ADVERTISEMENT

ಜೂನ್‌ 6ರಿಂದ ದಕ್ಷಿಣ ಆಫ್ರಿಕಾದಲ್ಲಿ ಬಸವತತ್ವ ಸಮ್ಮೇಳನ: ಚನ್ನಬಸವಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2024, 15:42 IST
Last Updated 2 ಜೂನ್ 2024, 15:42 IST
ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಬಸವತತ್ವ ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿರುವ ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಅವರಿಗೆ ಲಿಂಗಾಯತ ಸಮಾಜದ ಪ್ರಮುಖರು ಬೀದರ್‌ನಲ್ಲಿ ಭಾನುವಾರ ಬಸವಜ್ಯೋತಿ ನೀಡಿದರು
ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಬಸವತತ್ವ ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿರುವ ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಅವರಿಗೆ ಲಿಂಗಾಯತ ಸಮಾಜದ ಪ್ರಮುಖರು ಬೀದರ್‌ನಲ್ಲಿ ಭಾನುವಾರ ಬಸವಜ್ಯೋತಿ ನೀಡಿದರು   

ಬೀದರ್‌: ‘ದಕ್ಷಿಣ ಆಫ್ರಿಕಾದಲ್ಲಿ ಜೂನ್‌ 6ರಿಂದ ಬಸವತತ್ವ ಸಮ್ಮೇಳನ ನಡೆಯಲಿದ್ದು, ಭಾರತದಿಂದ 275 ಬಸವ ಭಕ್ತರು ಪಾಲ್ಗೊಳ್ಳಲಿದ್ದಾರೆ’ ಎಂದು ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.

‘ಜೂ. 6ರಂದು ದಕ್ಷಿಣ ಆಫ್ರಿಕಾದ ಟಾಲ್‌ಸ್ಟಾಯ್‌ ಫೋರಂ, ಪ್ರಿಟೋರಿಯಾ, 7ರಂದು ಪೀಟರ್‌ ಮಾರಿಚ್‌ ಬರ್ಗ್‌ ರೈಲು ನಿಲ್ದಾಣ, 8ರಂದು ಫೊವೆಕ್ಸ್‌, 9ರಂದು ಡರ್ಬನ್‌ ಹಾಗೂ ಸನ್‌ ಸಿಟಿಯಲ್ಲಿ ಬಸವತತ್ವ ಸಮ್ಮೇಳನ ಹಾಗೂ ಜ್ಯೋತಿ ಯಾತ್ರೆ ಜರುಗಲಿದೆ’ ಎಂದು ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ಬಸವಧರ್ಮ ಪೀಠಾಧ್ಯಕ್ಷೆ ಲಿಂಗೈಕ್ಯ ಮಾತೆ ಮಹಾದೇವಿಯವರು ಮುಂಬೈ, ಬೆಂಗಳೂರು ಸೇರಿದಂತೆ ದೇಶದ 28 ವಿವಿಧ ಕಡೆಗಳಲ್ಲಿ ಬಸವತತ್ವ ಸಮ್ಮೇಳನ ಹಮ್ಮಿಕೊಂಡಿದ್ದರು. ಶ್ರೀಲಂಕಾ, ಭೂತಾನ್‌ ದೇಶಗಳಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ ಜರುಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ಜರುಗಲಿರುವ ಈ ಸಮ್ಮೇಳನ ನಾಲ್ಕನೆಯದ್ದಾಗಿದೆ’ ಎಂದು ತಿಳಿಸಿದರು.

ADVERTISEMENT

‘ವಿಶ್ವ ಶಾಂತಿ, ವಿಶ್ವ ಕಲ್ಯಾಣಕ್ಕಾಗಿ, ಸಕಲ ಜೀವಾತ್ಮರ ಲೇಸಿಗಾಗಿ ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಮಹಾತ್ಮರಿಂದ ಮಹಾತ್ಮರಿಗಾಗಿ ಈ ಸಮ್ಮೇಳನ ನಡೆಯುತ್ತಿದೆ. ಕಾಯಕ ತತ್ವ ಹಾಗೂ ಅಸ್ಪೃಶ್ಯ ನಿವಾರಣೆ ಉದ್ದೇಶದಿಂದ ಹಾಗೂ ಮಹಾತ್ಮ ಗಾಂಧಿ, ಮಹಾತ್ಮ ಬಸವೇಶ್ವರ ಹಾಗೂ ಮಹಾತ್ಮ ನೆಲ್ಸನ್ ಮಂಡೇಲಾ ಅವರ ತತ್ವ ಪ್ರಚಾರಕ್ಕಾಗಿ ಈ ಅಂತರರಾಷ್ಟ್ರೀಯ ಜ್ಯೋತಿ ಯಾತ್ರೆ ಜರುಗುತ್ತಿದೆ’ ಎಂದರು.

‘ಪ್ರಜಾಪ್ರಭುತ್ವದ ತವರು ಬಸವಕಲ್ಯಾಣದ ಅನುಭವ ಮಂಟಪದಿಂದ ಈ ಜ್ಯೋತಿಯಾತ್ರೆ ಆರಂಭವಾಗಿದ್ದು, ಸೋಲಾಪುರದ ಸಿದ್ಧರಾಮೇಶ್ವರ ದೇವಾಲಯ, ಪುಣೆ, ಮುಂಬೈ ಮೂಲಕ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಲಾಗುವುದು’ ಎಂದು ವಿವರಿಸಿದರು.

ಬಸವ ಸೇವಾ ಫೌಂಡೇಶನ್ ಅಧ್ಯಕ್ಷ ನಾಗನಾಥ ಪಾಟೀಲ, ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ, ಲಿಂಗಾಯತ ಧರ್ಮ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ, ರಾಷ್ಟ್ರೀಯ ಬಸವ ದಳದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ ಸಂಗಮದ, ಪ್ರಮುಖರಾದ ಶಿವಶರಣಪ್ಪ ಪಾಟೀಲ ಹಾರೂರಗೇರಿ, ಮಲ್ಲಿಕಾರ್ಜುನ ಜೈಲರ್, ರವಿಕಾಂತ ಬಿರಾದಾರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.