ಬೀದರ್: ಮುಖಂಡರಿಂದ ಮನವಿ ಸ್ವೀಕರಿಸಲು ನಿರಾಕರಿಸಿ ದರ್ಪ ತೋರಿದ ಹಾಗೂ ಬಿಎಸ್‌ಪಿ ಮುಖಂಡರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ಹುಮನಾಬಾದ್ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಅವರನ್ನು ಬಂಧಿಸಬೇಕು ಎಂದು ಬಹುಜನ ಸಮಾಜ ಪಾರ್ಟಿ ರಾಜ್ಯಾ ಘಟಕದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಒತ್ತಾಯಿಸಿದರು.
ರಾಯಚೂರು ಜಿಲ್ಲಾ ನ್ಯಾಯಾಧೀಶ ಮಾಡಿದ ಅಪರಾಧವನ್ನು ಹಿರೇಮಠ ಅವರೂ ಮಾಡಿದ್ದಾರೆ. ಮನವಿ ಕೊಡಲು ಬಂದ ಮುಖಂಡರನ್ನು ಎರಡು ತಾಸು ಕಾಯಿಸಿದ್ದಾರೆ. ನಂತರ ಪಕ್ಷದ ಮುಖಂಡರು ಗುಪ್ತಾಂಗಕ್ಕೆ ಒದ್ದಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ ಎಂದು ನಗರದಲ್ಲಿ ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ಆರೋಪಿಸಿದರು.
ಗುಪ್ತಾಂಗಕ್ಕೆ ಒದ್ದಿದ್ದರೆ ಅವರು ಬದುಕಿ ಉಳಿಯುತ್ತಿರಲಿಲ್ಲ. ಸುಳ್ಳು ದೂರು ನೀಡಿ ಬಿಎಸ್‌ಪಿ ಮುಖಂಡರನ್ನು ಜೈಲಿಗೆ ಕಳಿಸುವ ಮಾಡಿದ್ದಾರೆ. ತಹಶೀಲ್ದಾರ್ ವಿರುದ್ಧವೂ ಎಸ್‌ಸಿ,ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ಅವರನ್ನೂ ಬಂಧಿಸಿ ಜೈಲಿಗೆ ಕಳಿಸಬೇಕು ಎಂದು ಒತ್ತಾಯಿಸಿದರು.
ಪ್ರದೀಪಕುಮಾರ 2019ರಲ್ಲಿ ಪುತ್ತೂರಿನಲ್ಲಿ ಗ್ರೇಡ್ 2 ತಹಶೀಲ್ದಾರ್‌ರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ವ್ಯಕ್ತಿಯೊಬ್ಬರಿಂದ ₹ 2.40 ಲಕ್ಷ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದರು. ಒಂದು ತಿಂಗಳು ಜೈಲಿನಲ್ಲಿ ಇದ್ದರು. ಗುಬ್ಬಿ ತಹಶೀಲ್ದಾರ್ ಆಗಿದ್ದಾಗ ಅವರ ವಿರುದ್ಧ ಅರ್ಚಕರು ಪ್ರತಿಭಟನೆ ನಡೆಸಿದ್ದರು. ಎರಡೂ ತಾಲ್ಲೂಕುಗಳ ಜನತೆ ನೀಡಿದ ದೂರುಗಳು ಪತ್ರಿಕೆಗಳಲ್ಲೂ ಪ್ರಕಟವಾಗಿವೆ. ಭ್ರಷ್ಟ ಅಧಿಕಾರಿಯಿಂದ ನ್ಯಾಯ ನಿರೀಕ್ಷೆ ಸಾಧ್ಯವಿಲ್ಲ ಎಂದು ಹೇಳಿದರು.
ಬಿಎಸ್‌ಪಿ ರಾಜ್ಯ ಉಪಾಧ್ಯಕ್ಷ ಕೆ.ಬಿ.ವಾಸು, ಬೀದರ್ ವಿಧಾನಸಭಾ ಕ್ಷೇತ್ರದ ಜಿಲ್ಲಾ ಸಂಯೋಜಕ ಉಸ್ತುವಾರಿ ಸ್ವಾಮಿದಾಸ ಕೆಂಪೇನೋರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.