ADVERTISEMENT

ಅಮರೇಶ್ವರ ದೇವಸ್ಥಾನ ಅಭಿವೃದ್ಧಿಗೆ ಮುಂದಾಗದ ಜನಪ್ರತಿನಿಧಿಗಳು, ಅಧಿಕಾರಿಗಳು

ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ..

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 5:55 IST
Last Updated 7 ಮಾರ್ಚ್ 2024, 5:55 IST
ಔರಾದ್‌ನ ಅಮರೇಶ್ವರ ದೇವಸ್ಥಾನದ ಮಹಾದ್ವಾರ ಶಿಥಿಲಗೊಂಡಿರುವುದು
ಔರಾದ್‌ನ ಅಮರೇಶ್ವರ ದೇವಸ್ಥಾನದ ಮಹಾದ್ವಾರ ಶಿಥಿಲಗೊಂಡಿರುವುದು   

ಔರಾದ್: ಮೂರು ರಾಜ್ಯಗಳ ಗಡಿ ಭಾಗದ ಪ್ರಸಿದ್ಧ ಧಾರ್ಮಿಕ ತಾಣ ಅಮರೇಶ್ವರ ದೇವಸ್ಥಾನ ಅಭಿವೃದ್ಧಿಯಿಂದ ವಂಚಿತವಾಗಿದೆ.

ಸರ್ಕಾರದ ಅಧೀನದಲ್ಲಿರುವ ಈ ದೇವಸ್ಥಾನಕ್ಕೆ ಭಕ್ತರಿಂದ ಲಕ್ಷಗಟ್ಟಲೇ ಹಣ ಹರಿದು ಬರುತ್ತಿದ್ದರೂ ಅದರ ಸೂಕ್ತ ಬಳಕೆಯಾಗದೆ ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ.

ದೇವಸ್ಥಾನದ ಎದುರಿನ ಮಹಾದ್ವಾರ ಶಿಥಿಲಗೊಂಡು ಅಪಾಯದ ಅಂಚಿನಲ್ಲಿದೆ. ಇದನ್ನು ಕೆಡವಿ ಹೊಸದಾಗಿ ಮಹಾದ್ವಾರ ನಿರ್ಮಾಣ ಮಾಡಬೇಕು ಎಂದು ಭಕ್ತರು ದಶಕಗಳಿಂದ ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಸಾಕಷ್ಟು ಸಲ ಮನವರಿಕೆ ಮಾಡಿಕೊಟ್ಟರೂ ಕೇವಲ ಭರವಸೆ ಸಿಕ್ಕಿದೆ. ಆದರೆ, ಕಾಮಗಾರಿ ಆರಂಭವಾಗದೆ ಇರುವುದು ಭಕ್ತರನ್ನು ಕೆರಳಿಸಿದೆ.

ADVERTISEMENT

ಅನೇಕ ವೈಶಿಷ್ಟ್ಯದಿಂದ ಕೂಡಿದ ಅಮರೇಶ್ವರ ದೇವಸ್ಥಾನದ ಪರಿಸರದಲ್ಲಿ ಮಹಾ ಶಿವರಾತ್ರಿ ಸಮಯದಲ್ಲಿ ಒಂದು ವಾರ ಜಾತ್ರೆ ನಡೆಯುತ್ತದೆ. ರಾಜ್ಯದ ಏಕೈಕ ಒಂಟೆ ಜಾತ್ರೆ ಖ್ಯಾತಿಯ ಈ ದೇವಸ್ಥಾನಕ್ಕೆ ಭಕ್ತರ ಸಂಖ್ಯೆಗೆ ಕೊರತೆ ಇಲ್ಲ. ಪ್ರತಿ ವರ್ಷ ಭಕ್ತರು ನೀಡುವ ಹುಂಡಿ ಹಣ ಹಾಗೂ ಅಂಗಡಿ ಬಾಡಿಗೆ ಸೇರಿ ₹18 ಲಕ್ಷ ದಿಂದ ₹20 ಲಕ್ಷ ಆದಾಯ ಬರುತ್ತದೆ. ಸದ್ಯ ದೇವಸ್ಥಾನದ ಖಾತೆಯಲ್ಲಿ ₹1 ಕೋಟಿಗೂ ಹೆಚ್ಚು ಹಣ ಇದೆ. ಈ ಹಣ ಬಳಸಿಕೊಂಡು ದೇವಸ್ಥಾನ ಅಭಿವೃದ್ಧಿ ಮಾಡಿಲ್ಲ ಎಂದು ಭಕ್ತರು ಅಸಮಾಧಾನ ಹೊರ ಹಾಕಿದ್ದಾರೆ.

