ADVERTISEMENT

ಶರಣರ ತತ್ವ ಪ್ರಸಾರಕ್ಕೆ ‘ಅನುಭವ ಮಂಟಪ ಉತ್ಸವ’: ಸಚಿವ ಈಶ್ವರ ಬಿ. ಖಂಡ್ರೆ

ಮೇಘಾಲಯದ ರಾಜ್ಯಪಾಲರಿಂದ ಉತ್ಸವ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 7:23 IST
Last Updated 19 ನವೆಂಬರ್ 2024, 7:23 IST
ಸಚಿವರಾದ ಈಶ್ವರ ಬಿ. ಖಂಡ್ರೆ, ರಹೀಂ ಖಾನ್‌, ಬಸವಲಿಂಗ ಪಟ್ಟದ್ದೇವರು ಹಾಗೂ ಗುರುಬಸವ ಪಟ್ಟದ್ದೇವರು ಬೀದರ್‌ನಲ್ಲಿ ಸೋಮವಾರ ಅನುಭವ ಮಂಟಪ ಉತ್ಸವದ ಕರಪತ್ರಗಳನ್ನು ಬಿಡುಗಡೆಗೊಳಿಸಿದರು
ಸಚಿವರಾದ ಈಶ್ವರ ಬಿ. ಖಂಡ್ರೆ, ರಹೀಂ ಖಾನ್‌, ಬಸವಲಿಂಗ ಪಟ್ಟದ್ದೇವರು ಹಾಗೂ ಗುರುಬಸವ ಪಟ್ಟದ್ದೇವರು ಬೀದರ್‌ನಲ್ಲಿ ಸೋಮವಾರ ಅನುಭವ ಮಂಟಪ ಉತ್ಸವದ ಕರಪತ್ರಗಳನ್ನು ಬಿಡುಗಡೆಗೊಳಿಸಿದರು   

ಬೀದರ್‌: ‘ಬಸವಾದಿ ಶರಣರ ಸಮಾಜೋಧಾರ್ಮಿಕ ಕ್ರಾಂತಿ ಹಾಗೂ ಸಮ ಸಮಾಜದ ತತ್ವಾದರ್ಶಗಳ ಪ್ರಸಾರಕ್ಕಾಗಿ ಆರಂಭಿಸಿರುವ 45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ನ. 23, 24ರಂದು ಬಸವಕಲ್ಯಾಣದ ಅನುಭವ ಮಂಟಪದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಉತ್ಸವ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ಆಧುನಿಕ ಅನುಭವ ಮಂಟಪದ ಸ್ಥಾಪಕರೂ ಆದ ಭಾಲ್ಕಿ ಹಿರೇಮಠ ಸಂಸ್ಥಾನದ ಚನ್ನಬಸವ ಪಟ್ಟದ್ದೇವರು ಬಸವತತ್ವ ಪ್ರಸಾರಕ್ಕಾಗಿ ಅನುಭವ ಮಂಟಪ ಉತ್ಸವ ಆರಂಭಿಸಿದ್ದರು. ಅದನ್ನು 45 ವರ್ಷಗಳಿಂದ ಮುನ್ನಡೆಸಿಕೊಂಡು ಬರಲಾಗುತ್ತಿದೆ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಬಸವಾದಿ ಶರಣರ ವಿಚಾರಗಳು ಎಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿವೆ. ಈ ಕಾರ್ಯಕ್ರಮದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಮಹಿಳಾ ಗೋಷ್ಠಿ, ರೈತ ಗೋಷ್ಠಿ, ಯುವ ಗೋಷ್ಠಿ ಹೀಗೆ ಹಲವು ಕಾರ್ಯಕ್ರಮಗಳು ನಡೆಯಲಿವೆ. ನಾಡಿನ ಪೂಜ್ಯರು, ಸಾಹಿತಿಗಳು, ವಿದ್ವಾಂಸರು ಭಾಗವಹಿಸಿ ಜ್ಞಾನ ದಾಸೋಹ ಮಾಡುವರು ಎಂದು ತಿಳಿಸಿದರು.

