ಔರಾದ್: ಭಕ್ತರ ಸಡಗರ ಸಂಭ್ರಮ, ಜಯಘೋಷಗಳ ನಡುವೆ ಸೋಮವಾರ ಬೆಳಗಿನ ಜಾವ ಇಲ್ಲಿಯ ಅಮರೇಶ್ವರ ರಥೋತ್ಸವ
ನೆರವೇರಿತು.
ವೈವಿಧ್ಯಮಯ ಹೂ ಮತ್ತು ದೀಪಗಳಿಂದ ಅಲಂಕರಿಸಲಾದ ರಥ ಬೆಳಗಿನ ಜಾವ ಅಮರೇಶ್ವರ ದೇವಸ್ಥಾನ ಆವರಣದಿಂದ ಹೊರಡುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲುಮುಟ್ಟಿತು. ‘ಓಂ ಭಲಾ, ಶಂಕರ ಭಲಾ’ ಎಂಬ ಜಯಘೋಷ ಎಲ್ಲೆಡೆ ಮೊಳಗಿತ್ತು. ಭಕ್ತರು ಈ ಸುಂದರ ದೃಶ್ಯ ಕಣ್ಮುಂಬಿಕೊಂಡು ಭಕ್ತಿಭಾವ ಮೆರೆದರು.
ರಸ್ತೆಯ ಎರಡೂ ಬದಿಯಲ್ಲಿ ನಿಂತ ಭಕ್ತರು ರಥೋತ್ಸವ ಸ್ವಾಗತಿಸಿದರು. ಎರಡೂ ಕೈಜೋಡಿಸಿ ಅಮರೇಶ್ವರನಿಗೆ ನಮಿಸಿದರು. ಕೆಲವರು ಶಲ್ಯ ತೊಡಿಸಿ, ಕಾಯಿ ಒಡೆದು ತಮ್ಮ ಇಷ್ಟಾರ್ಥ ಪೂರೈಸಿದರು.
ರಥ ಹೋಗುವ ದಾರಿಯೂದ್ದಕ್ಕೂ ರಂಗೋಲಿ ಹಾಕಿ ವಿವಿಧ ಬಣ್ಣದ ಹೂ ಸಿಂಪಡಿಸಲಾಗಿತ್ತು. ವೀರಗಾಸೆ ಕುಣಿತ, ಶಾಲಾ ಮಕ್ಕಳ ಲೇಜಿಮ್, ಯುವಕರ ನೃತ್ಯ, ಡೊಳ್ಳು ಕುಣಿತ ಮೆರವಣಿಗೆ ಕಳೆ ಕಟ್ಟಿತ್ತು.
ತಹಶೀಲ್ದಾರ್ ಸಂಗಮೇಶ ಜಿಡಗೆ, ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಬಸವರಾಜ ದೇಶಮುಖ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸುನೀಲಕುಮಾರ ದೇಶಮುಖ, ಡಾ. ಶಂಕರರಾವ ದೇಶಮುಖ, ಶಿವರಾಜ ಅಲ್ಮಾಜೆ, ಶಿವಾನಂದ ಕನಕೆ, ಮೋಹನ ಕೇದಾರೆ, ಸಿದ್ರಾಮ ಬಾವುಗೆ, ಸಿದ್ರಾಮ ಖೂಬಾ, ಶೇಷಾರಾವ ಕೋಳಿ, ವಿಠಲ್‌ರಾವ ಕೋಳಿ, ಮಲ್ಲಿಕಾರ್ಜುನ ಯಡವೆ, ಅಂಬರೇಶ್ ಮಸ್ಕಲೆ, ದಯಾನಂದ ಘುಳೆ, ಅಶೋಕ ಸಂಗೇವಾರ, ರಮೇಶ ಅಲ್ಮಾಜೆ, ಚಂದು ಚಾರೆ, ಹಣಮಂತ ನವಾಡೆ ಸೇರಿದಂತೆ ರಾಜಕಾರಣಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಉತ್ಸವದಲ್ಲಿ ಪಾಲ್ಗೊಂಡರು.
ಪಿಎಸ್‌ಐ ಮಲ್ಲಿಕಾರ್ಜುನ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು. 100 ಜನ ಪೊಲೀಸರು, ಎರಡು ಡಿಎಆರ್ ತಂಡ, ಸ್ವಯಂ ಸೇವಕರ ಪಡೆ ಇಡೀ ರಾತ್ರಿ ರಥೋತ್ಸವ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.