ADVERTISEMENT

ಬೀದರ್‌: ಬಸವ ಭವನದ ಜಮೀನಿಗೆ ಪೂಜೆ

ಎಲ್ಲರ ಸಹಕಾರದೊಂದಿಗೆ ಅತ್ಯುತ್ತಮ ಬಸವ ಭವನ ನಿರ್ಮಾಣ–ಬಸವರಾಜ ಧನ್ನೂರ

​ಪ್ರಜಾವಾಣಿ ವಾರ್ತೆ
Published 11 ಮೇ 2024, 15:50 IST
Last Updated 11 ಮೇ 2024, 15:50 IST
ಬೀದರ್‌ನ ನಾವದಗೇರೆ ಸಮೀಪ ಬಸವ ಭವನಕ್ಕೆ ಜಿಲ್ಲಾಡಳಿತದಿಂದ ಮೀಸಲಿಟ್ಟಿರುವ ಜಾಗದಲ್ಲಿ ಲಿಂಗಾಯತ ಸಮಾಜದ ಮುಖಂಡರು ಶುಕ್ರವಾರ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು
ಬೀದರ್‌ನ ನಾವದಗೇರೆ ಸಮೀಪ ಬಸವ ಭವನಕ್ಕೆ ಜಿಲ್ಲಾಡಳಿತದಿಂದ ಮೀಸಲಿಟ್ಟಿರುವ ಜಾಗದಲ್ಲಿ ಲಿಂಗಾಯತ ಸಮಾಜದ ಮುಖಂಡರು ಶುಕ್ರವಾರ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು   

ಬೀದರ್‌: ನಗರದ ನಾವದಗೇರೆ ಸಮೀಪದ ಸರ್ವೇ ನಂ. 60ರಲ್ಲಿ ಜಿಲ್ಲಾಡಳಿತದಿಂದ ಮೀಸಲಿಟ್ಟಿರುವ ಒಂದು ಎಕರೆ ಹತ್ತು ಗುಂಟೆ ಜಮೀನಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಸವ ಭವನ ನಿರ್ಮಾಣದ ಜಾಗದಲ್ಲಿ ಶುಕ್ರವಾರ ಬಸವೇಶ್ವರ ಪೂಜೆ ನೆರವೇರಿಸಿ, ಷಟಸ್ಥಲ ಧ್ವಜಾರೋಹಣ ಮಾಡಲಾಯಿತು.

ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಬಸವಪೂಜೆ ನೆರವೇರಿಸಿ, ಅನೇಕ ವರ್ಷಗಳ ಬಸವ ಭಕ್ತರ ಕನಸು ಇಂದು ಈಡೇರುವ ಕಾಲ ಸನ್ನಿಹಿತವಾಗಿದೆ. ಈ ಹಿಂದಿನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದಾಗ ಅವರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಸರ್ಕಾರದ ಅನುಮತಿ ಮೇರೆಗೆ ಹಾಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಬಸವ ಭವನಕ್ಕೆ ಒಂದು ಎಕರೆ, ಹತ್ತು ಗುಂಟೆ ಜಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ. ಎಲ್ಲರ ಸಹಕಾರ ಪಡೆದು ಇಲ್ಲಿ ಅತ್ಯುತ್ತಮವಾದ ಬಸವ ಭವನ ನಿರ್ಮಿಸಲಾಗುವುದು ಎಂದು ಹೇಳಿದರು.

ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ಎಲ್ಲರೂ ಒಂದೆಡೆ ಸೇರುವ ಕಾಲ ಕೂಡಿ ಬಂದಿದೆ. ಇದು ಯಾವುದೇ ಒಂದು ಧರ್ಮ, ಜಾತಿ, ಮತ, ಪಂಥದ ಭವನ ವಾಗದೇ ಇದು ಸಮ ಸಮಾಜ ನಿರ್ಮಾಣ ಮಾಡಿದ ಕಾಯಕ ಜೀವಿಗಳ ಬಸವ ಭವನವಾಗಲಿದೆ. ಇನ್ನೇನು ಬರುವ ದಿನಗಳಲ್ಲಿ ಎಲ್ಲ ಬಸವ ಭಕ್ತರ ಸಭೆಯನ್ನು ಕರೆದು, ರೂಪುರೇಷೆ ಸಿದ್ಧಪಡಿಸಿ ನೀಲ ನಕ್ಷೆ ತಯಾರಿಸಿ, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಅನುದಾನ ಪಡೆಯಬೇಕಿದೆ ಎಂದರು.

ADVERTISEMENT

ಬಸವಣ್ಣನವರು ಒಂದು ಮತಕ್ಕೆ ಸೀಮತವಾದವರಲ್ಲ. ಅವರ ತತ್ವ, ಸಿದ್ಧಾಂತ ಇಡೀ ಮಾನವ ಕುಲಕೋಟಿಗೆ ಒಳಿತು ಬಯಸುತ್ತದೆ. ಅವರ ವಿಚಾರ ಅಂದಿಗಿಂತ ಇಂದು ಪ್ರಸ್ತುತವಾಗಿವೆ. ಅವುಗಳನ್ನು ಅನುಷ್ಠಾನಕ್ಕೆ ತರಲು ಪ್ರಸ್ತಾವಿತ ಬಸವ ಭವನ ಕಾರ್ಯ ಮಾಡಲಿದೆ ಬಸವ ಧ್ವಜಾರೋಹಣ ನೆರವೇರಿಸಿದ ಮುಖಂಡ ಶಿವಶರಣಪ್ಪ ವಾಲಿ ಹೇಳಿದರು.

ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಪ್ರಧಾನ ಕಾರ್ಯದರ್ಶಿ ಸುರೇಶ ಸ್ವಾಮಿ, ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ, ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಕುಶಾಲರಾವ ಪಾಟೀಲ, ಪ್ರಮುಖರಾದ ಶಿವರಾಜ ಪಾಟೀಲ ಅತಿವಾಳ, ದೀಪಕ ವಾಲಿ, ಚಂದ್ರಕಾಂತ ಹೆಬ್ಬಾಳೆ, ರಾಜೇಂದ್ರ ಜೊನ್ನಿಕೇರಿ, ಶಿವಶಂಕರ ಟೋಕರೆ, ವಿವೇಕ ಪಟ್ನೆ, ಬಾಬು ದಾನಿ, ಕಂಟೆಪ್ಪ ಗಂಧಿಗುಡಿ, ಗಣೇಶ ಶೀಲವಂತ, ಸಿದ್ಧಾರೂಢ ಭಾಲ್ಕೆ, ಆಶೋಕ ದಿಡಗೆ, ರವಿಕಾಂತ ಬಿರಾದಾರ, ರವಿ ಪಾಪಡೆ, ಸಂಜೀವಕುಮಾರ ಪಾಟೀಲ, ಚಂದ್ರಕಾಂತ ಮಿರ್ಚೆ, ಡಾ. ರಜನೀಶ ವಾಲಿ, ವಿರೂಪಾಕ್ಷ ಗಾದಗಿ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.