ಬೀದರ್: ತಾಲ್ಲೂಕಿನ ಚಿಕಪೇಟ್ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟಿರುವ ಜಾಗವನ್ನು ಅನ್ಯ ಉದ್ದೇಶಕ್ಕೆ ಕೊಟ್ಟಿರುವುದನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಚಿಕಪೇಟ್ ಅಂಬೇಡ್ಕರ್ ಭವನ ರಕ್ಷಣಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಆನಂತರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಉಪವಿಭಾಗಾಧಿಕಾರಿ ಲವೀಶ್ ಒರ್ಡಿಯಾ ಅವರಿಗೆ ಸಲ್ಲಿಸಿದರು.
ಸುಮಾರು 40 ವರ್ಷಗಳ ಹಿಂದೆ ಚಿಕಪೇಟ್ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಜನರು ಸಾಂಸ್ಕೃತಿಕ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಆಯೋಜಿಸಲು ಅಂಬೇಡ್ಕರ್ ಭವನ, ಸಮುದಾಯ ಭವನಕ್ಕೆ ಸರ್ವೇ ನಂಬರ್ 95ರಲ್ಲಿ ಸುಮಾರು 2 ಎಕರೆ 35 ಗುಂಟೆ ಜಮೀನು ಮೀಸಲಿಡಲಾಗಿತ್ತು. 2022ರಲ್ಲಿ ಎಸ್ಸಿ/ಎಸ್ಟಿ ಮೆಟ್ರಿಕ್ ಬಾಲಕರ ವಸತಿ ನಿಲಯಕ್ಕೆ 1 ಎಕರೆ, ಬೀದರ್ ಉತ್ತರ ಹೋಬಳಿಯ ನಾಡಕಚೇರಿ ಸ್ಥಾಪನೆಗೆ 10 ಗುಂಟೆ ನೀಡಲಾಗಿದೆ. ಅನ್ಯ ಉದ್ದೇಶಕ್ಕೆ ಹಸ್ತಾಂತರಿಸಿರುವ ಜಾಗ ರದ್ದುಪಡಿಸಿ ಭವನಕ್ಕೆ ಮೀಸಲಿಡಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಮಿತಿ ಅಧ್ಯಕ್ಷ ಲಕ್ಷ್ಮಣ ಕಾಂಬಳೆ, ಉಪಾಧ್ಯಕ್ಷ ಶಿವು ಜೀರ್ಗೆ, ದಲಿತ ಸೇನೆ ಜಿಲ್ಲಾಧ್ಯಕ್ಷ ಶ್ರೀಪತರಾವ ದೀನೆ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಪಾಧ್ಯಕ್ಷ ರಾಜಕುಮಾರ ಮೂಲಭಾರತಿ, ಜಿಲ್ಲಾಧ್ಯಕ್ಷ ಶಿವಕುಮಾರ ನೀಲಿಕಟ್ಟಿ, ರಾಷ್ಟ್ರೀಯ ದಲಿತ ಬ್ರಿಗೇಡ್ ಅಧ್ಯಕ್ಷ ಅವಿನಾಶ ದೀನೆ, ಪ್ರಮುಖರಾದ ಉಮೇಶ ಸೊರಳ್ಳಿಕರ್, ರಾಜಕುಮಾರ ಸಿಂಗಾರೆ, ವಿಲಾಸ ಕಾಂಬಳೆ, ಕೀರ್ತಿಕುಮಾರ ಬ್ಯಾನರ್ಜಿ, ಆಕಾಶ ಸಿಂಧೆ, ಭಗತ್ ಸಿಂಧೆ, ಕಪಿಲ ಕಾಂಬಳೆ, ಮನೋಹರ ರಾಜಗೀರೆ, ಎಂ.ಪಿ. ಮುದಾಳೆ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.