ಬೀದರ್: ಇಲ್ಲಿನ ಆಟೊ ನಗರ ಸಮೀಪದ ಅಲೆಮಾರಿ ಕಾಲೊನಿಯಲ್ಲಿ ಶುಕ್ರವಾರ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
‘ಎದ್ದೇಳು ಕರ್ನಾಟಕ’ ಸಂಘಟನೆ, ವಿಶ್ವಕ್ರಾಂತಿ ದಿವ್ಯ ಪೀಠ, ಅಲೆಮಾರಿ ಜನಾಂಗ ಅಭಿವೃದ್ಧಿ ಸಮಿತಿ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಯ ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸುಮಾರು 25 ವರ್ಷಗಳಿಂದ ಅಲೆಮಾರಿ ಜನಾಂಗದವರು ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಎಲ್ಲರಿಗೂ ಸರ್ಕಾರದ ಸೌಲಭ್ಯಗಳು ಸಿಗಬೇಕೆಂದರೆ ಜಾತಿ ಪ್ರಮಾಣ ಪತ್ರ, ಆಧಾರ, ಮತದಾರರ ಗುರುತಿನ ಚೀಟಿ, ರೇಷನ್ ಕಾರ್ಡ್ ಮಾಡಿಸಿಕೊಳ್ಳಬೇಕು. ಮನೆ ನಿರ್ಮಾಣ, ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯವೂ ಇದೆ ಎಂದು ಹಿರಿಯ ವಕೀಳ ಜೈರಾಜ ಬುಕ್ಕಾ ತಿಳಿಸಿದರು.
ಅಲೆಮಾರಿಗಳಾದ ನೀವು ಚಳಿ, ಮಳೆ, ಸುಡುವ ಬಿಸಿಲಿನಲ್ಲಿ ಗುಡಿಸಲುಗಳಲ್ಲಿ ಬದುಕುತ್ತಿದ್ದೀರಿ. ನಿಮ್ಮ ಹಕ್ಕಿಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ನಡೆಸಬಹುದಾಗಿದೆ ಎಂದು ಹೇಳಿದರು.
ವಿಶ್ವಕ್ರಾಂತಿ ದಿವ್ಯ ಪೀಠದ ಓಂಪ್ರಕಾಶ ರೊಟ್ಟೆ ಮಾತನಾಡಿ, ಅಲೆಮಾರಿಗಳ ಕಲ್ಯಾಣಕ್ಕಾಗಿ ಅಲೆಮಾರಿ ಜನಾಂಗ ಅಭಿವೃದ್ಧಿ ಸಮಿತಿ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಗಳು ಇವೆ. ಅರ್ಜಿ ಸಲ್ಲಿಸಿ, ಹಕ್ಕುಗಳನ್ನು ಪಡೆಯಬೇಕೆಂದು ತಿಳಿಸಿದರು.
‘ಎದ್ದೇಳು ಕರ್ನಾಟಕ‘ ಸಂಘಟನೆಯ ಜಿಲ್ಲಾ ಸಹ ಸಂಚಾಲಕ ಜಗದೀಶ ಬಿರಾದಾರ ಮಾತನಾಡಿ, ಅಲೆಮಾರಿ ಜನಾಂಗಕ್ಕೆ ನ್ಯಾಯಯುತವಾದ ಹಕ್ಕುಗಳನ್ನು ಕೊಡಿಸಲು ನಮ್ಮ ಸಂಪೂರ್ಣ ಸಹಕಾರ ಇದೆ ಎಂದು ಹೇಳಿದರು.
ಇದೇ ವೇಳೆ ಅಲೆಮಾರಿ ಜನಾಂಗದವರಿಗೆ ಹಣ್ಣು, ಹಾಲು ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.