ADVERTISEMENT

ಬೀದರ್‌ ನಗರಸಭೆಗೆ 100 ಪೌರ ಕಾರ್ಮಿಕರ ನೇಮಕ: ಸಚಿವ ರಹೀಂ ಖಾನ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 14:11 IST
Last Updated 27 ಸೆಪ್ಟೆಂಬರ್ 2024, 14:11 IST
ಬೀದರ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆಯನ್ನು ಸಚಿವ ರಹೀಂ ಖಾನ್‌, ಸಂಸದ ಸಾಗರ್‌ ಖಂಡ್ರೆ ಉದ್ಘಾಟಿಸಿದರು
ಬೀದರ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆಯನ್ನು ಸಚಿವ ರಹೀಂ ಖಾನ್‌, ಸಂಸದ ಸಾಗರ್‌ ಖಂಡ್ರೆ ಉದ್ಘಾಟಿಸಿದರು   

ಬೀದರ್‌: ‘ಬೀದರ್‌ ನಗರಸಭೆಗೆ ಬರುವ ದಿನಗಳಲ್ಲಿ ಹೊಸದಾಗಿ 100 ಪೌರ ಕಾರ್ಮಿಕರನ್ನು ನೇಮಕ ಮಾಡಲಾಗುವುದು’ ಎಂದು ಪೌರಾಡಳಿತ ಸಚಿವ ರಹೀಂ ಖಾನ್‌ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಬೀದರ್‌ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಈಗಾಗಲೇ ಕಳೆದ ವರ್ಷ ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡಿದ್ದ 60 ಜನರಿಗೆ ಆದೇಶ ಪತ್ರ ನೀಡಲಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಇನ್ನೂ 100 ಜನರನ್ನು ನೇಮಕ ಮಾಡಿಕೊಳ್ಳಲಾಗುವುದು. ಬೀದರ್‌ ನಗರಸಭೆಗೆ ಒಟ್ಟು 200 ಪೌರ ಕಾರ್ಮಿಕರು ಬೇಕಾಗಿದ್ದಾರೆ ಎಂದರು.

ADVERTISEMENT

20 ರಿಂದ 30 ವರ್ಷಗಳಿಂದ ವಾಟರ್‌ಮನ್‌ಗಳು ಹಾಗೂ ಚಾಲಕರು ಕೆಲಸ ಮಾಡುತ್ತಿದ್ದಾರೆ. ಅನೇಕರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಹಗಲು ರಾತ್ರಿ ಕೆಲಸ ಮಾಡುತ್ತಿರುವ ಅವರ ಸೇವೆ ದೊಡ್ಡದು. ಅವರ ಸೇವೆ ಕಾಯಂಗೊಳಿಸುವುದರ ಬಗ್ಗೆಯೂ ಚಿಂತನೆ ನಡೆದಿದೆ ಎಂದು ತಿಳಿಸಿದರು.

ನಮ್ಮ ಇಲಾಖೆಯಿಂದ ಈಗಾಗಲೇ ಕಡತಗಳನ್ನು ಕಳಿಸಲಾಗಿತ್ತು. ಆದರೆ, ಹಣಕಾಸು ಇಲಾಖೆ ಅನೇಕ ಕಾರಣಗಳನ್ನು ಕೊಟ್ಟು ಕಡತ ವಾಪಸ್‌ ಕಳಿಸಿದೆ. ಈ ಸಂಬಂಧ ಹಣಕಾಸು ಇಲಾಖೆಯ ಕಾರ್ಯದರ್ಶಿ ಜತೆ ಮಾತನಾಡುವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಸಭೆ ನಡೆಸಿ, ಬೇಡಿಕೆಗಳನ್ನು ಈಡೇರಿಸುವುದರ ಬಗ್ಗೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು. ಈ ಸಭೆಗೆ ಪೌರ ನೌಕರರ ಸಂಘದವರನ್ನು ಆಹ್ವಾನಿಸಲಾಗುವುದು. ಐದಾರೂ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಸಲ್ಲಿಸಿದ್ದೀರಿ. ಅದರಲ್ಲಿ ಕೆಲ ಪ್ರಮುಖ ಬೇಡಿಕೆಗಳನ್ನು ತಕ್ಷಣಕ್ಕೆ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜೆಇ, ಎಫ್‌ಜಿಆರ್‌, ಬಿಲ್‌ ಕಲೆಕ್ಟರ್‌ ಸೇರಿ  ಹೊಸದಾಗಿ ಒಂದು ಸಾವಿರ ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ನಾಲ್ಕು ದಿನಗಳಲ್ಲಿ ಅವರಿಗೆ ಆದೇಶ ಪತ್ರ ಸಿಗಲಿದೆ. ಕೆಲವರು ನ್ಯಾಯಾಲಯಕ್ಕೆ ಹೋಗಿರುವುದರಿಂದ ವಿಳಂಬವಾಗಿದೆ. ಎಲ್ಲ ಹುದ್ದೆಗಳನ್ನು ತುಂಬಲು ಮುಖ್ಯಮಂತ್ರಿ ಸೂಚಿಸಿದ್ದು, ಅದರಂತೆ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

