ADVERTISEMENT

ಬಿಳಿಜೋಳದ ಭರ್ಜರಿ ಬೆಳೆ: ಅರ್ಧಕ್ಕಿಳಿದ ಬೆಲೆ

ಬಸವಕಲ್ಯಾಣದಲ್ಲಿ 15 ವರ್ಷಗಳ ಬಳಿಕ ಬಿಳಿ ಜೋಳದ ಕ್ಷೇತ್ರ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2024, 5:07 IST
Last Updated 17 ಮಾರ್ಚ್ 2024, 5:07 IST
ಬಸವಕಲ್ಯಾಣ ತಾಲ್ಲೂಕಿನ ಕೊಹಿನೂರನ ಹೊಲವೊಂದರಲ್ಲಿನ ಜೋಳದ ಬೆಳೆ
ಬಸವಕಲ್ಯಾಣ ತಾಲ್ಲೂಕಿನ ಕೊಹಿನೂರನ ಹೊಲವೊಂದರಲ್ಲಿನ ಜೋಳದ ಬೆಳೆ   

ಮಾಣಿಕ ಆರ್.ಭುರೆ

ಬಸವಕಲ್ಯಾಣ: ತಾಲ್ಲೂಕಿನ ಜಮೀನಿನಲ್ಲಿ ಈ ಸಲ ಎಲ್ಲೆಲ್ಲೂ ಬಿಳಿ ಜೋಳವೇ ಕಾಣುತ್ತಿದ್ದು ಇಳುವರಿ ಸಹ ಉತ್ತಮವಾಗಿದೆ. ಆದರೆ, ಎರಡು ತಿಂಗಳ ಹಿಂದೆ ಕ್ವಿಂಟಾಲ್‌ಗೆ ₹8000 ಬೆಲೆ ಇದ್ದಿರುವುದು ಈಗ ಅರ್ಧಕ್ಕೆ ಇಳಿದಿರುವುದರಿಂದ ರೈತರ ಮುಖದಲ್ಲಿನ ಮಂದಹಾಸ ಮಾಯವಾಗಿದೆ.

ಹಾಗೆ ನೋಡಿದರೆ, 20 ವರ್ಷಗಳ ಹಿಂದಿನವರೆಗೂ ಈ ಭಾಗದಲ್ಲಿ ಬಿಳಿಜೋಳ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು. ಆದ್ದರಿಂದಲೇ ಇಲ್ಲಿನವರಿಗೆ ಜೋಳದ ರೊಟ್ಟಿ ಎಂದರೆ ಬಲುಪ್ರೀತಿ. ಆದರೆ, ನಂತರದಲ್ಲಿ ರೈತರು ಆರ್ಥಿಕ ಬೆಳೆ ಬೆಳೆಯುವುದಕ್ಕೆ ಮುಂದಾಗಿದ್ದರಿಂದ ಸೂರ್ಯಕಾಂತಿ, ತೊಗರಿ, ಹೆಸರು ಮತ್ತು ಉದ್ದು ಹೆಚ್ಚಾಗಿ ಬಿತ್ತನೆಯಾಯಿತು. ಈಚೆಗಂತೂ ಶೇ 90 ರಷ್ಟು ಸೋಯಾಬಿನ್ ಬಿತ್ತಲಾಗುತ್ತಿದೆ. ಹಿಂಗಾರು ಬೆಳೆಯಾಗಿ ಈ ವರ್ಷ ಬಿಳಿ ಜೋಳ ಸಹ ಅತ್ಯಧಿಕ ಪ್ರಮಾಣದಲ್ಲಿ ಬಿತ್ತನೆಯಾಗಿದೆ.

ADVERTISEMENT

ಜೋಳದ ದಂಟುಗಳು ಎತ್ತರವಾಗಿ ಬೆಳೆದಿದ್ದು ತೆನೆಗಳು ಸಹ ದೊಡ್ಡದಾಗಿವೆ. ಈಗಾಗಲೇ ಶೇ 5 ರಷ್ಟು ರಾಶಿ ಮಾಡಲಾಗಿದ್ದು ಎಕರೆಗೆ ಸರಾಸರಿ 4-6 ಕ್ವಿಂಟಾಲ್ ಇಳುವರಿ ದೊರೆತಿದೆ. ಆದರೆ, ಮೊದಲಿನಂತೆ ಕಣ ನಿರ್ಮಿಸಿ ಗೂಡ (ತೆನೆ) ಮುರಿಯುವುದು, ಎತ್ತುಗಳನ್ನು ಕಟ್ಟಿ ಹಂತಿ ಹಾಕಿ ರಾಶಿ ಮಾಡುವುದು ಕಡಿಮೆಯಾಗಿದೆ. ಎಲ್ಲದಕ್ಕೂ ಯಂತ್ರಗಳು ಆಸರೆಯಾಗಿವೆ.

