ಬಸವಕಲ್ಯಾಣ: ಬಸವಣ್ಣನವರ ನೇತೃತ್ವದಲ್ಲಿ 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಿರ್ಮಿಸಿದ್ದ ಅನುಭವ ಮಂಟಪ ಪ್ರಜಾಪ್ರಭುತ್ವ ತಳಹದಿಯದ್ದು. ವಚನಗಳ ರಚನೆಯ ಮೂಲಕ ಜನಸಾಮಾನ್ಯರಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬೆಳೆಸುವ ಕೇಂದ್ರವಾಗಿತ್ತು. ಈ ಕಾರಣಕ್ಕಾಗಿ ಪ್ರತಿವರ್ಷ ಇಲ್ಲಿ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ ಆಯೋಜಿಸಿ ಈ ನಿಟ್ಟಿನಲ್ಲಿ ಪ್ರಚಾರ, ಪ್ರಸಾರಗೈಯಲಾಗುತ್ತಿದೆ. ನವೆಂಬರ್ 23 ಮತ್ತು 24 ರಂದು 45ನೇ ಉತ್ಸವವಿದ್ದು ವಿವಿಧ ಗೋಷ್ಠಿಗಳು ನಡೆಯಲಿವೆ.
ಬಸವಕಲ್ಯಾಣ ನಗರದಲ್ಲಿ ಬವಣ್ಣನವರ ಕಾಲದ ಕೋಟೆ, ಪರುಷಕಟ್ಟೆ ಹೊರತುಪಡಿಸಿದರೆ ಇತರೆ ಯಾವುದೇ ಕಟ್ಟಡಗಳ ಕುರುಹುಗಳು ಪತ್ತೆ ಆಗಿಲ್ಲ. ಅನುಭವ ಮಂಟಪವೂ ಎಲ್ಲಿತ್ತೆಂಬುದು ಯಾರಿಗೂ ಗೊತ್ತಿಲ್ಲ. ಆದರೂ, ಬಸವಾದಿ ಶರಣರು ಸಾರಿದ ಸಮಾನತೆ, ಕಾಯಕ, ದಾಸೋಹ ತತ್ವದ ಪ್ರಸಾರವಾಗಲು ಮತ್ತು ಬಸವಾದಿ ಶರಣರ ಇರುವಿಕೆಯ ದಿವ್ಯಾನುಭೂತಿ ದೊರಕಲು ಕಟ್ಟಡವೊಂದರ ಅಗತ್ಯತೆ ಇತ್ತೆಂದು ಹೇಳಬೇಕು. ಬಸವತತ್ವದ ಪ್ರೇರಣಾ ಸ್ಥಾನವಾಗುವ ಸ್ಮಾರಕವೊಂದನ್ನು ಕಟ್ಟಲೇಬೇಕಾಯಿತು.
ಭಾಲ್ಕಿ ಹಿರೇಮಠದ ಲಿಂ.ಚನ್ನಬಸವ ಪಟ್ಟದ್ದೇವರು, ಮಾಜಿ ಸಚಿವ ಭೀಮಣ್ಣ ಖಂಡ್ರೆ ಮತ್ತಿತರರು ಪ್ರಥಮವಾಗಿ ತ್ರಿಪುರಾಂತ ಕೆರೆ ದಂಡೆಯಲ್ಲಿ ಅನುಭವ ಮಂಟಪ ನಿರ್ಮಿಸಿದ್ದಾರೆ. 1955ರಲ್ಲಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೆರಿಸಲಾಯಿತು. ಮೈಸೂರು ಸಂಸ್ಥಾನದ ಜಯಚಾಮರಾಜೇಂದ್ರ ಒಡೆಯರ್ ಅವರು ಇದರ ಅಡಿಗಲ್ಲು ನೆರವೇರಿಸಿದ್ದರು. ಹಲವಾರು ಅಡೆತಡೆಗಳ ಮಧ್ಯೆಯೂ ಕೆಲ ವರ್ಷಗಳ ನಂತರ ಕಟ್ಟಡ ತಲೆಯೆತ್ತಿತು.
