ADVERTISEMENT

ಜನಸ್ಪಂದನ: ‘ಗೃಹಲಕ್ಷ್ಮಿ’ಯರ ಗದ್ದಲ

ಭಾಲ್ಕಿ: ಹಣ ಬಾರದಿರುವ ಬಗ್ಗೆ ಸಚಿವರ ಎದುರು ದೂರು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 15:35 IST
Last Updated 14 ಮಾರ್ಚ್ 2024, 15:35 IST
ಭಾಲ್ಕಿಯಲ್ಲಿ ಗುರುವಾರ ನಡೆದ ಜನಸ್ಪಂದನದ ಗೃಹಲಕ್ಷ್ಮಿ ಯೋಜನೆ ಕೌಂಟರ್‌ನಲ್ಲಿ ಅರ್ಜಿ ಸಲ್ಲಿಸಲು ಮುಗಿಬಿದ್ದಿರುವುದು
ಭಾಲ್ಕಿಯಲ್ಲಿ ಗುರುವಾರ ನಡೆದ ಜನಸ್ಪಂದನದ ಗೃಹಲಕ್ಷ್ಮಿ ಯೋಜನೆ ಕೌಂಟರ್‌ನಲ್ಲಿ ಅರ್ಜಿ ಸಲ್ಲಿಸಲು ಮುಗಿಬಿದ್ದಿರುವುದು   

ಭಾಲ್ಕಿ: ಸರ್‌, ನನಗೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಬರುತ್ತಿಲ್ಲ. ನಮಗೂ ಹಣ ಬರುತ್ತಿಲ್ಲ...

ಪಟ್ಟಣದ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಗುರುವಾರ ನೆಡದ ಜನಸ್ಪಂದನ ಮತ್ತು ಗ್ಯಾರಂಟಿ ಸಮಾವೇಶದಲ್ಲಿ ಬಹುತೇಕ ಮಹಿಳೆಯರು ಸಚಿವ ಈಶ್ವರ ಖಂಡ್ರೆ ಎದುರು ತಮ್ಮ ಸಮಸ್ಯೆ ಹೇಳಿಕೊಂಡರು.

ಕಾರ್ಯಕ್ರಮದ ಉದ್ಘಾಟನೆಯನ್ನು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಂದಲೇ ಮಾಡಿಸಬೇಕು ಎಂದು ಕೆಲ ಮಹಿಳೆಯರನ್ನು ಸಚಿವ ಈಶ್ವರ ಖಂಡ್ರೆ ಅವರು ವೇದಿಕೆಗೆ ಆಹ್ವಾನಿಸಿದರು. ಈ ವೇಳೆ ಕೆಲ ‘ಮಹಿಳೆಯರು ನಮಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ಬರುತ್ತಿಲ್ಲ’ ಎಂದಾಗ ‘ವೇದಿಕೆ ಕಾರ್ಯಕ್ರಮದ ಬಳಿಕ ನಿಮ್ಮ ಸಮಸ್ಯೆ ಆಲಿಸಲಾಗುವುದು’ ಎಂದು ಸಮಾಧಾನ ಮಾಡಿದರು.

ADVERTISEMENT

‘ನಿಮಗೆಲ್ಲರಿಗೂ ಗೃಹಲಕ್ಷ್ಮಿ ಹಣ ಬರುತ್ತಿದೆಯೋ ಇಲ್ಲವೋ?’ ಎಂದು ಪ್ರಶ್ನಿಸಿದಾಗ ಅನೇಕ ಮಹಿಳೆಯರು ‘ನಮಗೆ ಹಣ ಬರುತ್ತಿಲ್ಲ’ ಎಂದು ಜೋರಾಗಿ ಕೂಗಿ ಹೇಳಿದರು. ‘ಹಣ ಬರದೆ ಇರುವವರಿಗೆ ಮುಂಬರುವ ದಿನಗಳಲ್ಲಿ ಕೊಡಲಾಗುವುದು. ಅಧಿಕಾರಿಗಳು ನಿಮಗೆ ಮಾರ್ಗದರ್ಶನ ಮಾಡಿ ಅರ್ಜಿ ಸ್ವೀಕರಿಸುತ್ತಾರೆ’ ಎಂದು ಸಚಿವ ಖಂಡ್ರೆ ತಿಳಿಸಿದರು.