ADVERTISEMENT

ನ. 23ರಂದು ಬೆಳಿಗ್ಗೆ 9.30ಕ್ಕೆ ಬಸವೇಶ್ವರ ದೇವಸ್ಥಾನ ವಿಶ್ವಸ್ಥ ಮಂಡಳಿ ಅಧ್ಯಕ್ಷ ಶಶಿಕಾಂತ ದುರ್ಗೆ ಗುರುಬಸವ ಪೂಜೆ ನೆರವೇರಿಸುವರು. ಸಾಹಿತಿ ಸಿದ್ದಣ್ಣ ಲಂಗೋಟಿ ಧ್ವಜಾರೋಹಣ ನೆರವೇರಿಸುವರು. ಬೆಳಿಗ್ಗೆ 11ಕ್ಕೆ ನಡೆಯಲಿರುವ ಪ್ರಧಾನ ಕಾರ್ಯಕ್ರಮವನ್ನು ಮೇಘಾಲಯದ ರಾಜ್ಯಪಾಲ ಸಿ.ಎಚ್‌. ವಿಜಯಶಂಕರ್‌ ಉದ್ಘಾಟಿಸುವರು. ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಪ್ರಶಸ್ತಿ ಪ್ರದಾನ ಮಾಡುವರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಗ್ರಂಥ ಬಿಡುಗಡೆಗೊಳಿಸುವರು. ಗದಗ ತೋಂಟದಾರ್ಯ ಸಿದ್ದರಾಮ ಸ್ವಾಮೀಜಿ, ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸುವರು ಎಂದು ವಿವರಿಸಿದರು.

ಮಧ್ಯಾಹ್ನ 2ಕ್ಕೆ ‘ಲಿಂಗಾಯತ ಹೋರಾಟ: ಮುಂದೇನು?’ ಕುರಿತು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಉಪನ್ಯಾಸ ನೀಡುವರು. ಸಂಜೆ ‘ಮಹಾಕ್ರಾಂತಿ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ನ. 24ರಂದು ಬೆಳಿಗ್ಗೆ 6ಕ್ಕೆ ನಗೆಯೋಗ ಕೂಟ ಜರುಗಲಿದೆ. ಬೆಳಿಗ್ಗೆ 7ಕ್ಕೆ ಸಾಮೂಹಿಕ ಇಷ್ಟಲಿಂಗ ಪೂಜಾ ಯೋಗ ಜರುಗಲಿದೆ. ಯೋಗ ತಜ್ಞ ಡಾ. ಅಮರನಾಥ ಸೋಲಪೂರೆ ಪ್ರಾತ್ಯಕ್ಷಿಕೆ ತೋರಿಸುವರು. ಬೆಳಿಗ್ಗೆ 10ಕ್ಕೆ ನಡೆಯಲಿರುವ ‘ಬಸವಕಲ್ಯಾಣ ವಿಕಾಸ: ಅಂದು–ಇಂದು–ಮುಂದು’ ಕುರಿತು ಸಾಹಿತಿ ಶಿವಶರಣಪ್ಪ ಹುಗ್ಗೆ ಪಾಟೀಲ ಉಪನ್ಯಾಸ ನೀಡುವರು. 11 ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುವುದು. ಮಧ್ಯಾಹ್ನ 1ಕ್ಕೆ ನಡೆಯಲಿರುವ ಸಮಾರೋಪದ ಸಾನ್ನಿಧ್ಯವನ್ನು ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ, ಗುರುಬಸವ ಪಟ್ಟದ್ದೇವರು ವಹಿಸುವರು. ಕೂಡಲಸಂಗಮ ಬಸವಧರ್ಮ ಪೀಠದ ಮಾತೆ ಗಂಗಾದೇವಿ, ಬಸವ ಸೇವಾ ಪ್ರತಿಷ್ಠಾನದ ಅಕ್ಕ ಗಂಗಾಂಬಿಕೆ ಸಮ್ಮುಖ ವಹಿಸುವರು ಎಂದರು.

ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಅನುಭವ ಮಂಟಪ ಉತ್ಸವದ ಅಂಗವಾಗಿ ನ. 4ರಿಂದಲೇ ‘ಆರೋಗ್ಯ ಆಧ್ಯಾತ್ಮ’ ಕುರಿತು ಪ್ರವಚನ ಆರಂಭಗೊಂಡಿದೆ. 21ರಂದು ಕೊನೆಗೊಳ್ಳಲಿದೆ. ಯೋಗ, ವಚನ ಪಾರಾಯಣ ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗುತ್ತಿವೆ. ನ. 23, 24ರಂದು ಮುಖ್ಯ ಕಾರ್ಯಕ್ರಮಗಳು ನಡೆಯಲಿದ್ದು, ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಪೌರಾಡಳಿತ ಸಚಿವ ರಹೀಂ ಖಾನ್‌, ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಭಾರತೀಯ ಬಸವ ಬಳಗದ ರಾಜ್ಯ ಘಟಕದ ಅಧ್ಯಕ್ಷ ಬಾಬು ವಾಲಿ, ಕರ್ನಾಟಕ ರಾಜ್ಯ ಸಹಕಾರ ಮಹಿಳಾ ಮಹಾಮಂಡಳದ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ, ಚಂದ್ರಶೇಖರ ಹೆಬ್ಬಾಳೆ, ಜೈರಾಜ ಖಂಡ್ರೆ, ಸಿದ್ದಯ್ಯ ಕಾವಡಿಮಠ, ವೈಜಿನಾಥ ಕಾಮಶೆಟ್ಟಿ ಹಾಜರಿದ್ದರು.

