ADVERTISEMENT

ಬಸವಕಲ್ಯಾಣ: ಸಾಂಸ್ಕೃತಿಕ ನಾಯಕನ ಕೋಟೆಯ ದುಃಸ್ಥಿತಿ

ಮಾಣಿಕ ಆರ್ ಭುರೆ
Published 28 ಅಕ್ಟೋಬರ್ 2024, 4:40 IST
Last Updated 28 ಅಕ್ಟೋಬರ್ 2024, 4:40 IST
ಬಸವಕಲ್ಯಾಣದ ಐತಿಹಾಸಿಕ ಕೋಟೆಯ ಪ್ರವೇಶ ದ್ವಾರದ ಮೇಲೆ ಗೋಡೆಗಳಲ್ಲಿ ಹಾಗೂ ಪಕ್ಕದ ಕಂದಕದಲ್ಲಿ ಹುಲ್ಲು ಮತ್ತು ಮುಳ್ಳಿನ ಕಂಟಿಗಳು ಬೆಳೆದಿರುವುದು
ಬಸವಕಲ್ಯಾಣದ ಐತಿಹಾಸಿಕ ಕೋಟೆಯ ಪ್ರವೇಶ ದ್ವಾರದ ಮೇಲೆ ಗೋಡೆಗಳಲ್ಲಿ ಹಾಗೂ ಪಕ್ಕದ ಕಂದಕದಲ್ಲಿ ಹುಲ್ಲು ಮತ್ತು ಮುಳ್ಳಿನ ಕಂಟಿಗಳು ಬೆಳೆದಿರುವುದು   

ಬಸವಕಲ್ಯಾಣ: ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಿಸಿದೆ. ಈ ಮೂಲಕ ಅವರಿಗೆ ದೊಡ್ಡ ಮಟ್ಟದ ಗೌರವ ದೊರೆತರೂ ಕಲ್ಯಾಣದ ಕೋಟೆಯಲ್ಲಿ ಓಡಾಡಿದಾಗ ಅಂಥವರು ಕಾರ್ಯಗೈದಿದ್ದ ಕೋಟೆ ಹೀಗಿರಬೇಕೇ? ಈ ಪ್ರಶ್ನೆ ಕಾಡುತ್ತದೆ.

ನಾಡಿನ ಅತಿ ಹಳೆಯ ಕೆಲವೇ ಕೋಟೆಗಳಲ್ಲಿ ಇದೊಂದು. 11ನೇ ಶತಮಾನದಲ್ಲಿ ನಿರ್ಮಾಣವಾದದ್ದು. ದಕ್ಷಿಣ ಭಾರತದ ಕೇಂದ್ರಬಿಂದು ಎನಿಸಿತ್ತು. ಅನೇಕ ಅರಸರ ರಾಜಧಾನಿಯಾಗಿ ಮೆರೆದಿತ್ತು. ಬಸವಣ್ಣನವರು ಸಮಾನತೆ, ಕಾಯಕ, ದಾಸೋಹ ತತ್ವ ಸಾರುವ ಮೂಲಕ ಜನಮಾನಸದಲ್ಲಿ ಅಜರಾಮರರಾದರು. ಅವರು ಪ್ರಥಮದಲ್ಲಿ ಈ ಕೋಟೆಯಲ್ಲಿಯೇ ಮಹಾಮಂತ್ರಿ ಆಗಿದ್ದುಕೊಂಡು ಸಾಧನೆಯ ಪಥದಲ್ಲಿ ಮುನ್ನಡೆದರು. ಆದರೆ ಅವರು ಇಲ್ಲಿ ಎಲ್ಲಿರುತ್ತಿದ್ದರು ಎನ್ನುವುದೇ ಇದುವರೆಗೆ ಪತ್ತೆ ಆಗಿಲ್ಲ.

ಅವರು ನಿರ್ಮಿಸಿದ ಅನುಭವ ಮಂಟಪ ಜಗತ್ತಿನ ಪ್ರಥಮ ಸಂಸತ್ತು ಎಂಬ ಹೆಗ್ಗಳಿಕೆ ಪಡೆಯಿತು. ಈ ಮೂಲಕ ಅವರು ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದರು. ಆದ್ದರಿಂದ ₹ 620 ಕೋಟಿ ವೆಚ್ಚದಲ್ಲಿ ಮಂಟಪ ಮರು ನಿರ್ಮಾಣಗೊಳ್ಳುತ್ತಿದ್ದು ಈ ಕೆಲಸ ಪೂರ್ಣಗೊಳ್ಳುವ ಹಂತದಲ್ಲಿದೆ. ರಾಜ್ಯ ಸರ್ಕಾರ ಈಚೆಗೆ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದ ಅಂಗವಾಗಿ ಇಲ್ಲಿಂದಲೇ ಇಡೀ ರಾಜ್ಯದಾದ್ಯಂತ ಮಾನವ ಸರಪಳಿ ನಿರ್ಮಿಸಿತ್ತು. ಆದರೆ ಐತಿಹಾಸಿಕ ಕೋಟೆಯ ಕಡೆಗೆ ಮಾತ್ರ ಯಾರೂ ಲಕ್ಷ ಹರಿಸುತ್ತಿಲ್ಲ. ಹೀಗಾಗಿ ಎಲ್ಲೆಂದರಲ್ಲಿ ಹುಲ್ಲು ಬೆಳೆದು ಪ್ರವಾಸಿಗರಿಗೆ ಭಯ ಹುಟ್ಟುವಂಥ ವಾತಾವರಣವಿದೆ.

