ADVERTISEMENT

ಬೆಲೆ ಏರಿಕೆಗೆ ಕುಗ್ಗದ ಹಬ್ಬದ ಸಂಭ್ರಮ

ಆಯುಧ ಪೂಜೆ, ದಸರಾ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 11 ಅಕ್ಟೋಬರ್ 2024, 4:57 IST
Last Updated 11 ಅಕ್ಟೋಬರ್ 2024, 4:57 IST
ಹಬ್ಬದ ಪೂಜೆಗೆ ಅಗತ್ಯ ವಸ್ತುಗಳನ್ನು ಖರೀದಿಸಿದ ಜನ
ಹಬ್ಬದ ಪೂಜೆಗೆ ಅಗತ್ಯ ವಸ್ತುಗಳನ್ನು ಖರೀದಿಸಿದ ಜನ   

ಬೀದರ್‌: ‘ತರಕಾರಿ, ಬೇಳೆಕಾಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯೂ ಆಯುಧ ಪೂಜೆ, ದಸರಾ ಹಬ್ಬದ ಸಂಭ್ರಮ ಕುಗ್ಗಿಸಿಲ್ಲ.

ಇದಕ್ಕೆ ಸಾಕ್ಷಿ ಮಾರುಕಟ್ಟೆಯಲ್ಲಿ ಗುರುವಾರ ಕಂಡು ಬಂದ ದೃಶ್ಯಗಳು. ದಿನಸಿ ಮಳಿಗೆ, ಎಣ್ಣೆ ಮಳಿಗೆ, ಹೂ ಹಣ್ಣು, ತರಕಾರಿ, ಬಟ್ಟೆ ಮಳಿಗೆಗಳಲ್ಲಿ ಗುರುವಾರ ಹೆಚ್ಚಿನ ಸಂಖ್ಯೆಯ ಜನ ಕಂಡು ಬಂದರು. ವರ್ಷಕ್ಕೊಮ್ಮೆ ಬರುವ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನ ಚೌಕಾಸಿ ಮಾಡುತ್ತಲೇ ವಸ್ತುಗಳನ್ನು ಖರೀದಿಸಿದರು. ಬಹುತೇಕ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗಿದ್ದರೂ ಜನ ಅದನ್ನು ಲೆಕ್ಕಿಸದೇ ಖರೀದಿ ಮಾಡಿದರು.

ಕಳೆದ ವಾರದಿಂದ ಬೇಳೆ ಕಾಳು, ಅಡುಗೆ ಎಣ್ಣೆ, ಹೂ, ತರಕಾರಿ ಬೆಲೆ ಗಗನಕ್ಕೇರಿದೆ. ಈ ಹಿಂದೆ ಪ್ರತಿ ಕೆ.ಜಿ ಶೇಂಗಾ ಬೆಲೆ ₹100 ಇತ್ತು. ಈಗ ಅದು ₹135ರಿಂದ ₹140ಕ್ಕೆ ಏರಿದೆ. ತೊಗರಿ ಬೇಳೆ, ಉದ್ದಿನ ಬೇಳೆಯೂ ಹೊರತಾಗಿಲ್ಲ. ತೊಗರಿ ಪ್ರತಿ ಕೆ.ಜಿ ₹160 ಇದೆ. ಈ ಹಿಂದೆ ₹120 ಇತ್ತು. ಉದ್ದಿನ ಬೇಳೆ ₹120ರಿಂದ ₹140ಕ್ಕೆ ಜಿಗಿದಿದೆ.

ADVERTISEMENT

ಅಡುಗೆ ಎಣ್ಣೆ ಬೆಲೆಯಲ್ಲಿಯೂ ಭಾರಿ ವ್ಯತ್ಯಾಸವಾಗಿದೆ. ಪ್ರತಿ ಕೆ.ಜಿ ಗೋಲ್ಡ್‌ ಡ್ರಾಪ್‌ ₹110ರಿಂದ ₹115 ಇತ್ತು. ಅದೀಗ ₹135ರಿಂದ ₹140ಕ್ಕೆ ಏರಿದೆ. ರುಚಿ ಗೋಲ್ಡ್‌ ಮೊದಲು ₹90ರಿಂದ ₹95 ಇತ್ತು. ಈಗ ಅದರ ಬೆಲೆ ₹130ಕ್ಕೆ ಹೆಚ್ಚಳವಾಗಿದೆ.

