ADVERTISEMENT

ಬಸವಕಲ್ಯಾಣ: ದುರಸ್ತಿಗೆ ಕಾಯುತ್ತಿರುವ ಅಟ್ಟೂರ್ ಕೆರೆ

ಮಾಣಿಕ ಆರ್ ಭುರೆ
Published 17 ಜೂನ್ 2024, 5:52 IST
Last Updated 17 ಜೂನ್ 2024, 5:52 IST
ಬಸವಕಲ್ಯಾಣ ತಾಲ್ಲೂಕಿನ ಅಟ್ಟೂರ್ ಗ್ರಾಮದ ಕೆರೆ ಏರಿ ಒಡೆದಿದೆ
ಬಸವಕಲ್ಯಾಣ ತಾಲ್ಲೂಕಿನ ಅಟ್ಟೂರ್ ಗ್ರಾಮದ ಕೆರೆ ಏರಿ ಒಡೆದಿದೆ   

ಬಸವಕಲ್ಯಾಣ: ಧಾರಾಕಾರ ಮಳೆಗೆ ತಾಲ್ಲೂಕಿನ ಅಟ್ಟೂರು ಕೆರೆ ಒಡೆದಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಹಾನಿ ಆಗುವುದನ್ನು ತಡೆಯುವುದಕ್ಕಾಗಿ ಶೀಘ್ರ ಕೆರೆ ದುರಸ್ತಿ ಕೈಗೊಳ್ಳುವುದು ಅತ್ಯಗತ್ಯವಾಗಿದೆ.

ಮುಂಗಾರಿನ ಆರಂಭದಲ್ಲೇ ಸುರಿದ ಮಳೆಗೆ ಅಪಾರ ನಷ್ಟವಾಗಿದೆ. ಇನ್ನೂ ಮಳೆಗಾಲ ಸಾಕಷ್ಟು ಇರುವುದರಿಂದ ಮಳೆ ಬಂದರೆ ತಮ್ಮ ಜಮೀನುಗಳ ಪರಿಸ್ಥಿತಿ ಏನಾಗಲಿದೆ ಎಂಬ ಚಿಂತೆ ರೈತರಿಗೆ ಕಾಡುತ್ತಿದೆ. ಈಗಾಗಲೇ ನೂರಾರು ಎಕರೆ ಹೊಲದಲ್ಲಿನ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ. 30 ಕ್ಕೂ ಅಧಿಕ ಬಾವಿಗಳು ಮುಚ್ಚಿವೆ. ಪಂಪ್ ಸೆಟ್ ಮತ್ತು ನೀರಾವರಿಯ ಪೈಪ್ ಲೈನ್ ಹಾಳಾಗಿದೆ.

ಗ್ರಾಮದವರೇ ಆಗಿರುವ ಬಸವರಾಜ ಪಾಟೀಲ ಅಟ್ಟೂರ್ ಅವರು ಸಣ್ಣ ನೀರಾವರಿ ಸಚಿವರಾಗಿದ್ದಾಗ 1987ರಲ್ಲಿ ಕೆರೆ ನಿರ್ಮಾಣವಾಗಿತ್ತು. ನಂತರದಲ್ಲಿ ಕೆಲ ಸಲ ಸುಧಾರಣಾ ಕಾರ್ಯ ನಡೆದಿದೆ. ಆದರೂ, ಕೆರೆಯಲ್ಲಿನ ಹೂಳು ತೆಗೆಯದ ಕಾರಣ ಮತ್ತು ಸಮರ್ಪಕ ನಿರ್ವಹಣೆ ಇಲ್ಲದ್ದರಿಂದ ಅನಾಹುತ ಸಂಭವಿಸಿದೆ ಎನ್ನಲಾಗುತ್ತಿದೆ. ಕೆರೆ ಒಡೆದ ದಿನವೇ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಸ್ಥಳಕ್ಕೆ ಬಂದಿದ್ದ ಜಿಲ್ಲಾಧಿಕಾರಿಗೆ ಈ ಬಗ್ಗೆ ದೂರು ಸಹ ಸಲ್ಲಿಸಿದ್ದಾರೆ.