7ನೇ ವೇತನ ಆಯೋಗ ರಚಿಸುವ ಸಂಬಂಧ ಈಗಾಗಲೇ ಆದೇಶವಾಗಿದೆ. ವಾರದಲ್ಲಿ ಒಂದು ದಿನ ರಜೆ ಘೋಷಿಸಲಾಗಿದೆ. ಹಿಂದೆ ಅರ್ಧ ದಿನವಿಷ್ಟೇ ಇತ್ತು. ನಗರ, ಪಟ್ಟಣಗಳನ್ನು ಸ್ವಚ್ಛ, ಸುಂದರವಾಗಿಸುವಲ್ಲಿ ಪೌರ ಕಾರ್ಮಿಕರ ಪಾತ್ರ ಬಹಳ ಮಹತ್ವದ್ದಾಗಿದೆ. ಪೌರ ಕಾರ್ಮಿಕರನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ತಿಳಿಸಿದರು.

ಸಂಸದ ಸಾಗರ್‌ ಖಂಡ್ರೆ ಮಾತನಾಡಿ, ಪೌರ ಕಾರ್ಮಿಕರ ಶ್ರಮದಿಂದ ನಗರಗಳ ಶ್ರೇಯೋಭಿವೃದ್ಧಿ ಆಗುತ್ತಿದೆ. ಸಮುದಾಯದ ಕ್ಷೇಮಾಭಿವೃದ್ಧಿಗೆ ಕಾರ್ಮಿಕರು ನೀಡುತ್ತಿರುವ ಕೊಡುಗೆ ಅಸಾಧಾರಣವಾದುದು. ಅವರ ಹಿತಾಸಕ್ತಿಗೆ ಸರ್ಕಾರವು ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಬದ್ಧವಾಗಿದೆ ಎಂದು ತಿಳಿಸಿದರು.

ಆದಿಜಾಂಬವ ನಿಗಮದ ಅಧ್ಯಕ್ಷ ಮಂಜುನಾಥ, ನಗರಸಭೆ ಅಧ್ಯಕ್ಷ ಮುಹಮ್ಮದ್‌ ಗೌಸ್‌,  ರಾಜ್ಯ ಪೌರ ನೌಕರರ ಸಂಘದ ರಾಜ್ಯ ಅಧ್ಯಕ್ಷ ಕೆ.ಪ್ರಭಾಕರ, ಕಾರ್ಯಾಧ್ಯಕ್ಷ ಸುರೇಶ ಬಬಲಾದ, ಪ್ರಧಾನ ಕಾರ್ಯದರ್ಶಿ ಎಂ.ಗುರುನಾಥ, ಜಿಲ್ಲಾ ಅಧ್ಯಕ್ಷ ಸೈಯದ್ ಖಾನ್, ಪ್ರಧಾನ ಕಾರ್ಯದರ್ಶಿ ಸುಭಾಷ್ ಧನ್ನೂರಕರ್, ಮಾಜಿ ಎಂಎಲ್‌ಸಿ ಅರವಿಂದಕುಮಾರ ಅರಳಿ, ಡಿಯುಡಿಸಿ ಮೋತಿಲಾಲ್‌ ಲಮಾಣಿ ಮತ್ತಿತರರು ಹಾಜರಿದ್ದರು.

ಸಂಗೀತಕ್ಕೆ ಪೌರ ಕಾರ್ಮಿಕರು ಮೈಮರೆತು ಕುಣಿದು ಕುಪ್ಪಳಿಸಿದರು

Cut-off box - ಕುಣಿದು ಕುಪ್ಪಳಿಸಿದ ಪೌರ ಕಾರ್ಮಿಕರು ಪೌರ ಕಾರ್ಮಿಕರ ದಿನವನ್ನು ಪೌರ ಕಾರ್ಮಿಕರು ನಗರದಲ್ಲಿ ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸಿದರು. ಕಾರ್ಯಕ್ರಮ ಏರ್ಪಡಿಸಿದ್ದ ನಗರದ ಝೀರಾ ಕನ್ವೆನ್ಷನ್‌ ಹಾಲ್‌ ಹೊರಗೆ ಅಳವಡಿಸಿದ್ದ ಸಂಗೀತಕ್ಕೆ ಪುರುಷ ಹಾಗೂ ಮಹಿಳಾ ಪೌರ ಕಾರ್ಮಿಕರು ಮೈಮರೆತು ಸಂಭ್ರಮದಿಂದ ಹೆಜ್ಜೆ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.