ADVERTISEMENT

ಬಿಜೆಪಿ ತೆಕ್ಕೆಗೆ ಬೀದರ್ ಎಪಿಎಂಸಿ: ಅಧ್ಯಕ್ಷರಾಗಿ ಅನಿಲ, ಉಪಾಧ್ಯಕ್ಷೆಯಾಗಿ ಸುನೀತಾ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 15:37 IST
Last Updated 26 ಅಕ್ಟೋಬರ್ 2018, 15:37 IST
ಬೀದರ್ ಎಪಿಎಂಸಿಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಶುಕ್ರವಾರ ಆಯ್ಕೆಯಾದ ಅನಿಲ ಪನ್ನಾಳೆ ಹಾಗೂ ಸುನೀತಾ ಜಗನ್ನಾಥ ಯರನಳ್ಳಿ ವಿಜಯದ ಸಂಕೇತ ತೋರಿದರು
ಬೀದರ್ ಎಪಿಎಂಸಿಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಶುಕ್ರವಾರ ಆಯ್ಕೆಯಾದ ಅನಿಲ ಪನ್ನಾಳೆ ಹಾಗೂ ಸುನೀತಾ ಜಗನ್ನಾಥ ಯರನಳ್ಳಿ ವಿಜಯದ ಸಂಕೇತ ತೋರಿದರು   

ಬೀದರ್: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾಗಿ ಮನ್ನಳ್ಳಿ ಕ್ಷೇತ್ರದ ಅನಿಲ ಪನ್ನಾಳೆ ಹಾಗೂ ಉಪಾಧ್ಯಕ್ಷರಾಗಿ ಅಲಿಯಂಬರ್ ಕ್ಷೇತ್ರದ ಸುನೀತಾ ಜಗನ್ನಾಥ ಯರನಳ್ಳಿ ಶುಕ್ರವಾರ ಆಯ್ಕೆಯಾಗಿದ್ದಾರೆ.

12 ಚುನಾಯಿತ ಹಾಗೂ ಐವರು ನಾಮನಿರ್ದೇಶಿತ ಸದಸ್ಯರು ಸೇರಿ ಎಪಿಎಂಸಿಯ ಒಟ್ಟು ಸದಸ್ಯ ಬಲ 17. ಒಬ್ಬರು ಸದಸ್ಯ ನಿಧನ ಹೊಂದಿದ ಕಾರಣ 16 ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ಅಧ್ಯಕ್ಷ ಸ್ಥಾನಕ್ಕೆ ಅನಿಲ ಪನ್ನಾಳೆ ಹಾಗೂ ಚಿಟ್ಟಾ ಕ್ಷೇತ್ರದ ವೆಂಕಟ ಚಿಟ್ಟಾ ನಾಮಪತ್ರ ಸಲ್ಲಿಸಿದ್ದರು. 9 ಮತಗಳನ್ನು ಪಡೆದ ಅನಿಲ ಪನ್ನಾಳೆ ಅಧ್ಯಕ್ಷರಾಗಿ ಆಯ್ಕೆಯಾದರೆ, ವೆಂಕಟ ಚಿಟ್ಟಾ ಅವರಿಗೆ 7 ಮತಗಳು ಮಾತ್ರ ಬಂದವು.

ADVERTISEMENT

ಉಪಾಧ್ಯಕ್ಷ ಸ್ಥಾನಕ್ಕೆ ಸುನೀತಾ ಜಗನ್ನಾಥ ಯರನಳ್ಳಿ ಹಾಗೂ ಚಿಲ್ಲರ್ಗಿ ಕ್ಷೇತ್ರದ ಬಸವರಾಜ ನಾಮಪತ್ರ ಸಲ್ಲಿಸಿದ್ದರು. ಇಬ್ಬರಿಗೂ ತಲಾ ಎಂಟು ಮತಗಳು ದೊರೆತವು. ಹೀಗಾಗಿ ಲಾಟರಿ ಮೂಲಕ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಅದರಲ್ಲಿ ಸುನೀತಾ ಅವರಿಗೆ ಅದೃಷ್ಟ ಒಲಿಯಿತು.

ತಹಶೀಲ್ದಾರ್ ಕೀರ್ತಿ ಚಾಲಕ್ ಚುನಾವಣಾ ಅಧಿಕಾರಿಯಾಗಿದ್ದರು. ನೂತನ ಅಧ್ಯಕ್ಷ– ಉಪಾಧ್ಯಕ್ಷರನ್ನು ಅವರು ಅಭಿನಂದಿಸಿದರು.
ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಪ್ರಕಟಿಸುತ್ತಿದ್ದಂತೆ ಅವರ ಬೆಂಬಲಿಗರು ಎಪಿಎಂಸಿಯ ಹೊರಗಡೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬಿಜೆಪಿಯ ಅನಿಲ ಪನ್ನಾಳೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಯುಕ್ತ ಬಿಜೆಪಿ ಕಾಯಕರ್ತರು ಸಮಿತಿಯ ಆವರಣದಲ್ಲಿ ವಿಜಯೋತ್ಸವ ಆಚರಿಸಿದರು.

‘ಎಪಿಎಂಸಿಯನ್ನು ವಶಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ನವರು ಸಾಕಷ್ಟು ಕಸರತ್ತು ನಡೆಸಿದ್ದರು. ಆದರೆ, ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ’ ಎಂದು ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಪ್ರತಿಕ್ರಿಯಿಸಿದರು.
ನೂತನ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಸುನೀತಾ ಜಗನ್ನಾಥ ಯರನಳ್ಳಿ ಗುರುವಾರ ಜೆಡಿಎಸ್‌ಗೆ ಸೇರಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.