ತಮ್ಮ ಸಮಸ್ಯೆ ಹೇಳಿಕೊಳ್ಳಲು ಮಹಿಳೆಯರು ಸಚಿವರ ಎದುರು ಗುಂಪುಕೂಡುತ್ತಿದ್ದಂತೆ ‘ವಿವಿಧ ಯೋಜನೆಗಳ ಕೌಂಟರ್‌ಗಳನ್ನು ತೆರೆಯಲಾಗಿದ್ದು, ಅಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಅಧಿಕಾರಿಗಳು ಪರಿಶೀಲಿಸಿ ಸಾಧ್ಯವಾದವುಗಳಿಗೆ ಕೂಡಲೇ ಪರಿಹಾರ ಕಲ್ಪಿಸುತ್ತಾರೆ. ವಾರದಲ್ಲಿ ಅರ್ಜಿಗಳ ವಿಲೇವಾರಿ ಮಾಡಿರುವ ಕುರಿತು ತಮಗೆ ಮಾಹಿತಿ ನೀಡಬೇಕು’ ಎಂದು ಮೈಕ್‌ನಲ್ಲಿ ಸಂಬಂಧಪಟ್ಟವರಿಗೆ ಸಚಿವ ಖಂಡ್ರೆ ಸೂಚಿಸಿದರು.

ಗ್ಯಾರಂಟಿ ಸೇರಿದಂತೆ ವಿವಿಧ ಯೋಜನೆಗಳ ಸಮಸ್ಯೆ ಆಲಿಸಲು ಪ್ರತ್ಯೇಕ ಕೌಂಟರ್‌ ತೆರೆಯಲಾಗಿತ್ತು. ಆದರೆ, ಎಲ್ಲಕ್ಕಿಂತ ಹೆಚ್ಚಿನ ಅರ್ಜಿಗಳು ಗೃಹಲಕ್ಷ್ಮಿ ಕೌಂಟರ್‌ನಲ್ಲಿ ಸಲ್ಲಿಕೆಯಾಗುತ್ತಿದ್ದು ಕಂಡು ಬಂತು. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದರು.

ತಾಲ್ಲೂಕಿನ ವಿವಿಧೆಡೆಯಿಂದ ಸಾವಿರಾರೂ ಸಂಖ್ಯೆಯಲ್ಲಿ ಮಹಿಳೆಯರು, ಹಿರಿಯರು, ವೃದ್ಧರು ಆಗಮಿಸಿ ದೂರು ದಾಖಲಿಸಿದರು. ಸ್ಥಳದಲ್ಲಿದ್ದ ಸಚಿವರು ಒಂದಷ್ಟು ಜನರ ಕುಂದು ಕೊರತೆಗಳನ್ನು ಸ್ಥಳದಲ್ಲಿ ಬಗೆ ಹರಿಸುವ ಪ್ರಯತ್ನ ಮಾಡಿದರು.

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಒಂಬತ್ತೂವರೆ ತಿಂಗಳಿನಲ್ಲಿ ಭಾಲ್ಕಿ ತಾಲ್ಲೂಕಿನ ಅಭಿವೃಧ್ಧಿಗಾಗಿ ₹500 ಕೋಟಿ ಮಂಜೂರಾಗಿದೆ. ತಾಲ್ಲೂಕು ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಸಚಿವ ಖಂಡ್ರೆ ಹೇಳಿದರು.

ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟೆ, ಅಮೃತರಾವ್‌ ಚಿಮಕೋಡೆ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೀರಿಶ ಬದೋಲೆ, ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಪ್ರಕಾಶ ಕುದರೆ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ, ತಹಶೀಲ್ದಾರ್‌ ಶ್ರೀಯಂಕಾ ಧನಶ್ರೀ, ತಾ.ಪಂ ಇಓ ಸೂರ್ಯಕಾಂತ ಬಿರಾದಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಭಾಲ್ಕಿಯಲ್ಲಿ ಗುರುವಾರ ನಡೆದ ಜನಸ್ಪಂದನದಲ್ಲಿ ಭಾಗಿಯಾಗಿದ್ದ ಜನರು
ಭಾಲ್ಕಿಯಲ್ಲಿ ಗುರುವಾರ ನಡೆದ ಜನಸ್ಪಂದನದಲ್ಲಿ ಸಚಿವರ ಬಳಿ ಸಮಸ್ಯೆ ಹೇಳಿಕೊಳ್ಳಲು ವೇದಿಕೆಯತ್ತ ಧಾವಿಸಿದ್ದ ಮಹಿಳೆಯರು
ಚಿತ್ರ ಜನರ ಸಮಸ್ಯೆ ಆಲಿಸುತ್ತಿರುವ ಸಚಿವ ಈಶ್ವರ ಖಂಡ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.