ಬೆಂಗಳೂರು: ಮಹದೇವಪುರ ಮತ್ತು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರಗಳಲ್ಲಿನ ಬಸ್ ತಂಗುದಾಣಗಳು ಪ್ರಯಾಣಿಕ ಸ್ನೇಹಿಯಾಗಬೇಕು ಮತ್ತು ಬೀದಿ ದೀಪಗಳಂತಹ ಮೂಲಸೌಕರ್ಯವನ್ನು ಸುಧಾರಿಸಬೇಕು ಎಂದು ಸಾರ್ವಜನಿಕ ಸ್ಥಳಗಳ ಸುರಕ್ಷತಾ ಸಮೀಕ್ಷಾ ವರದಿಯಲ್ಲಿ ಸಲಹೆ ನೀಡಲಾಗಿದೆ.
ಬೆಂಗಳೂರು ರಾಜಕೀಯ ಕ್ರಿಯಾಸಮಿತಿ (ಬಿ–ಪ್ಯಾಕ್) ಮತ್ತು ಸಿಜಿಐ ಸಂಸ್ಥೆಗಳು ಈ ವರದಿಯನ್ನು ಸಿದ್ಧಪಡಿಸಿವೆ.
ಬಸ್ ನಿಲ್ದಾಣಗಳಲ್ಲಿ ಮಾಹಿತಿ ವ್ಯವಸ್ಥೆ, ನಕ್ಷೆ ವಿವರ ಹಾಗೂ ಉತ್ತಮ ಗುಣಮಟ್ಟದ ಆಸನ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಉತ್ತಮ ಬೆಳಕಿನ ವ್ಯವಸ್ಥೆ ಇರಬೇಕು. ಪಾದಚಾರಿ ಮಾರ್ಗಗಳನ್ನೂ ಸುಧಾರಿಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಉದ್ಯಾನಗಳು, ಅಂಗನವಾಡಿಗಳಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸಬೇಕು. ಇದರಿಂದ, ಮಕ್ಕಳ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಲಾಗಿದೆ.
ಈ ವರದಿಯನ್ನು ಶಾಸಕ ಅರವಿಂದ ಲಿಂಬಾವಳಿ ಅವರು ಶನಿವಾರ ಬಿಡುಗಡೆ ಮಾಡಿದರು. ಈ ಎರಡು ಕ್ಷೇತ್ರಗಳಲ್ಲಿನ 260 ಸಾರ್ವಜನಿಕ ಸ್ಥಳಗಳಲ್ಲಿ ಸಮೀಕ್ಷೆಯನ್ನು ವರದಿಯು ಒಳಗೊಂಡಿದೆ.
ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣದ ಕುರಿತ ಅಂಶಗಳ ಬಗ್ಗೆಯೂ ವಿಶ್ಲೇಷಿಸಲಾಗಿದೆ. 23 ಅಂಗನವಾಡಿ ಕೇಂದ್ರಗಳು, 71 ಬಸ್ ನಿಲ್ದಾಣಗಳು, 30 ಮಾರುಕಟ್ಟೆಗಳು, 37 ಉದ್ಯಾನಗಳು, 14 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 12 ಪೊಲೀಸ್ ಠಾಣೆಗಳು, 32 ಸಾರ್ವಜನಿಕ ಶೌಚಾಲಯಗಳ ಬಗ್ಗೆ ಸಮೀಕ್ಷೆ ನಡೆಸಲಾಗಿದೆ ಎಂದು ವಿವರಿಸಲಾಗಿದೆ.
ಮಹದೇವಪುರ ವಿಧಾನಸಭಾ ಕ್ಷೇತ್ರದ ಎಂಟು ವಾರ್ಡ್‌ಗಳು ಮತ್ತು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಏಳು ವಾರ್ಡ್‌ಗಳಲ್ಲಿ ಈ ಸಮೀಕ್ಷೆ ಕೈಗೊಳ್ಳಲಾಗಿತ್ತು. ವರದಿಯಲ್ಲಿನ ಶಿಫಾರಸ್ಸುಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಿದರೆ ಎರಡು ಕ್ಷೇತ್ರಗಳು ಮಹಿಳಾ ಸಬಲೀಕರಣ ಮತ್ತು ಸುರಕ್ಷತೆಯ ವಿಷಯದಲ್ಲಿ ಮಾದರಿಯಾಗುತ್ತವೆ ಎಂದು ತಿಳಿಸಲಾಗಿದೆ.
‘ಬೀದಿ ದೀಪಗಳಿಗೆ ಆದ್ಯತೆ ನೀಡಬೇಕು’
‘ಬೀದಿ ದೀಪಗಳನ್ನು ಅಳವಡಿಸಲು ಬಿಬಿಎಂಪಿ ಆದ್ಯತೆ ನೀಡಬೇಕು. ಬೀದಿ ದೀಪಗಳು ಇಲ್ಲದ ಕಾರಣ ಅಪಘಾತಗಳು ಸಂಭವಿಸುತ್ತಿವೆ. ಜತೆಗೆ, ಹೆಣ್ಣು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದಲೂ ಮುಖ್ಯವಾಗಿದೆ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ರವಿಕಾಂತೇಗೌಡ ಹೇಳಿದರು.
ಸುರಕ್ಷಿತ ಸಾರ್ವಜನಿಕ ಸ್ಥಳಗಳು ಕುರಿತ ಬಿ ಪ್ಯಾಕ್ ಆಯೋಜಿಸಿದ್ದ ಚರ್ಚೆಯಲ್ಲಿ ಮಾತನಾಡಿದ ಅವರು, ‘ಕಾಲಕ್ಕೆ ತಕ್ಕಂತೆ ಪೊಲೀಸ್ ಇಲಾಖೆಯೂ ಹಲವಾರು ಬದಲಾವಣೆಗಳನ್ನು ಕಾಣುತ್ತಿದೆ. ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಪೊಲೀಸರು ಶೀಘ್ರವಾಗಿ ಸ್ಪಂದಿಸುತ್ತಿದ್ದಾರೆ’ ಎಂದು ಹೇಳಿದರು.
‘ಕಷ್ಟಗಳು ಬಂದಾಗ ಜನರು ಮೊದಲು ಪೊಲೀಸರನ್ನು ನೆನಪಿಸಿಕೊಳ್ಳುತ್ತಾರೆ. ಬೀಟ್ ವ್ಯವಸ್ಥೆಯನ್ನು ಜನಸ್ನೇಹಿ ಮಾಡಲಾಗುತ್ತಿದ್ದು, ನಾಗರಿಕರನ್ನು ಸಹ ಸೇರಿಸಿಕೊಳ್ಳಲಾಗುತ್ತಿದೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.