ಈ ಸಾಲಿನಿಂದ ‘ಬಸವ ಭಾಸ್ಕರ’ ರಾಷ್ಟ್ರೀಯ ಪ್ರಶಸ್ತಿ
‘ಅನುಭವ ಮಂಟಪ ಉತ್ಸವದಲ್ಲಿ ಈ ಸಾಲಿನಿಂದ ಬಸವಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ₹1 ಲಕ್ಷ ನಗದು ಸ್ಮರಣಿಕೆ ಒಳಗೊಂಡಿರಲಿದೆ. ಹಾರಕೂಡ ಹಿರೇಮಠ ಸಂಸ್ಥಾನದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಈ ಪ್ರಶಸ್ತಿ ಸ್ಥಾಪಿಸಿದ್ದು ಅದರ ಮೊತ್ತ ಅವರೇ ಭರಿಸಲು ಮುಂದೆ ಬಂದಿದ್ದಾರೆ’ ಎಂದು ಬಸವಲಿಂಗ ಪಟ್ಟದ್ದೇವರು ತಿಳಿಸಿದರು. ಬಸವಭಾಸ್ಕರ ರಾಷ್ಟ್ರೀಯ ಪ್ರಶಸ್ತಿಗೆ ಮಹಾರಾಷ್ಟ್ರ ಕೊಲ್ಲಾಪುರದ ಬಸವ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಬಿ.ಎಂ. ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ. ‘ಡಾ. ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪ’ ರಾಷ್ಟ್ರೀಯ ಪ್ರಶಸ್ತಿಗೆ ಬೆಂಗಳೂರಿನ ಡಾ.ಕೆ. ಎಸ್‌. ರಾಜಣ್ಣ ಅವರನ್ನು ಆಯ್ಕೆ ಮಾಡಲಾಗಿದೆ. ₹1 ಲಕ್ಷ ನಗದು ಸ್ಮರಣಿಕೆ ಒಳಗೊಂಡಿರುವ ಪ್ರಶಸ್ತಿಯ ಭಕ್ತಿ ದಾಸೋಹವನ್ನು ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆದ ಸಚಿವ ಈಶ್ವರ ಬಿ. ಖಂಡ್ರೆ ಮಾಡುವರು ಎಂದು ವಿವರಿಸಿದರು. ‘ಅನುಭವ ಮಂಟಪ’ ರಾಷ್ಟ್ರೀಯ ಪ್ರಶಸ್ತಿಯನ್ನು ಬಸವ ಟಿ.ವಿ. ಸಂಸ್ಥಾಪಕ ಈ. ಕೃಷ್ಣಪ್ಪ ಅವರಿಗೆ ಪ್ರದಾನ ಮಾಡಲಾಗುವುದು. ಗೋರಟಾ (ಬಿ) ಗ್ರಾಮದ ಗಂಗಮ್ಮ ಹಾಗೂ ಗುರುನಾಥ ಪಟ್ನೆ ಅವರು ₹1 ಲಕ್ಷ ನಗದು ಸ್ಮರಣಿಕೆಯ ಭಕ್ತಿ ದಾಸೋಹ ಮಾಡುವರು. ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಭಕ್ತಿ ದಾಸೋಹ ಮಾಡಿರುವ ₹50 ಸಾವಿರ ನಗದು ಸ್ಮರಣಿಕೆ ಹೊಂದಿರುವ ಪ್ರಶಸ್ತಿಗೆ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಅವರಿಗೆ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
‘ಇಂದು ಮುಂದು ಎಂದೆಂದೂ ಲಿಂಗಾಯತ ಸ್ವತಂತ್ರ ಧರ್ಮ’
