ADVERTISEMENT

ಬೀದರ್‌ | ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಸನಿಹ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2023, 5:40 IST
Last Updated 2 ಸೆಪ್ಟೆಂಬರ್ 2023, 5:40 IST
ಬೀದರ್‌ ನಗರಸಭೆ ಕಚೇರಿ
ಬೀದರ್‌ ನಗರಸಭೆ ಕಚೇರಿ   

ಶಶಿಕಾಂತ ಎಸ್‌. ಶೆಂಬೆಳ್ಳಿ

ಬೀದರ್‌: ಕೊನೆಗೂ ಬೀದರ್‌ ನಗರಸಭೆಯ ಸದಸ್ಯರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಕಾಲ ಸನಿಹ ಬಂದಿದೆ.

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕರ್ನಾಟಕ ಮುನ್ಸಿಪಾಲಿಟಿ ಚುನಾವಣೆ ನಿಯಮ 1965ರ ಪ್ರಕಾರ ತುರ್ತು ಕ್ರಮ ಕೈಗೊಂಡು ಚುನಾವಣೆ ನಡೆಸಬೇಕೆಂದು ಅದಕ್ಕಾಗಿಯೇ ಬೀದರ್‌ ಉಪವಿಭಾಗಾಧಿಕಾರಿಯನ್ನು ನಿಯೋಜಿಸಿ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಶುಕ್ರವಾರ ಆದೇಶ ಮಾಡಿದ್ದಾರೆ. 

ADVERTISEMENT

ಹೀಗಾಗಿ ಕೆಲವೇ ದಿನಗಳಲ್ಲಿ ಚುನಾವಣೆ ಪ್ರಕ್ರಿಯೆ ನಡೆಯುವುದು ನಿಶ್ಚಿತವಾಗಿದೆ. ನಗರಸಭೆಗೆ ಚುನಾವಣೆ ಪ್ರಕ್ರಿಯೆ ಮುಗಿದು ಎರಡು ವರ್ಷಕ್ಕೂ ಹೆಚ್ಚು ಸಮಯ ಕಳೆಯುತ್ತ ಬಂದರೂ  ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿರಲಿಲ್ಲ. 

ಒಟ್ಟು 35 ಸದಸ್ಯ ಬಲದ ನಗರಸಭೆಗೆ 2021ರ ಏಪ್ರಿಲ್‌ 27ರಂದು ಚುನಾವಣೆ ನಡೆದಿತ್ತು. ವಾರ್ಡ್‌ ಸಂಖ್ಯೆ 26, 32ರ ಮೀಸಲಾತಿ ವಿವಾದ ಕೋರ್ಟ್‌ ಮೆಟ್ಟಿಲೇರಿದ್ದರಿಂದ ಇವೆರಡೂ ವಾರ್ಡ್‌ಗಳಿಗೆ 2021 ಸೆಪ್ಟೆಂಬರ್‌ನಲ್ಲಿ ಮತದಾನ ನಡೆದಿತ್ತು.

ಬೀದರ್‌ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಉಪವಿಭಾಗಾಧಿಕಾರಿಗೆ ಆದೇಶ ನೀಡಲಾಗಿದೆ.
ಗೋವಿಂದ ರೆಡ್ಡಿ, ಜಿಲ್ಲಾಧಿಕಾರಿ

ಫಲಿತಾಂಶ ಬಂದ ನಂತರ ಯಾವುದೇ ಪಕ್ಷಕ್ಕೂ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬಂದಿರಲಿಲ್ಲ. 16 ವಾರ್ಡ್‌ಗಳಲ್ಲಿ ಜಯ ಗಳಿಸಿ ಕಾಂಗ್ರೆಸ್‌ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಜೆಡಿಎಸ್‌ 9, ಬಿಜೆಪಿ 7, ಎಂಐಎಂ 2, ಎಎಪಿ 1 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಎಂಐಎಂ, ಎಎಪಿ ಬೆಂಬಲದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌ ಮುಂದಾಗಿತ್ತು. ಆದರೆ, ಆಗ ಕೋವಿಡ್‌ನಿಂದಾಗಿ ಚುನಾವಣೆ ನಡೆದಿರಲಿಲ್ಲ. ಅಂದಿನ ಬಿಜೆಪಿ ಸರ್ಕಾರ ಕೂಡ ಚುನಾವಣೆಗೆ ಮನಸ್ಸು ಮಾಡಿರಲಿಲ್ಲ ಎಂಬ ಆರೋಪಗಳಿವೆ.

ನಗರಸಭೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಯಾವುದೇ ರೀತಿಯ ಸಾಧ್ಯತೆಗಳು ಇರಲಿಲ್ಲ. ಕಾಂಗ್ರೆಸ್‌ ಪಕ್ಷವನ್ನು ಅಧಿಕಾರದಿಂದ ದೂರ ಇಡುವುದಕ್ಕಾಗಿಯೇ ಹಿಂದಿನ ಬಿಜೆಪಿ ಸರ್ಕಾರ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯದಂತೆ ನೋಡಿಕೊಂಡಿದೆ ಎಂಬ ಆರೋಪವೂ ಇದೆ.