‘ಈ ಸಲ ಹಿಂದಿನ ಎರಡು ದಶಕಗಳಲ್ಲಿ ಬಾರದಂಥ ಜೋಳದ ಬೆಳೆ ಬಂದಿದೆ. ಜೋಳದ ಜೊತೆಯಲ್ಲಿ ಈ ಸಲ ಕಣಕಿಯಿಂದಲೂ (ಮೇವು) ರೈತರಿಗೆ ಲಾಭ ಆಗಲಿದೆ' ಎಂದು ಸಸ್ತಾಪುರದ ರೈತ ಮುಖಂಡ ಮಡಿವಾಳಪ್ಪ ಪಾಟೀಲ ಹೇಳಿದ್ದಾರೆ. ‘ಎಕರೆಗೆ ಸರಾಸರಿ 5 ಕ್ವಿಂಟಾಲ್ ಇಳುವರಿ ದೊರಕುತ್ತಿರುವ ಕಾರಣ ರೈತರಿಗೆ ಸಂತಸವಾಗಿದೆ' ಎಂದು ಕಿಟ್ಟಾದ ಮಾರುತಿ ಫುಲೆ ಹೇಳಿದ್ದಾರೆ.

‘ಮೊದಲಿನಂತೆ ಮನೆಮನೆಗೂ ಎತ್ತುಗಳು ಇಲ್ಲ. ಅಲ್ಲದೆ ತೆನೆ ಮುರಿಯುವುದಕ್ಕೆ ಕೂಲಿ ಕಾರ್ಮಿಕರು ಸಹ ಸಿಗುತ್ತಿಲ್ಲ. ಆದ್ದರಿಂದ ಖಳಾ(ಕಣ) ನಿರ್ಮಿಸಿ ಹಂತಿ ಹಾಕಿ ರಾಶಿ ಮಾಡುವುದು ಕಷ್ಟದಾಯಕವಾಗಿದೆ. ರಾಶಿ ಮಾಡುವಾಗ ಕುಟುಂಬದ ಸದಸ್ಯರು ಹೆಚ್ಚು ದುಡಿಯಬೇಕಾಗುತ್ತಿದೆ’ ಎಂದು ಪ್ರಭುಶೆಟ್ಟಿ ಪಾಟೀಲ ಹೊನ್ನಾಳಿ ಹೇಳಿದ್ದಾರೆ.

‘ಈ ವರ್ಷ ತಾಲ್ಲೂಕಿನಲ್ಲಿ ಸೋಯಾಬಿನ್ ಮತ್ತು ಜೋಳ ಹೆಚ್ಚಾಗಿ ಬೆಳೆಯಲಾಗಿದೆ. ವಾತಾವರಣ ಅನುಕೂಲಕರ ಇದ್ದುದರಿಂದ ಬೆಳೆಗೆ ಯಾವುದೇ ರೀತಿಯಲ್ಲಿ ಹಾನಿ ಆಗಿಲ್ಲ’ ಎಂದು ಕೃಷಿ ಸಹಾಯಕ ನಿರ್ದೇಶಕ ಮಾರ್ತಂಡ ಮಚಕೂರಿ ಹೇಳಿದ್ದಾರೆ.

‘ಬಿಳಿಜೋಳಕ್ಕೆ ಶುಕ್ರವಾರ ₹ 3,900 ಧಾರಣೆ ಇತ್ತು' ಎಂದು ಎಪಿಎಂಸಿ ಕಾರ್ಯದರ್ಶಿ ಸಂತೋಷ ಮುದಗೊಂಡ ತಿಳಿಸಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನ ಕೊಹಿನೂರನ ಹೊಲವೊಂದರಲ್ಲಿನ ಜೋಳದ ಬೆಳೆ
ಜೋಳದ ತೆನೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.