‘ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮವು ಪ್ರತ್ಯೇಕ ಧರ್ಮವಾಗಿದೆ. ಇಂದು ಮುಂದು ಎಂದೆಂದೂ ಲಿಂಗಾಯತ ಸ್ವತಂತ್ರ ಧರ್ಮವಾಗಿರಲಿದೆ’ ಎಂದು ಬಸವಲಿಂಗ ಪಟ್ಟದ್ದೇವರು ಸ್ಪಷ್ಟಪಡಿಸಿದರು. ಲಿಂಗಾಯತ ಪ್ರತ್ಯೇಕ ಧರ್ಮ ಘೋಷಣೆಗೆ ಸಂಬಂಧಿಸಿದಂತೆ ನಿರಂತರವಾಗಿ ಪ್ರಯತ್ನಗಳು ನಡೆಯುತ್ತಿವೆ. ಲಿಂಗಾಯತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುವುದು. ವೀರಶೈವ ಲಿಂಗಾಯತ ಮಹಾಸಭೆ ಒಂದಾದರೆ ಕೆಲಸ ಬೇಗ ಆಗುತ್ತದೆ ಎಂದು ಪಕ್ಕದಲ್ಲೇ ಕುಳಿತಿದ್ದ ಸಚಿವ ಈಶ್ವರ ಬಿ. ಖಂಡ್ರೆಯವರತ್ತ ನೋಡಿ ಹೇಳಿದರು. ಅದಕ್ಕೆ ಖಂಡ್ರೆಯವರು ಪ್ರತಿಕ್ರಿಯಿಸಿ ‘ನಾವೆಲ್ಲ ಒಂದಾಗಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.
‘ಬಸವ ಉತ್ಸವ’ ಚರ್ಚಿಸಿ ತೀರ್ಮಾನ
‘ಬಸವಕಲ್ಯಾಣದಲ್ಲಿ ‘ಬಸವ ಉತ್ಸವ’ ಆಯೋಜನೆಗೆ ಸಂಬಂಧಿಸಿದಂತೆ ಮಠಾಧೀಶರು ಗುರುಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು. ಹೋದ ವರ್ಷ ‘ಬಸವ ಉತ್ಸವ’ ಆಚರಿಸಿರಲಿಲ್ಲ. ಈ ವರ್ಷವಾದರೂ ಬಸವ ಉತ್ಸವ ಮಾಡುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು. ನೂತನ ಅನುಭವ ಮಂಟಪ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ ₹300 ಕೋಟಿ ಖರ್ಚಾಗಿದ್ದು ಅರ್ಧ ಕೆಲಸ ಮುಗಿದಿದೆ. 2025ರ ಡಿಸೆಂಬರ್‌ನೊಳಗೆ ಮುಗಿಸಿ ಉದ್ಘಾಟಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ. ಸಂಪೂರ್ಣ ಬಸವಕಲ್ಯಾಣದ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
‘ಪಾದಯಾತ್ರೆಯಲ್ಲಿ ಕಲ್ಯಾಣಕ್ಕೆ ಬಸವಭಕ್ತರು’
‘45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದಲ್ಲಿ ಪಾಲ್ಗೊಳ್ಳಲು ಅನೇಕ ಕಡೆಗಳಿಂದ ಬಸವ ಭಕ್ತರು ಪಾದಯಾತ್ರೆ ಮೂಲಕ ಕಲ್ಯಾಣಕ್ಕೆ ಆಗಮಿಸಲಿದ್ದಾರೆ’ ಎಂದು ಬಸವಲಿಂಗ ಪಟ್ಟದ್ದೇವರು ತಿಳಿಸಿದರು. ರಾಜ್ಯ ಸೇರಿದಂತೆ ನೆರೆಯ ಮಹಾರಾಷ್ಟ್ರ ತೆಲಂಗಾಣ ಸೇರಿದಂತೆ ವಿವಿಧ ಭಾಗಗಳಿಂದ ಬಸವ ಭಕ್ತರು ಕಲ್ಯಾಣಕ್ಕೆ ಬರಲಿದ್ದಾರೆ. ಈಗಾಗಲೇ ಕೆಲವು ಭಾಗಗಳಿಂದ ಪಾದಯಾತ್ರೆ ಆರಂಭವಾಗಿದೆ. ಎಲ್ಲರೂ ನವೆಂಬರ್‌ 22ರಂದು ಕಲ್ಯಾಣ ತಲುಪುವರು. ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನದಿಂದ ಅನುಭವ ಮಂಟಪದ ವರೆಗೆ ನಡೆಯಲಿರುವ ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು. ಶಿವಶರಣರ ವೇಷಧಾರಿಗಳು ಮೆರವಣಿಗೆಯ ಮೆರಗು ಹೆಚ್ಚಿಸುವರು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.