ADVERTISEMENT

ಬಸವಕಲ್ಯಾಣ: ಮುಡಬಿಯಲ್ಲಿ ದಸರಾ ದಾಸೋಹ ಸೇವೆ

ಗುಣತೀರ್ಥವಾಡಿ ಬಸವಪ್ರಭು ಸ್ವಾಮೀಜಿಯಿಂದ ಅಕ್ಕ ಮಹಾದೇವಿ ಪ್ರವಚನ

ಮಾಣಿಕ ಆರ್ ಭುರೆ
Published 6 ಅಕ್ಟೋಬರ್ 2024, 4:50 IST
Last Updated 6 ಅಕ್ಟೋಬರ್ 2024, 4:50 IST
ಬಸವಕಲ್ಯಾಣ ತಾಲ್ಲೂಕಿನ ಹೋಬಳಿ ಕೇಂದ್ರ ಮುಡಬಿಯ ಅಂಬಾಭವಾನಿ ದೇವಿ ದೇವಸ್ಥಾನದಲ್ಲಿ ದಸರಾ ನಿಮಿತ್ತ ಪ್ರತಿಷ್ಠಾಪಿಸಿದ ಉತ್ಸವ ಮೂರ್ತಿ
ಬಸವಕಲ್ಯಾಣ ತಾಲ್ಲೂಕಿನ ಹೋಬಳಿ ಕೇಂದ್ರ ಮುಡಬಿಯ ಅಂಬಾಭವಾನಿ ದೇವಿ ದೇವಸ್ಥಾನದಲ್ಲಿ ದಸರಾ ನಿಮಿತ್ತ ಪ್ರತಿಷ್ಠಾಪಿಸಿದ ಉತ್ಸವ ಮೂರ್ತಿ   

ಬಸವಕಲ್ಯಾಣ: ತಾಲ್ಲೂಕಿನ ಮುಡಬಿ ಗ್ರಾಮದ ಅಂಬಾಭವಾನಿ ದೇವಸ್ಥಾನದಲ್ಲಿ ದಸರಾ ಹಬ್ಬದ ಅಂಗವಾಗಿ 21 ದಿನಗಳ ಅನ್ನ ಸಂತರ್ಪಣೆ ಹಾಗೂ ಶರಣೆ ಅಕ್ಕ ಮಹಾದೇವಿಯವರ ಪ್ರವಚನದ ಮೂಲಕ ಅನ್ನ–ಜ್ಞಾನ ದಾಸೋಹ ಏರ್ಪಡಿಸಲಾಗಿದ್ದು, ಅನೇಕ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.

ಮುಡಬಿಯು ಹೋಬಳಿ ಕೇಂದ್ರ. ಇಲ್ಲಿನ ಗ್ರಾಮದ ಪಂಚಾಯಿತಿ ಸಮೀಪದ ಅಂಬಾಭವಾನಿ ದೇವಸ್ಥಾನ ಚಿಕ್ಕದಾಗಿದ್ದರೂ ಅಪಾರ ಭಕ್ತರ ಶ್ರದ್ಧೆಯ ಕೇಂದ್ರವಾಗಿದೆ. ಇಲ್ಲಿ ಭವಾನಿಯ ಎತ್ತರದ ಆಕರ್ಷಕವಾದ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ವಿಶೇಷ ಪೂಜೆ, ಅಭಿಷೇಕ ಹಾಗೂ ಇತರೆ ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಗುತ್ತಿದೆ. ಹರಕೆ ಹೊತ್ತವರು ಉಡಿ ತುಂಬುತ್ತಿದ್ದಾರೆ. ಭಜನೆ, ಸಂಗೀತ ಕಾರ್ಯಕ್ರಮಗಳೂ ನಡೆಯುತ್ತಿವೆ.

ಪ್ರತಿದಿನ ಊರಿನ ಒಬ್ಬೊಬ್ಬ ಕುಟುಂಬದವರು ಅನ್ನ ದಾಸೋಹ ಸೇವೆ ಮಾಡುತ್ತಿದ್ದಾರೆ. ಈ ಸಲ ದೇವಿಯ ಹೊಸ ಶಿಲಾ ಮೂರ್ತಿಯ ಪ್ರತಿಷ್ಠಾಪನೆಯೂ ನಡೆಯಲಿದ್ದು, ಸಂಭ್ರಮ ಮತ್ತಷ್ಟು ಇಮ್ಮಡಿಸಿದೆ.