ಇಲ್ಲಿ ವಿವಿಧ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವುದಕ್ಕಾಗಿ ಹುಟ್ಟಿಕೊಂಡ ವಿಶ್ವ ಬಸವಧರ್ಮ ಟ್ರಸ್ಟ್ ವತಿಯಿಂದ ಮಂಟಪದ ವ್ಯವಸ್ಥೆ ನೋಡಿಕೊಳ್ಳಲಾಗುತ್ತಿದೆ. ಟ್ರಸ್ಟ್ ಅಧ್ಯಕ್ಷ ಭಾಲ್ಕಿಯ ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ಪ್ರತಿವರ್ಷ ಮೊದಲಿನಿಂದಲೂ ಆಯೋಜಿಸುತ್ತಿದ್ದ ಶರಣ ಕಮ್ಮಟದ ಜೊತೆಯಲ್ಲಿ ‘ಅನುಭವ ಮಂಟಪ ಉತ್ಸವ’ವೂ ಅದ್ದೂರಿಯಾಗಿ ಆಚರಣೆ ಆಗುತ್ತಿದೆ.
ಸರ್ಕಾರದಿಂದ ಮಂಟಪ ನಿರ್ಮಾಣ: ಬಸವಕಲ್ಯಾಣದಲ್ಲಿನ ಶರಣ ಸ್ಮಾರಕಗಳ ಜೀರ್ಣೋದ್ಧಾರಕ್ಕಾಗಿ ಸರ್ಕಾರ 2005ರಲ್ಲಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ರಚಿಸಿತು. ಈ ಮಂಡಳಿಯ ಮೂಲಕ 19 ಸ್ಮಾರಕಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಯಿತು. ಭವ್ಯ ಅನುಭವ ಮಂಟಪದ ಪುನರ್ ನಿರ್ಮಾಣವೂ ಆಗಬೇಕು ಎಂದು ಅನೇಕರು ಒತ್ತಾಯಿಸಿದರು. ಆದ್ದರಿಂದ ₹ 620 ಕೋಟಿ ವೆಚ್ಚದಲ್ಲಿ ಮೊದಲಿದ್ದ ಅನುಭವ ಮಂಟಪದ ಪಕ್ಕದಲ್ಲಿಯೇ ಕಟ್ಟಡ ನಿರ್ಮಿಸಲಾಗುತ್ತಿದ್ದು ಕೆಲಸ ಪೂರ್ಣಗೊಳ್ಳುವ ಹಂತದಲ್ಲಿದೆ.
ಈ ಹೊಸ ಅನುಭವ ಮಂಟಪ ಹೇಗಿರಲಿದೆ ಎಂಬುದರ ಬಗ್ಗೆ ಸಮಿತಿಯು ಈಗಾಗಲೇ ವಿಸ್ತ್ರತ ಮಾಹಿತಿ ನೀಡಿದೆ. ಮಂಟಪದ ಪರಿಸರವನ್ನು ಮಹಾಮನೆ ಕ್ಷೇತ್ರವೆಂದು ಹೆಸರಿಸಿ ಸುತ್ತುಗೋಡೆ ಕಟ್ಟುವುದು. ಮಧ್ಯದ 7 ಎಕರೆ ಜಾಗದಲ್ಲಿ 108 ಅಡಿ ಎತ್ತರದ ಗುಮ್ಮಟವನ್ನು ಹೋಲುವ ಇಷ್ಟಲಿಂಗಾಕೃತಿಯ ಮಂಟಪ ನಿರ್ಮಿಸಲಾಗುತ್ತದೆ. ಸುತ್ತಲಿನಲ್ಲಿ ಷಟಸ್ಥಲವನ್ನು ನೆನಪಿಸುವಂತೆ ಆರು ಅಂತಸ್ತುಗಳ ಕಟ್ಟಡವಿರಲಿದೆ. ಮೊದಲ ಅಂತಸ್ತಿಗೆ ಭಕ್ತಸ್ಥಲ, ಎರಡನೆಯದಕ್ಕೆ ಮಾಹೇಶ ಸ್ಥಲ, ಮೂರನೆಯ ಅಂತಸ್ತಿಗೆ ಪ್ರಸಾದಿ ಸ್ಥಲ, ನಾಲ್ಕನೆಯದಕ್ಕೆ ಪ್ರಾಣಲಿಂಗಿ ಸ್ಥಲ, ಐದನೆಯದಕ್ಕೆ ಶರಣ ಸ್ಥಲ, ಆರನೆಯ ಅಂತಸ್ತಿಗೆ ಐಕ್ಯಸ್ಥಲ ಎಂದು ಹೆಸರಿಸಲಾಗುತ್ತದೆ.
