ ಹಕ್ಕಿಗಳ ಕರಾಮತ್ತು ನೋಡಿ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರು ಸಂಭ್ರಮಿಸಿದರು.

ಕೋಟೆಯ ಆವರಣದಲ್ಲಿ ದೇಶಭಕ್ತಿ ಗೀತೆಗಳನ್ನು ಹಾಕಲಾಗಿತ್ತು. ಅದರ ನಡುವೆ ಸೂರ್ಯಕಿರಣ ವಿಮಾನಗಳ ಮೈನವಿರೇಳಿಸುವ ಕಸರತ್ತು ಜನರನ್ನು ಮಂತ್ರ ಮುಗ್ಧಗೊಳಿಸಿತು. ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಹೊಗೆ ಹೊರಹಾಕುತ್ತ ವಿಮಾನಗಳು ಹಾದು ಹೋದಾಗ ಜನರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ವಿದ್ಯಾರ್ಥಿಗಳು ಶಿಳ್ಳೆ ಹೊಡೆದು, ಕೈಬೀಸಿ ಸಂಭ್ರಮಿಸಿದರು. ಕೆಲ ವಿದ್ಯಾರ್ಥಿಗಳು ರಾಷ್ಟ್ರ ಧ್ವಜದೊಂದಿಗೆ ಮೈಮರೆತು ಹೆಜ್ಜೆ ಕೂಡ ಹಾಕಿದರು.

ವಿಮಾನಗಳು ಮೇಲಿನಿಂದ ಕೆಳಗೆ, ಕೆಳಗಿನಿಂದ ಮೇಲಕ್ಕೆ, ಪರಸ್ಪರ ಮುಖಾಮುಖಿಯಾಗಿ ಕ್ರಾಸಿಂಗ್‌, ಬ್ಯಾರಲ್‌ ರೋಲ್‌ ಸೇರಿದಂತೆ ಹಲವು ಬಗೆಯ ಪ್ರದರ್ಶನ ನೀಡಿದವು. ಕೆಲವು ಸಲ ಒಂದೊಂದೆ ವಿಮಾನಗಳು ಬಂದರೆ, ಕೆಲವು ಸಲ ಒಟ್ಟಿಗೆ ಒಂಬತ್ತು ವಿಮಾನಗಳು ಬಂದು ಆಕಾಶದಲ್ಲಿ ಚಿತ್ತಾರ ಮೂಡಿಸಿದವು. ಕೋಟೆಯ ಸ್ಮಾರಕಗಳಿಗೆ ಕಳೆಗಟ್ಟಿದವು.

ಬೀದರ್‌ನಲ್ಲಿ ಸೂರ್ಯಕಿರಣ ವಿಮಾನಗಳ ವೈಮಾನಿಕ ಪ್ರದರ್ಶನ

ಸೂರ್ಯಕಿರಣ ವಿಮಾನಗಳ ಟೀಂ ಲೀಡರ್ ಗ್ರುಪ್ ಕ್ಯಾಪ್ಟನ್ ಗುರುಪ್ರೀತ್‌ ಸಿಂಗ್ ದಿಲ್ಲೋನ್ ನೇತೃತ್ವದಲ್ಲಿ ವೈಮಾನಿಕ ಪ್ರದರ್ಶನ ನಡೆಯಿತು.

ಸಂಜೆ 4ಗಂಟೆಗೆ ಆರಂಭಗೊಂಡ ಏರ್‌ ಶೋ 4.25ರ ವರೆಗೆ ನಡೆಯಿತು. ಆದರೆ, ವಿವಿಧ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರು, ವಾಯುಪಡೆ ತರಬೇತಿ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿ ಮಧ್ಯಾಹ್ನ 2.30ಕ್ಕೆ ಕೋಟೆಗೆ ಬಂದು ಸೇರಿದ್ದರು. ಇಡೀ ಕೋಟೆಯ ಪರಿಸರದಲ್ಲಿ ಜನಜಂಗುಳಿ ಇತ್ತು.

1996ರಲ್ಲಿ ಆರಂಭಗೊಂಡಿರುವ ಸೂರ್ಯಕಿರಣ ಏರೋಬ್ಯಾಟಿಕ್ ಟೀಂ, ಇದುವರೆಗೆ ಭಾರತ, ಶ್ರೀಲಂಕಾ, ಸಿಂಗಪುರ, ದುಬೈ ಸೇರಿದಂತೆ ಜಗತ್ತಿನ ಇತರೆ ದೇಶಗಳಲ್ಲಿ 600ಕ್ಕಿಂತಲೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿವೆ. ಒಂಬತ್ತು ವಿಮಾನಗಳ ಈ ಏರ್‌ ಕ್ರಾಫ್ಟ್‌ ತಂಡ ಇಡೀ ಏಷ್ಯಾದಲ್ಲಿ ಭಾರತದಲ್ಲಿ ಮಾತ್ರ ಇದೆ.

ಜಿಲ್ಲಾಡಳಿತ, ಭಾರತೀಯ ವಾಯುಪಡೆ ತರಬೇತಿ ಕೇಂದ್ರದ ಸಹಯೋಗದಲ್ಲಿ ಆಗಸ್ಟ್‌ 30, 31ರಂದೇ ಎರಡು ದಿನಗಳ ಏರ್‌ ಶೋ ಏರ್ಪಡಿಸಲಾಗಿತ್ತು. ಮೊದಲ ದಿನ ಯಶಸ್ವಿಯಾಗಿ ಕಾರ್ಯಕ್ರಮ ನಡೆದಿತ್ತು. ಮಳೆಯಿಂದಾಗಿ ಎರಡನೇ ದಿನದ ಕಾರ್ಯಕ್ರಮ ರದ್ದುಗೊಳಿಸಲಾಗಿತ್ತು. ಅದನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು. ಅದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಭಾರತೀಯ ವಾಯುಪಡೆ ತರಬೇತಿ ಕೇಂದ್ರದ ಏರ್‌ ಕಮೊಡೋರ್ ಪರಾಗಲಾಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಏರ್ ಶೋ ಕಾರ್ಯಕ್ರಮದಲ್ಲಿ ಬೀದರ ನಗರಸಭೆ ಅಧ್ಯಕ್ಷ ಮುಹಮ್ಮದ್‌ ಗೌಸ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.