ADVERTISEMENT

ಉಪವಾಸ ಹಿಂಪಡೆದ ರೊಟ್ಟೆ ಅಲೆಮಾರಿಗಳ ಧರಣಿ ವಾಪಸ್‌

​ಪ್ರಜಾವಾಣಿ ವಾರ್ತೆ
Published 26 ಜನವರಿ 2024, 7:27 IST
Last Updated 26 ಜನವರಿ 2024, 7:27 IST
ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಅಲೆಮಾರಿ ಜನಾಂಗದವರ ಮನವೊಲಿಸಿದರು
ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಅಲೆಮಾರಿ ಜನಾಂಗದವರ ಮನವೊಲಿಸಿದರು   

ಬೀದರ್‌: ವಸತಿ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಅಲೆಮಾರಿ ಜನಾಂಗದವರು ಕಳೆದ ಮೂರು ದಿನಗಳಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಸಮೀಪ ನಡೆಸುತ್ತಿದ್ದ ಧರಣಿಯನ್ನು ಗುರುವಾರ ವಾಪಸ್‌ ಪಡೆದರು.

ಧರಣಿಯ ನೇತೃತ್ವ ವಹಿಸಿದ್ದ ವಿಶ್ವಕ್ರಾಂತಿ ದಿವ್ಯಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆಯವರು ಉಪವಾಸ ಸತ್ಯಾಗ್ರಹ ಕೊನೆಗೊಳಿಸಿದರು.

ಅಲೆಮಾರಿಗಳಿಗೆ ವಸತಿ ಸೇರಿದಂತೆ ಮೂಲಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಸತತ ನಾಲ್ಕು ತಿಂಗಳಿಂದ ಹೋರಾಟ ನಡೆಸಲಾಗುತ್ತಿದೆ. ಆದರೆ, ಜಿಲ್ಲಾಡಳಿತ ಕಿವಿಗೊಟ್ಟಿಲ್ಲ. ಈ ಸಲ ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೆ ಮುಂದುವರೆಸಲಾಗುವುದು ಎಂದು ಪಟ್ಟು ಹಿಡಿದು ಧರಣಿ ನಡೆಸುತ್ತಿದ್ದರು. ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಗುರುವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿದರು.

ADVERTISEMENT

‘ಅಲೆಮಾರಿಗಳ ಸರ್ವೇ ಕಾರ್ಯ ಕೈಗೊಂಡ ನಂತರ ಜಿಲ್ಲಾಡಳಿತದಿಂದ ನ್ಯಾಯ ಒದಗಿಸಿಕೊಡಲಾಗುವುದು’ ಎಂದು ಭರವಸೆ ನೀಡಿದರು. ರೊಟ್ಟೆ ಅವರಿಗೆ ನೀರು ಕುಡಿಸಿ ಸತ್ಯಾಗ್ರಹ ಕೊನೆಗೊಳಿಸಲು ಮನವಿ ಮಾಡಿದರು. ಅವರ ಮಾತಿಗೆ ಬೆಲೆಕೊಟ್ಟು ಧರಣಿ ಹಿಂಪಡೆದರು. ‘ಮೂರ್ನಾಲ್ಕು ತಿಂಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸಚಿವರಿಗೆ ಘೇರಾವ್‌ ಹಾಕಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.