ADVERTISEMENT

ಜಾತ್ರೆಗೆ ಹೋದ ಪರಿಶಿಷ್ಟ ಜಾತಿಯವರ ಮೇಲೆ ಹಲ್ಲೆ

ಪೊಲೀಸ್‌ ಠಾಣೆ ಎದುರು ಪ್ರತಿಭಟನೆ: ಲಿಂಗಾಯತ ಸಮುದಾಯದ 69 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 16:23 IST
Last Updated 5 ನವೆಂಬರ್ 2024, 16:23 IST
ದೌರ್ಜನ್ಯ ನಡೆಸಿರುವವರ ಬಂಧನಕ್ಕೆ ಆಗ್ರಹಿಸಿ ಪರಿಶಿಷ್ಟ ಜಾತಿಯವರು ಬೀದರ್‌ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದರು
ದೌರ್ಜನ್ಯ ನಡೆಸಿರುವವರ ಬಂಧನಕ್ಕೆ ಆಗ್ರಹಿಸಿ ಪರಿಶಿಷ್ಟ ಜಾತಿಯವರು ಬೀದರ್‌ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದರು   

ಬೀದರ್‌: ಭಾಲ್ಕಿ ತಾಲ್ಲೂಕಿನ ಚಳಕಾಪೂರ ಗ್ರಾಮದ ಹನುಮಾನ ದೇವರ ಜಾತ್ರೆಯಲ್ಲಿ ಭಾಗವಹಿಸಿದ್ದಕ್ಕೆ ಪರಿಶಿಷ್ಟ ಜಾತಿಗೆ ಸೇರಿದ ಹಲವರ ಮೇಲೆ ಹಲ್ಲೆ ನಡೆಸಿ, ನಿಂದಿಸಿದ ಪ್ರಕರಣ ಸಂಬಂಧ ಲಿಂಗಾಯತ ಸಮುದಾಯದ 69 ಜನರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಭಾನುವಾರ (ನ.3) ಹನುಮಾನ ದೇವರ ಜಾತ್ರಾ ಮಹೋತ್ಸವದ ಮೆರವಣಿಗೆಯ ಸಂದರ್ಭದಲ್ಲಿ ಘಟನೆ ಜರುಗಿದೆ. ಹಲ್ಲೆಗೊಳಗಾದವರ ಜತೆಗೆ ಪರಿಶಿಷ್ಟ ಜನಾಂಗದವರು ಸೋಮವಾರ (ನ.4) ಖಟಕಚಿಂಚೋಳಿ ಠಾಣೆ ಎದುರು ಪ್ರತಿಭಟನೆ ನಡೆಸಿದ ನಂತರ ಲಿಂಗಾಯತ ಸಮುದಾಯದ 73 ಜನರ ವಿರುದ್ಧ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಪೈಕಿ  69 ಜನರನ್ನು ಮಂಗಳವಾರ ಬಂಧಿಸಲಾಗಿದೆ.

‘ಜಾತ್ರೆಯಲ್ಲಿ ಭಾಗವಹಿಸಲು ಹೋದಾಗ ನಮ್ಮನ್ನು ತಡೆದು ಹೀಯಾಳಿಸಿದ್ದಾರೆ. ನಂತರ ಪರಿಶಿಷ್ಟ ಜಾತಿ ಜನರಿರುವ ಓಣಿಗಳಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಮಹಿಳೆಯರು, ಯುವಕರನ್ನು ಮನಬಂದಂತೆ ಥಳಿಸಿದ್ದರಿಂದ ಗಂಭೀರ ಸ್ವರೂಪದ ಗಾಯಗಳಾಗಿವೆ’ ಎಂದು ದೂರಿನಲ್ಲಿ ಹೇಳಲಾಗಿದೆ. ‘ಗ್ರಾಮದೊಳಗೆ ನೀವು ಬರುವಂತಿಲ್ಲ. ಗ್ರಾಮದ ಮಳಿಗೆಗಳಿಗೂ ನೀವು ಬರಬಾರದು ಎಂಬುದಾಗಿ ಹೆದರಿಸಿದ್ದಾರೆ’ ಎಂದೂ ದೂರಿನಲ್ಲಿ ಆರೋಪಿದ್ದಾರೆ.

ADVERTISEMENT

‘ಸಿದ್ದಾರೂಢರು ಹುಟ್ಟಿದ ಗ್ರಾಮ ಚಳಕಾಪೂರ. ಇಂತಹ ಕಡೆ ಕೆಲವರ ವರ್ತನೆಯಿಂದ ಇಡೀ ಊರು ತಲೆತಗ್ಗಿಸುವಂತಾಗಿದೆ’ ಎಂದು ಗ್ರಾಮದ ಹಿರಿಯ ವ್ಯಕ್ತಿಯೊಬ್ಬರು ‘ಪ್ರಜಾವಾಣಿ’ಗೆ ಹೇಳಿದ್ದಾರೆ.

ಘಟನೆ ನಂತರ ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.