ಬಸವಕಲ್ಯಾಣ (ಬೀದರ್): ತಾಲ್ಲೂಕಿನ ಆಲಗೂಡನಲ್ಲಿ ಮಂಗಳವಾರ ಸುರಿದ ಭಾರಿ ಮಳೆಗೆ ಹತ್ತಾರು ರೈತರ ಜಮೀನುಗಳಲ್ಲಿ ನೀರು ಸಂಗ್ರಹಗೊಂಡಿದ್ದು ರಸ್ತೆ ಹಾಳಾಗಿದೆ.
ಮಂಠಾಳದಿಂದ ಗ್ರಾಮಕ್ಕೆ ಬರುವ ರಸ್ತೆಯಲ್ಲಿ ಗುಡ್ಡದ ಮೇಲಿನಿಂದ ರಭಸದಿಂದ ನೀರು ಬಂದಿದ್ದರಿಂದ ಡಾಂಬರು ಕಿತ್ತುಕೊಂಡು ಹೋಗಿದೆ. ಅಲ್ಲಲ್ಲಿ ತಗ್ಗುಗಳು ಬಿದ್ದಿವೆ.
ಇದಲ್ಲದೆ ನಾಲೆಯಲ್ಲಿ ನೀರು ಉಕ್ಕಿ ಹರಿದಿದ್ದರಿಂದ ಧನರಾಜ ಮುದಗಲೆ, ನಾರಾಯಣ ಮುದಗಲೆ, ಪಾಂಡುರಂಗ ಪರಾಂಡೆ, ಬಾಬುರಾವ್, ನಾಮದೇವ, ಅರವಿಂದ ಚೌಧರಿ, ಬಾಬುರಾವ್ ಮುಂತಾದವರ ಹೊಲಗಳಲ್ಲಿನ ಮಣ್ಣು ಮತ್ತು ಬೆಳೆ ಕೊಚ್ಚಿಕೊಂಡು ಹೋಗಿದೆ.
'ಧನರಾಜ ಮುದಗಲೆ ಅವರ 17 ಎಕರೆಯಷ್ಟು ಹೊಲದಲ್ಲಿನ ಬೆಳೆ ಹಾಳಾಗಿದೆ. ಸೋಯಾಬಿನ್, ಗೋಬಿ, ತೊಗರಿ, ಬಾಳೆ ಬೆಳೆಗೆ ಹಾನಿಯಾಗಿದೆ' ಎಂದು ಗ್ರಾಮಸ್ಥರಾದ ಮಾರುತಿ ಮುದಗಲೆ ತಿಳಿಸಿದ್ದಾರೆ.
'ಮಳೆಗೆ ಆಲಗೂಡನಲ್ಲಿ ಬೆಳೆ ಮತ್ತು ರಸ್ತೆಗೆ ಹಾನಿಯಾಗಿದೆ. ಯರಂಡಗಿ ಮತ್ತು ಹಣಮಂತವಾಡಿಯಲ್ಲಿ ಕೆಲ ಮನೆಗಳ ಗೋಡೆಗಳು ಕುಸಿದಿವೆ. ಹಣಮಂತವಾಡಿಯ ಚಂದ್ರಮ್ಮ ಎನ್ನುವವರ ಮನೆಯ ಗೋಡೆಯ ಮೇಲೆ ಸಿಡಿಲು ಬಿದ್ದಿದ್ದು ಗೋಡೆಗೆ ಬಿರುಕು ಬಿದ್ದಿದೆ. ಜೀವ ಹಾನಿ ಆಗಿಲ್ಲ' ಎಂದು ತಹಶೀಲ್ದಾರ್ ದತ್ತಾತ್ರಿ ಗಾದಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.