ಬೀದರ್: ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪರಿಸ್ಥಿತಿ ನಿಭಾಯಿಸಲು ಮುಖ್ಯಮಂತ್ರಿ ಅಸಮರ್ಥರಾಗಿದ್ದಾರೆ. ರಾಜ್ಯಪಾಲಕರು ಕೂಡಲೇ ರಾಜ್ಯ ಸರ್ಕಾರವನ್ನು ಬರ್ಖಾಸ್ತ್‌ಗೊಳಿಸಬೇಕು’ ಎಂದು ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚವಾಣ್ ಆಗ್ರಹಿಸಿದರು.
ಸರ್ಕಾರವನ್ನು ವಜಾಗೊಳಿಸಲು ಈಗಾಗಲೇ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ವಿಧಾನಸೌಧ ದೇವರಗುಡಿ. ರಾಜ್ಯದ ಏಳು ಕೋಟಿ ಜನರನ್ನು ಪ್ರತಿನಿಧಿಸುವ ಪ್ರತಿನಿಧಿಗಳು ಅಲ್ಲಿರುತ್ತಾರೆ. ಅದರೊಳಗೆ ರಾಜ್ಯಸಭೆ ಸದಸ್ಯ ಸೈಯದ್ ನಾಸಿರ್ ಹುಸೇನ್ ಬೆಂಬಲಿಗರು ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಾರೆ. ಅದನ್ನು ಕಾಂಗ್ರೆಸ್ ಸಮರ್ಥಿಸಿಕೊಳ್ಳುತ್ತಿದೆ. ನೇರವಾಗಿ ಒಂದು ಸಮುದಾಯವನ್ನು ಬೆಂಬಲಿಸುತ್ತಿದೆ. ಘೋಷಣೆ ಕೂಗಿರುವುದರ ಬಗ್ಗೆ ವರದಿ ಬಂದರೂ ಮುಖ್ಯಮಂತ್ರಿಯಾಗಲಿ, ಗೃಹಸಚಿವರಾಗಲಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಸಿಎಂಗೆ ನಾಚಿಕೆ ಆಗಬೇಕು. ಯಾವಾಗ ತಪ್ಪಿತಸ್ಥರನ್ನು ಬಂಧಿಸುತ್ತೀರಿ? ಘಟನೆ ನಡೆದು ಮೂರು ದಿನಗಳಾದರೂ ಅರೆಸ್ಟ್ ಮಾಡಿಲ್ಲ. ನಮ್ಮ ನೆಲ, ಜಲ, ಗಾಳಿ ಪಡೆದು ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದವರು ಆ ದೇಶಕ್ಕೆ ಹೋಗಬೇಕು. ಕಾನೂನು ರಚಿಸುವ ಜಾಗದಲ್ಲಿ ಕೃತ್ಯ ಎಸಗಿರುವುದು ಖಂಡನಾರ್ಹ ಎಂದರು.
‘ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವುದು. ಪ್ರಧಾನಿ ನರೇಂದ್ರ ಮೋದಿಯವರನ್ನು ಮೂರನೇ ಸಲ ಈ ದೇಶದ ಪ್ರಧಾನಿ ಮಾಡುವುದು ಹಾಗೂ ಭಾರತ ಹಿಂದೂ ರಾಷ್ಟ್ರ ಆಗಬೇಕು’ ಎಂದು ಚವಾಣ್ ಹೇಳಿದರು. ‘ಹಿಂದೂ ರಾಷ್ಟ್ರ ಮಾಡಲು ಸಂವಿಧಾನ ಬದಲಿಸುತ್ತೀರಾ?’ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ‘ನನಗೆ ಸಂವಿಧಾನ ಮತ್ತು ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅಪಾರ ಗೌರವ ಇದೆ’ ಎಂದು ಹೇಳಿ ಜಾರಿಕೊಂಡರು.
‘ಬಿಜೆಪಿ ನನಗೆ ತಾಯಿ. ಬರುವ ಲೋಕಸಭೆ ಚುನಾವಣೆಯ್ಲಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿದರೂ ಅವರ ಗೆಲುವಿಗೆ ಕೆಲಸ ಮಾಡುವೆ’ ಎಂದು ಪ್ರಭು ಚವಾಣ್ ಹೇಳಿದರು. ‘ಒಂದುವೇಳೆ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಟಿಕೆಟ್ ಸಿಕ್ಕರೆ?’ ಎಂದು ಪತ್ರಕರ್ತರು ಪ್ರಶ್ನೆ ಕೇಳಿದಾಗ ‘ಅವರು (ಖೂಬಾ) ಪಕ್ಷದ ಕಾರ್ಯಕರ್ತ. ಯಾರಿಗೆ ಸಿಕ್ಕರೂ ಅವರ ಗೆಲುವಿಗೆ ಶ್ರಮಿಸುವೆ’ ಎಂದು ಚವಾಣ್ ಹೇಳಿದರು.
‘ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಆನಂತರ ಭಾಷಣ ಮಾಡಿ ಮೊದಲು ಬರಗಾಲ ನಿಭಾಯಿಸಿ. ಆರು ಕ್ಷೇತ್ರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಬರಗಾಲ ಘೋಷಿಸಿದರೂ ಇದುವರೆಗೆ ಹಣ ಬಿಡುಗಡೆಗೊಳಿಸಿಲ್ಲ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.