ಮಳೆಗಾಲ ಆರಂಭಗೊಂಡ ನಂತರ ಬಹುತೇಕ ತರಕಾರಿಗಳ ಬೆಲೆ ಹೆಚ್ಚಾಗಿದೆ. ಹಬ್ಬಕ್ಕೆ ಮತ್ತಷ್ಟು ಏರಿಕೆ ಕಂಡಿದೆ. ಉತ್ತಮ ಗುಣಮಟ್ಟದ ಪ್ರತಿ ಕೆ.ಜಿ ಟೊಮೆಟೊ ₹70ರಿಂದ ₹80 ಇದ್ದರೆ, ಚೌಳಿಕಾಯಿ, ಬದನೆಕಾಯಿ, ಹೂಕೋಸು, ಎಲೆಕೋಸು, ಬೆಂಡೆಕಾಯಿ, ಬೀಟ್‌ರೂಟ್‌ ಪ್ರತಿ ಕೆ.ಜಿ ₹80ರಿಂದ ₹100 ಇದೆ. ಮಳೆಯಿಂದಾಗಿ ಪಾಲಕ್‌, ಮೆಂತೆ ಸೇರಿದಂತೆ ವಿವಿಧ ತರಹದ ಸೊಪ್ಪು ಬರುತ್ತಿಲ್ಲ. ಅಲ್ಪಸ್ವಲ್ಪ ಬಂದರೂ ಸರಿ ಇಲ್ಲ. ಹೀಗಾಗಿ ಅದರ ಬೆಲೆಯೂ ಹೆಚ್ಚಿದೆ. ಕಾಲು ಕೆ.ಜಿ ಮೆಂತೆ ₹40ಕ್ಕೆ ಮಾರಾಟ ಮಾಡಲಾಗುತ್ತಿದೆ.

‘ದಸರಾ ದೊಡ್ಡ ಹಬ್ಬ. ವರ್ಷಕ್ಕೊಮ್ಮೆ ಬರುತ್ತದೆ. ದಿನದಿಂದ ದಿನಕ್ಕೆ ಬೆಲೆ ಏರಿಕೆ ಹೆಚ್ಚಾಗುತ್ತಿರುವುದರಿಂದ ಜೇಬಿಗೆ ಭಾರ ಬೀಳುತ್ತಿದೆ. ಆದರೆ, ಅನಿವಾರ್ಯ. ಇರುವುದರಲ್ಲೇ ಸರಿದೂಗಿಸಿಕೊಂಡು ಹೋಗಲೇಬೇಕಿದೆ. ಬೇರೆ ಆಯ್ಕೆಗಳಿಲ್ಲ. ಹಬ್ಬ ಮಾಡದೇ ಇರಕ್ಕಾಗಲ್ಲ’ ಎಂದು ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಹೂ ಖರೀದಿಸುತ್ತಲೇ ಮಾತಿಗಿಳಿದರು ಬಸವೇಶ್ವರ ನಗರದ ರಾಧಾ.

‘ಒಂದಾ ಎರಡಾ ಎಲ್ಲದರ ಬೆಲೆ ಹೆಚ್ಚಾಗುತ್ತಿದೆ. ಆದರೆ, ಆದಾಯ ಮಾತ್ರ ಏರಿಕೆಯಾಗುತ್ತಿಲ್ಲ. ಇದೇ ರೀತಿ ಮುಂದುವರೆದರೆ ಮಧ್ಯಮ ವರ್ಗದವರು ಬಡವರಾಗುತ್ತಾರೆ. ಬಡವರು ಇನ್ನಷ್ಟು ಬಡವರಾಗುತ್ತಾರೆ. ಐಷಾರಾಮಿ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಿದರೆ ಶ್ರೀಮಂತರಿಗೆ ವ್ಯತ್ಯಾಸ ಆಗುವುದಿಲ್ಲ. ಆದರೆ, ತಿನ್ನುವ ಪ್ರತಿಯೊಂದು ವಸ್ತುಗಳ ಮೇಲೆ ತೆರಿಗೆ ಹಾಕುತ್ತಿರುವುದರಿಂದ ಜನ ತೊಂದರೆ ಅನುಭವಿಸುವಂತಾಗಿದೆ. ಆದರೆ, ಇದಕ್ಕಾಗಿ ಹಬ್ಬ ಬಿಡುವಂತಿಲ್ಲ. ಹಬ್ಬಕ್ಕಾಗಿ ಬೇರೆ ಬೇರೆ ಊರುಗಳಲ್ಲಿರುವ ಮಕ್ಕಳು, ಮೊಮ್ಮಕ್ಕಳು ಬಂದಿರುತ್ತಾರೆ. ಯಾವುದಕ್ಕೂ ಕೊರತೆ ಆಗದಂತೆ ನೋಡಿಕೊಳ್ಳಬೇಕಾಗುತ್ತದೆ. ಖರೀದಿಸುವುದು ಅನಿವಾರ್ಯವಲ್ಲವೇ’ ಎಂದು ಶಿವಾಜಿ ನಗರದ ನಿವೃತ್ತ ಪ್ರಾಧ್ಯಾಪಕ ಬಸವರಾಜ ಪ್ರಶ್ನಿಸಿದರು.