ADVERTISEMENT

ಮೂರು ಸುತ್ತಿನ ಕೋಟೆ ಇದಾಗಿದೆ. ಕಂದಕದಲ್ಲಿ ತೆರೆಯುವ ಪೂರ್ವಾಭಿಮುಖವಾದ ಪ್ರವೇಶ ದ್ವಾರದಿಂದ ಮೇಲಕ್ಕೆ ಏರುತ್ತ ಹೋದಂತೆ ವಿವಿಧ ಕಟ್ಟಡಗಳು, ಮಹಲುಗಳು ಎದುರಾಗುತ್ತವೆ. ಸುತ್ತುಬಳಸಿ ಸುಮಾರು ಆರು ಒಳದ್ವಾರಗಳಿಂದ ಹಾದು ಹೋದಾಗ ಇದರ ನೆತ್ತಿ ತಲುಪಬಹುದು. ಮೇಲಂತಸ್ತಿನಲ್ಲಿ ರಾಜಮಹಲ್, ರಾಣಿಮಹಲ್, ನೃತ್ಯ ಸಭಾಂಗಣ, ದರ್ಬಾರ್ ಹಾಲ್‌ಗಳು ಅಕ್ಕಪಕ್ಕದಲ್ಲಿವೆ. ಇವುಗಳ ಎದುರಲ್ಲಿಯೇ ಕೆಲ ತಿಂಗಳುಗಳ ಹಿಂದೆ 100 ಅಡಿ ಎತ್ತರದ ಕಂಬ ನಿಲ್ಲಿಸಿ ಬೃಹತ್ ರಾಷ್ಟ್ರಧ್ವಜ ಹಾರಾಡಿಸಲಾಗುತ್ತಿದೆ.

ಹಾಗೆ ನೋಡಿದರೆ, ಕೋಟೆಯ ಗೋಡೆಗಳು ಸುಸ್ಥಿತಿಯಲ್ಲಿಯೇ ಇವೆ. ಕೆಲವೆಡೆ ಕಟ್ಟಡದ ಕುಸಿತದಿಂದ ಸಾಕಷ್ಟು ಹಾನಿಯೂ ಆಗಿದೆ. ಮಹತ್ವದ ಅವಶೇಷಗಳು ಮಣ್ಣಿನಲ್ಲಿ ಹೂತಿವೆ. ಅಲ್ಲಲ್ಲಿರುವ ಆಕರ್ಷಕ ತೋಪುಗಳು ಹಾಗೂ ಮಹತ್ವದ ತಾಣಗಳಿಗೆ ಹೋಗುವ ದಾರಿಯಲ್ಲಿ ಹುಲ್ಲು ಬೆಳೆದಿದೆ. ರಸ್ತೆಗಳಲ್ಲಿ ಕಲ್ಲು, ಮಣ್ಣು ಹರಡಿಕೊಂಡಿದೆ. ಹೀಗಾಗಿ ಹಾವು, ಚೇಳಿನ ಕಾಟ ಹೆಚ್ಚಾಗಿದೆ. ದೂರದೂರದಿಂದ ಪ್ರವಾಸಕ್ಕೆ ಬರುವ ಮಹಿಳೆಯರು, ಮಕ್ಕಳು ಒಳಗಿನ ಎಲ್ಲವನ್ನೂ ನೋಡಲಾಗದೆ ಹಿಂದಿರುಗುತ್ತಿದ್ದಾರೆ.

‘ಕೋಟೆಯಲ್ಲಿ ವರ್ಷಕ್ಕೆ ಒಂದು ಸಲ ಮಾತ್ರ ಸ್ವಚ್ಛತೆ ಕೈಗೊಂಡರೆ ಸಾಲದು. ಆಗಾಗ ಹುಲ್ಲು ಮತ್ತು ಮುಳ್ಳು ಕಂಟಿಗಳನ್ನು ತೆಗೆಯಬೇಕು' ಎಂದು ಸಮಾಜ ಕಾರ್ಯಕರ್ತ ಶಿವಕುಮಾರ ನಾರಾಯಣಪುರ ಆಗ್ರಹಿಸಿದ್ದಾರೆ.

‘ಕೋಟೆಯಲ್ಲಿ ಎಲ್ಲೆಡೆ ಉತ್ಖನನ ಮತ್ತು ಸಂಶೋಧನೆ ಕೈಗೊಂಡು ಬಸವಣ್ಣನವರು ಮಹಾಮಂತ್ರಿಯಾಗಿ ಆಸೀನರಾಗಿದ್ದ ಸ್ಥಳ ಹಾಗೂ ಇತರೆ ಕಟ್ಟಡಗಳನ್ನು ಹುಡುಕುವುದು ಅತ್ಯಂತ ಅಗತ್ಯವಾಗಿದೆ' ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಕಲ್ಯಾಣರಾವ್ ಮದರಗಾಂವಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.