ADVERTISEMENT

‘ಅಂಬಾಭವಾನಿ ದೇವಿಯು ಗ್ರಾಮದ ಪ್ರಮುಖ ಆರಾಧ್ಯದೇವತೆ. ಎಲ್ಲ ಸಮುದಾಯದವರು ಈ ದೇವಸ್ಥಾನದ ಭಕ್ತರಾಗಿದ್ದಾರೆ. ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯ ಬಸವಪ್ರಭು ಸ್ವಾಮೀಜಿಯವರು ಈ ಸಲ ಅಕ್ಕನ ಆಧ್ಯಾತ್ಮಿಕ ಪ್ರವಚನ ಹೇಳುತ್ತಿದ್ದಾರೆ’ ಎಂದು ಗ್ರಾಮದ ಮುಖಂಡ ಸದಾನಂದ ಪಾಟೀಲ ತಿಳಿಸಿದರು.

‘ಅ.12ರಂದು ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಅ.15ರಂದು ಕಲ್ಲೂರು ಹಿರೇಮಠದ ಮೃತ್ಯುಂಜಯ ಸ್ವಾಮೀಜಿ ಅವರು ಹೊಸ ಪ್ರತಿಮೆ ಪ್ರತಿಷ್ಠಾಪಿಸಲಿದ್ದಾರೆ. ಅ.16ಕ್ಕೆ ಬೆಳಿಗ್ಗೆ 11 ಗಂಟೆಗೆ ಹಾರಕೂಡ ಚನ್ನವೀರ ಶಿವಾಚಾರ್ಯರ ಗುರುವಂದನೆ ಹಾಗೂ ತುಲಾಭಾರ ಕಾರ್ಯಕ್ರಮ ಜರುಗಲಿದೆ. ಅಂದು ಮಹಾಪ್ರಸಾದವೂ ಏರ್ಪಡಿಸಲಾಗುತ್ತದೆ. ಪ್ರತಿದಿನ ಸಂಗೀತಗಾರರಾದ ದಿಲೀಪ ದೇಸಾಯಿ, ಸೂರ್ಯಕಾಂತ ಖಾನಾಪುರ, ಬಸವರಾಜ ಕಣಜೆ ಮತ್ತು ಶರಣಪ್ಪ ಸುಂಠಾಣ ಅವರಿಂದ ಸಂಗೀತ ಕಾರ್ಯಕ್ರಮ ನಡೆಯುತ್ತಿದೆ’ ಎಂದು ವ್ಯವಸ್ಥಾಪಕ ಮಂಡಳಿ ಪ್ರಮುಖ ಶ್ರೀನಾಥ ಕಣಜೆ ಹೇಳಿದರು.

ದಸರಾ ಅಂಗವಾಗಿ 21 ದಿನಗಳ ವೈರಾಗ್ಯನಿಧಿ ಅಕ್ಕನ ಆಧ್ಯಾತ್ಮಿಕ ಪ್ರವಚನ ಆಯೋಜಿಸಿದ್ದು ಪ್ರತಿದಿನ ನೂರಾರು ಜನರಿಗೆ ಅನ್ನಸಂತರ್ಪಣೆಯೂ ನಡೆಯುತ್ತಿದೆ
ಸದಾನಂದ ಪಾಟೀಲ ಗ್ರಾಮದ ಮುಖಂಡ
ದಸರೆಯ ಕೊನೆಯಲ್ಲಿ ಅಂಬಾಭವಾನಿ ದೇವಿಯ ಹೊಸ ಪ್ರತಿಮೆಯ ಪ್ರತಿಷ್ಠಾಪನೆ ಹಾಗೂ ಹಾರಕೂಡಶ್ರೀಯವರ ಗುರುವಂದನೆ ಮತ್ತು ತುಲಾಭಾರ ನಡೆಯುವುದು
ಶ್ರೀನಾಥ ಕಣಜೆ ಪ್ರಮುಖ ವ್ಯವಸ್ಥಾಪಕ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.