ಅಮರೇಶ್ವರ ದೇವಸ್ಥಾನದಲ್ಲಿ ಅನೇಕ ಕೊರತೆಗಳಿವೆ. ಪ್ರತಿ ವರ್ಷ ಸಭೆ ನಡೆದಾಗ ಜಾತ್ರೆ ಮುಗಿದ ತಕ್ಷಣ ಎಲ್ಲ ಸಮಸ್ಯೆಗಳು ಪರಿಹರಿಸುತ್ತೇವೆ ಎಂದು ಹೇಳಿ ಹೋದವರು ಮತ್ತೆ ಜಾತ್ರೆಗೆ ಬರುತ್ತಾರೆ. ಕಲ್ಯಾಣ ಮಂಟಪ ಇದ್ದರೂ ಅದರ ಸೂಕ್ತ ಬಳಕೆಯಾಗುತ್ತಿಲ್ಲ. ಅದನ್ನು ವ್ಯವಸ್ಥಿತವಾಗಿ ಮಾಡಿದರೆ ದೇವಸ್ಥಾನದ ಆದಾಯ ಇನ್ನಷ್ಟು ವೃದ್ಧಿಸುತ್ತದೆ. ದೇವಸ್ಥಾನಕ್ಕೆ ಬರುವ ಮಹಿಳಾ ಭಕ್ತರ ವಾಸ್ತವ್ಯಕ್ಕೆ ಸೂಕ್ತ ವ್ಯವಸ್ಥೆ ಇಲ್ಲ. ಇರುವ ಶುದ್ಧ ನೀರಿನ ಘಟಕ ಹಾಳಾದರೂ ಅದನ್ನು ನೋಡುವವರಿಲ್ಲ. ಮಳೆಗಾಲದಲ್ಲಿ ದೇವಸ್ಥಾನದ ಒಂದು ಕಡೆ ನೀರು ಸೋರುತ್ತದೆ. ಇದು ಅಧಿಕಾರಿಗಳಿಗೆ ಗೊತ್ತಿದ್ದರೂ ಇಲ್ಲದ ಹಾಗೆ ಇರುತ್ತಾರೆ ಎಂದು ಸ್ಥಳೀಯ ಯುವಕ ಅಮರ ಮಸ್ಕಲೆ ಹೇಳುತ್ತಾರೆ.

ಅಮರೇಶ್ವರ ದೇವಸ್ಥಾನ ಅಭಿವೃದ್ಧಿ ಕುರಿತು ಈಗಾಗಲೇ ಉಪ ವಿಭಾಗಾಧಿಕಾರಿಗಳು ಜತೆ ಒಂದು ಸುತ್ತಿನ ಸಭೆ ಆಗಿದೆ. ಜಾತ್ರೆ ಮುಗಿದ ನಂತರ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ.
ನಾಗಯ್ಯ ಹಿರೇಮಠ
ಅಮರೇಶ್ವರ ಮಹಾದ್ವಾರ ನಿರ್ಮಾಣ ಆಗಬೇಕೆಂದು ನಾನು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಒಂದು ದಿನ ಧರಣಿ ನಡೆಸಿದೆ. ಸಾಕಷ್ಟು ಹೋರಾಟ ಮಾಡಿದ್ದೆ ಆದರೆ ಫಲ ಸಿಕ್ಕಿಲ್ಲ.
ಗುರುನಾಥ ವಡ್ಡೆ ಸಾಮಾಜಿಕ ಹೋರಾಟಗಾರ
ಅಮರೇಶ್ವರ ದೇವಸ್ಥಾನ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಏನೇ ಅಡೆ ತಡೆಗಳಿದ್ದರೂ ಅವೆಲ್ಲ ಮೆಟ್ಟಿ ನಿಂತು ದೇವಸ್ಥಾನ ಅಭಿವೃದ್ಧಿಪಡಿಸಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಭಕ್ತರು ದಂಗೆ ಏಳುತ್ತಾರೆ.
ಅನೀಲ ಜಿರೋಬೆ ಸಾಮಾಜಿ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.