ಐದನೇ ಅಂತಸ್ತು ಶರಣ ಸ್ಥಲದಲ್ಲಿ ಶೂನ್ಯ ಪೀಠ ಮತ್ತು 770 ಅಮರ ಗಣಂಗಳ ಗುರುತಾಗಿ ಅಷ್ಟು ಸಂಖ್ಯೆಯ ಆಸನಗಳ ವ್ಯವಸ್ಥೆ ಇರುವುದು. ಶರಣರ ಜೀವನ ಸಾಧನೆ ಬಿಂಬಿಸುವ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯೂ ಮಾಡಲಾಗುತ್ತದೆ. ಉಬ್ಬು ಚಿತ್ರಗಳು ಸಹ ಇರಲಿವೆ. ಇದೆಲ್ಲದರ ನಿರ್ವಹಣೆಗೆ ಕಾರ್ಯಾಲಯ ಇರಲಿದೆ. ಗ್ರಂಥ ಭಂಡಾರ, ಸಂಶೋಧನಾ ಕೇಂದ್ರ, ಪ್ರಾರ್ಥನಾ ಮಂದಿರ, ಯೋಗ ಕೇಂದ್ರ, ಅನುಷ್ಠಾನ ಗವಿ, ಚಿಂತನಕೋಣೆ, ಪ್ರಸಾದ ನಿಲಯ, ಅತಿಥಿ ಗೃಹ, ಅವಲೋಕನ ಭವನ, ವಾಹನ ನಿಲ್ದಾಣ, ಉಗ್ರಾಣ, ಉಪವನ ಇತ್ಯಾದಿಗಳ ವ್ಯವಸ್ಥೆಯೂ ಇರಲಿದೆ. ಒಟ್ಟಾರೆಯಾಗಿ ಮುಂದಿನ ದಿನಗಳಲ್ಲಿ ಶರಣ ಸಂಸ್ಕೃತಿ ಇಲ್ಲಿ ಪ್ರತಿಬಿಂಬಿತವಾಗಲಿದ್ದು ಇದು ಅಂತರರಾಷ್ಟ್ರೀಯ ಪ್ರವಾಸಿ ತಾಣವೂ ಆಗುವುದರಲ್ಲಿ ಸಂಶಯವಿಲ್ಲ.
ನವೆಂಬರ್ 23 ಮತ್ತು 24 ರಂದು ಉತ್ಸವ ನಾಲ್ವರು ಸಾಧಕರಿಗೆ ಪ್ರಶಸ್ತಿ ಪ್ರದಾನ 45 ನೇ ವರ್ಷದ ವಿಶೇಷ ಕಾರ್ಯಕ್ರಮ
ಅನುಭವ ಮಂಟಪ ಉತ್ಸವ ಸಮಾನತೆಯ ಉತ್ಸವ. ಇದೊಂದು ಕಾಯಕ ದಾಸೋಹತತ್ವ ಸಾರುವ ವಚನಸಾಹಿತ್ಯದ ಮೂಲಕ ಅರಿವು ಮೂಡಿಸುವ ಆಂದೋಲನಬಸವಲಿಂಗ ಪಟ್ಟದ್ದೇವರು ಅಧ್ಯಕ್ಷ ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.