ಬೀದರ್: ನಗರದಲ್ಲಿ ಉದ್ದೇಶಿತ ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆಗೊಳಿಸಬೇಕು ಎಂದು ವಾಲ್ಮೀಕಿ ಸಮಾಜ ಸಂಘ ಆಗ್ರಹಿಸಿದೆ.
ಈ ಸಂಬಂಧ ಸಂಘದ ಪ್ರಮುಖರು ನಗರದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ರಂದೀಪ್ ಡಿ. ಅವರಿಗೆ ಮನವಿಪತ್ರ ಸಲ್ಲಿಸಿ ಒತ್ತಾಯಿಸಿದರು.
ಬೀದರ್ ಜಿಲ್ಲೆಯಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಟೋಕರೆ ಕೋಳಿ ಸಮುದಾಯದ ಜನ ಅತಿ ಹಿಂದುಳಿದಿದ್ದಾರೆ. ಈ ಸಮುದಾಯದವರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ವಂಚಿತರಾಗಿದ್ದಾರೆ. ಈ ಸಮುದಾಯದವರು ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಸಭೆ-ಸಮಾರಂಭ, ಮದುವೆ-ಮುಂಜಿ ಮುಂತಾದ ಕಾರ್ಯಕ್ರಮಗಳು ನಡೆಸಲು ಸಮುದಾಯ ಭವನಗಳಿಲ್ಲ. ಈ ಸಮಾಜವನ್ನು ಕಳೆದ ಹಲವು ವರ್ಷಗಳಿಂದ ಹಿಂದಿನ ಸರ್ಕಾರಗಳು ಕಡೆಗಣಿಸುತ್ತ ಬಂದಿವೆ ಎಂದು ಆರೋಪಿಸಿದರು.
ನಗರದ ಚಿಕ್ಕಪೇಟೆ ಸಮೀಪ ಬಂಜಾರಾ ಸಮಾಜಕ್ಕೆ ಸರ್ಕಾರದಿಂದ ನೀಡಿರುವ ಜಮೀನಿನ ಬಳಿಯೇ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ 20 ಗುಂಟೆ ಜಮೀನಿದ್ದು, ಭವನ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.
ಮಹರ್ಷಿ ವಾಲ್ಮೀಕಿ ಸಮಾಜ ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಕಾಶೆಂಪುರ್, ಮುಖಂಡರಾದ ಪಾಂಡುರಂಗ್ ಗುರೂಜೀ, ಮಾರುತಿ ಮಾಸ್ಟರ್, ಸುನೀಲ ಕಾಶೆಂಪುರ್, ಸುನೀಲ ಭಾವಿಕಟ್ಟಿ, ಅರುಣಕುಮಾರ ಬಾವಗಿ, ಚಂದ್ರಕಾಂತ ಹಳ್ಳಿಖೇಡಕರ್, ಭೀಮಣ್ಣ ಮಾಸ್ಟರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.