ADVERTISEMENT

ರಾಷ್ಟ್ರಮಟ್ಟದಲ್ಲಿ ಬಸವ ಜಯಂತಿ ಆಚರಣೆಗೆ ಪ್ರಧಾನಿಗೆ ಪತ್ರ: ಸಿ.ಎಚ್. ವಿಜಯಶಂಕರ್‌

ಅನುಭವ ಮಂಟಪ ಉತ್ಸವದಲ್ಲಿ ಮೇಘಾಲಯದ ರಾಜ್ಯಪಾಲರ ಭರವಸೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 19:38 IST
Last Updated 23 ನವೆಂಬರ್ 2024, 19:38 IST
<div class="paragraphs"><p>ವಿಶ್ವ ಬಸವಧರ್ಮ ಟ್ರಸ್ಟ್‌ನಿಂದ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ 45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ</p></div>

ವಿಶ್ವ ಬಸವಧರ್ಮ ಟ್ರಸ್ಟ್‌ನಿಂದ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ 45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ

   

ಬಸವಕಲ್ಯಾಣ (ಬೀದರ್‌ ಜಿಲ್ಲೆ): ‘ಬಸವ ಜಯಂತಿಯನ್ನು ರಾಷ್ಟ್ರಮಟ್ಟದಲ್ಲಿ ಆಚರಿಸಬೇಕು. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಪತ್ರ ಬರೆಯುವೆ’ ಎಂದು ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ್‌ ಭರವಸೆ ನೀಡಿದರು.

ವಿಶ್ವ ಬಸವಧರ್ಮ ಟ್ರಸ್ಟ್‌ನಿಂದ ಇಲ್ಲಿನ ಅನುಭವ ಮಂಟಪದ ಪ್ರಾಂಗಣದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ 45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಬಸವ ಜಯಂತಿ ರಾಷ್ಟ್ರಮಟ್ಟದಲ್ಲಿ ಆಚರಿಸಬೇಕು ಎಂಬ ಬೇಡಿಕೆಗೆ ಖಂಡಿತವಾಗಿಯೂ ನನ್ನ ಸಹಮತವಿದೆ. ಈ ಸಂಬಂಧ ಪ್ರಧಾನಿಗೆ ಪತ್ರ ಬರೆದು ಚರ್ಚಿಸುವೆ. ಜಯಂತಿ ಆಚರಣೆಗೆ ಅವರಲ್ಲಿ ವಿಶೇಷ ಪ್ರಾರ್ಥನೆ ಮಾಡುತ್ತೇನೆ’ ಎಂದು ಹೇಳಿದರು.

‘ಬಸವಕಲ್ಯಾಣದ ಅನುಭವ ಮಂಟಪದ ಪರಿಸರದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂಬ ಸ್ವಾಮೀಜಿಗಳ ಬೇಡಿಕೆ ಬಹಳ ಅರ್ಥಪೂರ್ಣವಾಗಿದೆ. ಶರಣರ ತತ್ವಾದರ್ಶ, ಸಂದೇಶಗಳು ಇಡೀ ಭರತ ಭೂಮಿಗೆ ತಲುಪಬೇಕಾದರೆ ಈ ಕೆಲಸ ಆಗಬೇಕಾದದ್ದು ಅತ್ಯಗತ್ಯ. ಈ ದೇಶದ ಸಂಸತ್ತು ಪ್ರಜಾಪ್ರಭುತ್ವದ ದೇಗುಲವಾದರೆ, ಅನುಭವ ಮಂಟಪ ಈ ದೇಶದ ಧಾರ್ಮಿಕ ದೇಗುಲ’ ಎಂದು ವ್ಯಾಖ್ಯಾನಿಸಿದರು.