ಬಾಳೆದಿಂಡು ಖರೀದಿಸಿ ಕೊಂಡೊಯ್ದರು
ಚೆಂಡು ಹೂ ಮಾರಾಟವಾಗಿ ಖಾಲಿಯಾಗುತ್ತಿದ್ದಂತೆ ವ್ಯಾಪಾರಿಗಳು ಮತ್ತೆ ಮತ್ತೆ ಸುರಿದು ಗುಡ್ಡೆ ಮಾಡಿದರು
ಅಲಂಕಾರಿಕ ವಸ್ತುಗಳನ್ನು ಖರೀದಿಸಿದ ಜನರು
ಜೋಳದ ದಂಟು ಖರೀದಿಸಿದ ಜನ
ಕಬ್ಬು ಖರೀದಿಯಲ್ಲಿ ಮಗ್ನ –ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ

ಜಿಗಿದ ಚೆಂಡು ಹೂವಿನ ದರ

ಚೆಂಡು ಹೂವಿಲ್ಲದೆ ಆಯುಧಪೂಜೆ ದಸರಾ ಹಬ್ಬ ಅಪೂರ್ಣ. ಆಯುಧ ಪೂಜೆಗೆ ವಾಹನ ಕಚೇರಿಯಲ್ಲಿರುವ ವಸ್ತುಗಳು ಸೇರಿದಂತೆ ಪ್ರತಿಯೊಂದನ್ನೂ ಹೂಗಳಿಂದ ಅಲಂಕರಿಸಲಾಗುತ್ತದೆ. ದಸರಾ ಹಬ್ಬಕ್ಕೆ ಇಡೀ ಮನೆಯೆಲ್ಲಾ ಹೂಗಳಿಂದ ಸಿಂಗಾರ ಮಾಡಲಾಗುತ್ತದೆ. ಬೇಡಿಕೆ ಹೆಚ್ಚಿರುವುದರಿಂದ ಚೆಂಡು ಹೂವಿನ ದರ ದೊಡ್ಡ ಜಿಗಿತ ಕಂಡಿದೆ. ಹೋದ ವಾರವಷ್ಟೇ ಪ್ರತಿ ಕೆ.ಜಿ ಚೆಂಡು ಹೂವಿನ ಬೆಲೆ ₹40ರಿಂದ ₹50 ಇತ್ತು. ಅದೀಗ ₹100ರಿಂದ ₹120ಕ್ಕೆ ಏರಿಕೆ ಕಂಡಿದೆ. ಜನ ಚೌಕಾಸಿ ಮಾಡುತ್ತಲೇ ಖರೀದಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ರೈತರು ನೇರ ರಸ್ತೆಬದಿಯಲ್ಲಿ ಗುಡ್ಡೆ ಹಾಕಿಕೊಂಡು ಮಾರಾಟ ಮಾಡಿದರು.

ಐದು ಕಬ್ಬಿಗೆ ₹100

ಪೂಜೆಗೆ ಕಬ್ಬು ಬಾಳೆ ದಿಂಡು ಬಳಸುವುದರಿಂದ ಇವುಗಳ ಬೆಲೆಯಲ್ಲೂ ಹೆಚ್ಚಳವಾಗಿದೆ. ಐದು ಕಬ್ಬಿಗೆ ₹100 ಎತ್ತರದ ಎರಡು ಬಾಳೆ ದಿಂಡು ₹90ರಿಂದ ₹100ಕ್ಕೆ ಮಾರಾಟವಾಯಿತು. ಆದರೆ ಸೇಬಿನ ದರ ಕುಸಿದಿದೆ. ಹೋದ ವಾರ ₹120ರಿಂದ ₹130ಕ್ಕೆ ಮಾರಾಟವಾಗಿದ್ದ ಸೇಬಿನ ಬೆಲೆ ₹90ರಿಂದ ₹100ಕ್ಕೆ ಇಳಿದಿದೆ. ಸೇಬು ಕಾಶ್ಮೀರದಿಂದ ದೊಡ್ಡ ಪ್ರಮಾಣದಲ್ಲಿ ಬರುತ್ತಿದೆ. ದೇಶದ ಇತರೆ ಭಾಗಗಳಲ್ಲಿ ಮಳೆಯಾಗುತ್ತಿರುವುದರಿಂದ ಸೇಬು ಹೊರತುಪಡಿಸಿ ಅನ್ಯ ಪ್ರಕಾರದ ಹಣ್ಣುಗಳು ಹೆಚ್ಚಾಗಿ ಬರುತ್ತಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲೆಲ್ಲಾ ಸೇಬೇ ಹೆಚ್ಚಾಗಿ ಆಕ್ರಮಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.