ನಂದಗಾಂವ (ಹುಮನಾಬಾದ್): ‘ರೋಗ ನಿರೋಧಕ ಮಾತ್ರೆಗಳು ಸಹಕಾರಿ’ ಎಂದು ಜಿಲ್ಲಾ ಆಯುರ್ವೇದ ಆಸ್ಪತ್ರೆ ಮುಖ್ಯಸ್ಥೆ ಡಾ.ಶಾರದಾ ಅಭಿಪ್ರಾಯಪಟ್ಟರು.
ತಾಲ್ಲೂಕಿನ ನಂದಗಾಂವ ಗ್ರಾಮದಲ್ಲಿ ನಡೆದ ಆಯುಷ್ ಸೇವಾ ಗ್ರಾಮ ಕಾರ್ಯಕ್ರಮದಲ್ಲಿ ಆಯುರ್ವೇದ ಆಸ್ಪತ್ರೆ ವತಿಯಿಂದ ರೋಗ ನಿರೋಧಕ ಮಾತ್ರೆಗಳನ್ನು ವಿತರಿಸಿ ಮಾತನಾಡಿದರು.
‘ಈಚೆಗೆ ಪಾರ್ಶ್ವವಾಯು (ಲಕ್ವ) ಹೆಚ್ಚಾಗಿ ಕಂಡು ಬರುತ್ತಿದೆ. ನಿಶಕ್ತಿ ಹಾಗೂ ದುರ್ಬಲತೆಯ ಕಾರಣ ಇದು ಕಾಣಿಸಿಕೊಳ್ಳುತ್ತದೆ. ಅಲ್ಲದೆ, ಕೋವಿಡ್ ಪ್ರಕರಣಗಳು ಸಹ ಹೆಚ್ಚುತ್ತಿವೆ. ಆದ್ದರಿಂದ ಆಯುಷ್ ಇಲಾಖೆ ಸಿಬ್ಬಂದಿ ಮನೆ ಮನೆಗೆ ತೆರಳಿ ಮಾತ್ರೆಗಳನ್ನು ವಿತರಿಸುತ್ತಿದ್ದಾರೆ. ಮನೆಮದ್ದಿನ ಕುರಿತು ಮಾಹಿತಿ ನೀಡಲಾಗುತ್ತಿದೆ. ಇದರ ಲಾಭ ಪಡೆಯಬೇಕು’ ಎಂದು ಸಲಹೆ ನೀಡಿದರು.
ರಾಜರಾಜೇಶ್ವರಿ ಆಯುರ್ವೇದ ಕಾಲೇಜಿನ ವೈದ್ಯ ಡಾ.ಸಂಜು ಕಡ್ಲೆವಾಡ್ ಮಾತನಾಡಿ,‘ಮನೆಮದ್ದಿನ ಬಳಕೆಯಿಂದ ರೋಗಗಳು ಕಡಿಮೆಯಾಗುತ್ತವೆ’ ಎಂದು ಅಭಿಪ್ರಾಯಪಟ್ಟರು.
ಹುಡಗಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರುದ್ರಯ್ಯ ಮಠ ಮಾತನಾಡಿ,‘ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅನೇಕ ಔಷಧಿಗಳಿವೆ. ಅವುಗಳನ್ನು ಬಳಕೆ ಮಾಡಿದರೆ ರೋಗದಿಂದ ದೂರ ಇರಬಹುದು’ ಎಂದರು.
‘ಗ್ರಾಮಗಳಲ್ಲಿ ನೆಗಡಿ, ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿರುವವರನ್ನು ಪತ್ತೆ ಹಚ್ಚಬೇಕು. ಚಮನ ಪ್ರಾಶ ಮಾತ್ರೆ ವಿತರಿಸಬೇಕು. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು’ ಎಂದರು.
ಡಾ.ವಚನ ಶೃತಿ, ಡಾ.ಚನ್ನಮ್ಮ, ಡಾ.ಪೂಜಾ, ವಾಣಿ ಹಾಗೂ ರೇವಣದಸಿದ್ದ ಸಾತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.