‘ಕನ್ನಡ ನಾಡಿನ ಇನ್ನೊಂದು ಹೆಸರೇ ಶರಣರ ನಾಡು. ಕನ್ನಡ ನಾಡನ್ನು ಶರಣರ ನಾಡಾಗಿ ಪರಿವರ್ತಿಸಿದವರು 12ನೇ ಶತಮಾನದ ಬಸವಾದಿ ಶರಣರು. ಲೋಕಕಲ್ಯಾಣ ಹಾಗೂ ಮನುಕುಲದ ಒಳಿತಿಗಾಗಿ ಶರಣರು ಅವರ ಬದುಕು ಸವೆಸಿದ್ದರು. ಶರಣ ಸಂಸ್ಕೃತಿ ಈ ನಾಡಿನಿಂದ ಮರೆಯಾಗಲು ಸಾಧ್ಯವಿಲ್ಲ. ಎಲ್ಲ ಸಮಸ್ಯೆಗಳಿಗೆ ಶರಣ ಮಾರ್ಗದಲ್ಲಿ ಪರಿಹಾರವಿದೆ. ಈ ನಾಡಿನ ಸುಭಿಕ್ಷೆಗಾಗಿ ಇರುವ ಏಕೈಕ ಮಾರ್ಗವೆಂದರೆ ಶರಣ ಮಾರ್ಗ. ಮನುಕುಲದ ಒಳಿತಿಗಾಗಿ ಹುಟ್ಟಿಕೊಂಡಿದ್ದೇ ಶರಣ ಸಂಸ್ಕೃತಿ’ ಎಂದು ಅಭಿಪ್ರಾಯಪಟ್ಟರು.

ಬಸವಾದಿ ಶರಣರು 12ನೇ ಶತಮಾನದಲ್ಲಿ ಸ್ಥಾಪಿಸಿದ್ದ ಸಮ ಸಮಾಜ, ಸಮೃದ್ಧಿ, ಶಾಂತಿಯ ವಾತಾವರಣ ಪುನಃ ಸೃಷ್ಟಿಯಾಗಬೇಕು. ಆ ಶಕ್ತಿ ಕಲ್ಯಾಣ ನಾಡು ಪುನಃ ಜಗತ್ತಿಗೆ ಕೊಡಲಿ ಎಂದು ಹಾರೈಸಿದರು.

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಮಾತನಾಡಿ, ‘ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂಬ ದಶಕಗಳ ಕೂಗು ಇದೆ. ಬರುವ ದಿನಗಳಲ್ಲಿ ನಮ್ಮ ಸರ್ಕಾರ ವಚನ ವಿ.ವಿ. ಸ್ಥಾಪಿಸಲಿದೆ’ ಎಂದು ಆಶ್ವಾಸನೆ ನೀಡಿದರು.

ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಗದಗ ತೋಂಟದಾರ್ಯ ಸಂಸ್ಥಾನ ಮಠದ ತೋಂಟದ ಸಿದ್ದರಾಮ ಸ್ವಾಮೀಜಿ, ಇಳಕಲ್‌ ಗುರುಮಹಾಂತ ಸ್ವಾಮೀಜಿ, ಹಾರಕೂಡ ಹಿರೇಮಠ ಸಂಸ್ಥಾನದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ನೆಲಮಂಗಲದ ಪವಾಡಶ್ರೀ ಬಸವಣ್ಣ ದೇವರ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಶಾಸಕರಾದ ಶರಣು ಸಲಗರ, ಎಂ.ಜಿ. ಮುಳೆ, ಶಶಿಲ್‌ ಜಿ. ನಮೋಶಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಮುಖಂಡ ವಿಜಯ್‌ ಸಿಂಗ್‌ ಹಾಜರಿದ್ದರು.

12ನೇ ಶತಮಾನದಲ್ಲಾದ ವಚನ ಕ್ರಾಂತಿ ಕನ್ನಡ ಭಾಷೆಯ ಬದಲು ಹಿಂದಿ ಅಥವಾ ಇಂಗ್ಲಿಷ್‌ ಭಾಷೆಯಲ್ಲಾಗಿದ್ದರೆ ಜಗತ್ತಿನ ಅತಿದೊಡ್ಡ ಕ್ರಾಂತಿ ಅನಿಸಿಕೊಳ್ಳುತ್ತಿತ್ತು
ಸಿ.ಎಚ್‌. ವಿಜಯಶಂಕರ್ ಮೇಘಾಲಯದ ರಾಜ್ಯಪಾಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.