ADVERTISEMENT

`ಬಿತ್ತನೆ ಕೈಗೊಳ್ಳುವುದಕ್ಕಾಗಿ ಗ್ರಾಮಸ್ಥರು ಸಿದ್ಧತೆ ಕೈಗೊಂಡಿದ್ದರು. ಅದೇ ದಿನ ರಾತ್ರಿ ಕೆರೆ ಒಡೆದಿದ್ದರಿಂದ ಮಣ್ಣು ಮಾತ್ರ ನೀರು ಪಾಲಾಗಿದೆ. ಒಂದುವೇಳೆ ಬೆಳಗಿನಲ್ಲಿ ಇಂಥ ಅವಾಂತರ ಆಗುತ್ತಿದ್ದರೆ ಜನ ಮತ್ತು ಜಾನುವಾರುಗಳ ಗತಿ ಏನಾಗುತ್ತಿತ್ತು ಎಂಬುದನ್ನು ಊಹಿಸದಂತಾಗಿದೆ. ಹಾನಿ ಸಮೀಕ್ಷೆ ನಡೆಯುತ್ತಿದ್ದು ಸಂಬಂಧಿತರು ಪರಿಹಾರವನ್ನು ತಕ್ಷಣ ನೀಡಿದರೆ ಅನುಕೂಲ ಆಗುತ್ತದೆ' ಎಂದು ಗ್ರಾಮದ ದಳಪತಿ ಶಿವಶರಣಪ್ಪ ಪಾಟೀಲ ಆಗ್ರಹಿಸಿದ್ದಾರೆ.

`ಕೆರೆಯ ಏರಿ ಎದುರಲ್ಲಿಯೇ ಇರುವ ನನ್ನ ಸಂಪೂರ್ಣ ಜಮೀನಿನಲ್ಲಿ ನೀರು ಹರಿಯುತ್ತಿದೆ. ಒಂದು ವೇಳೆ ಕೆರೆ ದುರಸ್ತಿ ಮಾಡದಿದ್ದರೆ ಈ ಜಮೀನಿನಲ್ಲಿ ಹಾಗೂ ಇತರೆ ಕೆಲವರ ಹೊಲಗಳಲ್ಲಿ ಬಿತ್ತನೆ ಕೈಗೊಳ್ಳಲು ಆಗುವುದಿಲ್ಲ. ಆದ್ದರಿಂದ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದರಿಂದ ಈಗಾಗಲೇ ಈ ಕಾರ್ಯಕ್ಕಾಗಿ ಸಿದ್ಧತೆ ನಡೆದಿದೆ ಎಂದು ಸಂಬಂಧಿತ ಇಲಾಖೆಯವರು ಮಾಹಿತಿ ನೀಡಿದ್ದಾರೆ' ಎಂದು ರೈತ ರವಿ ಪಾಟೀಲ ತಿಳಿಸಿದ್ದಾರೆ.

`ಮಳೆ ಸುರಿದಿದ್ದರೂ ಹೊಲಕ್ಕೆ ಹಾನಿ ಆಗಿದ್ದರಿಂದ ಇನ್ನುವರೆಗೆ ಯಾರೂ ಬಿತ್ತನೆ ಸಿದ್ಧತೆ ಮಾಡಿಕೊಂಡಿಲ್ಲ. ಸಂಕಟದಲ್ಲಿರುವ ರೈತರಿಗೆ ಇತರೆ ಸೌಲಭ್ಯಗಳನ್ನು ಸಹ ಒದಗಿಸಬೇಕು' ಎಂದು ಗ್ರಾಮದ ಪ್ರಮುಖರಾದ ಅಜೀಜಮಿಯ್ಯಾ ಮತ್ತು ಬಜರಂಗ ಕಪನೂರೆ ಒತ್ತಾಯಿಸಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನ ಅಟ್ಟೂರ್‌ನಲ್ಲಿನ ಕೆರೆ ಏರಿದ ಒಡೆದಿರುವುದರಿಂದ ಹೊಲಗಳಲ್ಲಿ ನೀರು ಹರಿಯುತ್ತಿದೆ
ಬಸವಕಲ್ಯಾಣ ತಾಲ್ಲೂಕಿನ ಅಟ್ಟೂರ್ ಗ್ರಾಮದ ಕೆರೆ ಒಡೆದಿರುವುದರಿಂದ ಹೊಲಗಳಲ್ಲಿನ ಮಣ್ಣು ಕೊಚ್ಚಿಕೊಂಡು ಹೋಗಿದೆ
ಇನ್ನೂ ಮುಂದೆ ಸಾಕಷ್ಟು ಮಳೆಗಾಲ ಇರುವುದರಿಂದ ಇನ್ನಷ್ಟು ಹಾನಿ ಆಗುವುದನ್ನು ತಡೆಯಲು ಕೆರೆಯ ದುರಸ್ತಿ ಕೈಗೊಳ್ಳುವುದು ಅಗತ್ಯವಾಗಿದೆ.
ಶಿವಶರಣಪ್ಪ ಪಾಟೀಲ ದಳಪತಿ
ನನ್ನ 5 ಎಕರೆ ಜಮೀನಿನಲ್ಲಿನ ಮಣ್ಣು ಕೊಚ್ಚಿಕೊಂಡು ಹೋಗಿ ಬರೀ ಕಲ್ಲುಗಳು ಕಾಣುತ್ತಿದ್ದು ಮುಂದೆಯೂ ನೀರು ಹರಿದರೆ ಮತ್ತಷ್ಟು ಹಾಳಾಗಲಿದೆ.
ರವಿ ಪಾಟೀಲ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.