ಆದರೆ, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ತಕ್ಷಣವೇ ಚುನಾವಣೆ ನಡೆಯಬಹುದು ಎಂಬ ನಿರೀಕ್ಷೆ ಇತ್ತು. ಸ್ಥಳೀಯ ಶಾಸಕ ರಹೀಂ ಖಾನ್‌ ಅವರು ಪೌರಾಡಳಿತ ಸಚಿವರಾದ ನಂತರ ನಿರೀಕ್ಷೆಗಳು ಇನ್ನಷ್ಟು ಗರಿಗೆದರಿತು. ಆದರೆ, ಸರ್ಕಾರ ಅಸ್ತಿತ್ವಕ್ಕೆ ಬಂದ ನೂರು ದಿನಗಳ ನಂತರ ಚುನಾವಣೆಗೆ ಕಾಲ ಕೂಡಿ ಬಂದಿದೆ. 

ನಗರಸಭೆಗೆ ಹೊಸದಾಗಿ ಆಯ್ಕೆಯಾದ ಸದಸ್ಯರಿಗೆ ಸುಮಾರು ಎರಡು ವರ್ಷಗಳ ನಂತರ ಅಧಿಕಾರ ನಡೆಸುವ ಭಾಗ್ಯ ಒಲಿದು ಬರಲಿದೆ. ಇದುವರೆಗೆ ಎಲ್ಲ ಅಧಿಕಾರಿಗಳೇ ನೋಡಿಕೊಳ್ಳುತ್ತಿದ್ದರು. ವಾರ್ಡ್‌ಗಳಲ್ಲಿ ಯಾವುದೇ ರೀತಿಯ ಕೆಲಸಗಳು ಆಗುತ್ತಿಲ್ಲ. ಜನಸಾಮಾನ್ಯರ ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿತ್ತು. 

ಪಾಲಿಕೆ ರಚನೆ ಪ್ರಕ್ರಿಯೆ ನಿಧಾನ

ಹಿಂದಿನ ಬಿಜೆಪಿ ಸರ್ಕಾರ ಬೀದರ್‌ ನಗರಸಭೆಯನ್ನು ಮಹಾನಗರ ಪಾಲಿಕೆ ಮಾಡುವ ಪ್ರಸ್ತಾವವನ್ನು ಬಜೆಟ್‌ನಲ್ಲಿ ಘೋಷಿಸಿದೆ. ಜನಸಂಖ್ಯೆ, ಭೌಗೋಳಿಕ ವಿಸ್ತೀರ್ಣಕ್ಕೆ ಸಂಬಂಧಿಸಿದ ಮಾನದಂಡಗಳಿಗೆ ಒಪ್ಪಿಗೆ ಸಿಕ್ಕಿದೆ. ಇನ್ನಷ್ಟೇ ಸಿಬ್ಬಂದಿ ನೇಮಕಾತಿ ಕುರಿತ ವಿಷಯ ಅಂತಿಮಗೊಳ್ಳಬೇಕಿದೆ. ಕಳೆದೊಂದು ವರ್ಷದಿಂದ ಸತತವಾಗಿ ಜಿಲ್ಲಾಡಳಿತದಿಂದ ರಾಜ್ಯ ಸರ್ಕಾರಕ್ಕೆ ಪಾಲಿಕೆಗೆ ಸಂಬಂಧಿಸಿದ ಅಗತ್ಯ ಮಾಹಿತಿಗಳನ್ನು ಕಳಿಸಿಕೊಡಲಾಗುತ್ತಿದೆ. ಯಾವುದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಬಹುದು. 

‘ಬೀದರ್‌, ರಾಯಚೂರು ಮಹಾನಗರ ಪಾಲಿಕೆ ಮಾಡುವುದು ಶತಃಸಿದ್ಧ. ಕೆಲ ತಾಂತ್ರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಚುನಾವಣೆ ನಡೆಸಲಾಗುವುದು’ ಎಂದು ಇತ್ತೀಚೆಗೆ ರಹೀಂ ಖಾನ್‌ ಕೂಡ ಹೇಳಿದ್ದಾರೆ.

ಮೀಸಲು ಹೇಗಿದೆ?

ನಗರಾಭಿವೃದ್ಧಿ ಇಲಾಖೆಯು ಅಧ್ಯಕ್ಷ ಸ್ಥಾನವನ್ನು ಬಿಸಿಎ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ನಿಗದಿಪಡಿಸಿ ಈ ಹಿಂದೆಯೇ ಆದೇಶ ಹೊರಡಿಸಿದೆ. ಈಗ ಚುನಾವಣೆಗೆ ಕಾಲ ಕೂಡಿ ಬಂದಿದೆ.

ನಗರಸಭೆಯಲ್ಲಿ ಪಕ್ಷಗಳ ಬಲಾಬಲ

35 - ಒಟ್ಟು ಸದಸ್ಯರು

16 - ಕಾಂಗ್ರೆಸ್‌

09 - ಜೆಡಿಎಸ್‌

07 - ಬಿಜೆಪಿ

02 - ಎಂಐಎಂ

01 - ಎಎಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.