ಬಸವಕಲ್ಯಾಣ: ‘ಶಾಂತಿ, ಸೌಹಾರ್ದಯುತ ಉತ್ತಮ ಸಮಾಜ ನಿರ್ಮಾಣಕ್ಕೆ ಬಸವಾದಿ ಶರಣರು ಸಾರಿದ ತತ್ವ ದಾರಿದೀಪವಾಗಿದೆ’ ಎಂದು ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದರು.
ನಗರದಲ್ಲಿ ಅಂತರರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಮತ್ತು ಲಿಂಗವಂತ ಶರಣ ಹರಳಯ್ಯ ಪೀಠದಿಂದ ಭಾನುವಾರ ನಡೆದ ಶರಣು ಶರಣಾರ್ಥಿ ಸಮಾವೇಶ ಮತ್ತು ಶರಣ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮನವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹರಳಯ್ಯ ಪೀಠಾಧ್ಯಕ್ಷೆ ಅಕ್ಕ ಗಂಗಾಂಬಿಕಾ ಮಾತನಾಡಿ, ‘ಅಪ್ಪಣ್ಣನವರು ಅಂಗೈಯಲ್ಲಿ ಲಿಂಗ ಇಟ್ಟುಕೊಂಡು ಅದನ್ನು ನೋಡಿ ಅದರಲ್ಲಿಯೇ ತಲ್ಲಿನರಾಗಿರುತ್ತಿದ್ದರು. ಅವರ ಪತ್ನಿ ಲಿಂಗಮ್ಮನವರು ಮಹಾ ಯೋಗಿಣಿ ಆಗಿದ್ದರು. ಇವರು ಬರೆದ 114 ವಚನಗಳು ಲಭ್ಯವಾಗಿವೆ’ ಎಂದರು.
ಕೃಷಿ ಅಧಿಕಾರಿ ಬಸವಪ್ರಭು ಮಡ್ಡೇರ್, ಹಡಪದ ಅಪ್ಪಣ್ಣ ಸಮಾಜ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ಡಿಗ್ಗಿ, ಶಿವರಾಜ ನೀಲಕಂಠೆ, ದತ್ತಾತ್ರಿ ಮೂಲಗೆ ಮಾತನಾಡಿದರು.
ಜಾನಪದ ತಜ್ಞ ಜಗನ್ನಾಥ ಹೆಬ್ಬಾಳೆ ದಂಪತಿಗಳಿಗೆ ಸನ್ಮಾನಪತ್ರ ನೀಡಿ ವಿಶೇಷವಾಗಿ ಸನ್ಮಾನಿಸಲಾಯಿತು.
ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಅಧ್ಯಕ್ಷ ಸಂತೋಷ ಹಡಪದ, ಅಮರನಾಥ ಸೋಲಪುರೆ, ಹಿರಿಯ ನಾಗರಿಕ ಒಕ್ಕೂಟದ ಅಧ್ಯಕ್ಷ ಚನ್ನಪ್ಪಾ ಪ್ರತಾಪುರೆ, ಗಣೇಶ ಜಂಗೆ, ವಿಜಯಲಕ್ಷ್ಮಿ ದಾವಲಜಿ ಉಪಸ್ಥಿತರಿದ್ದರು.
ರಂಜನಾ ಭೂಶೆಟ್ಟಿ ಮತ್ತು ಮಂಜುನಾಥ ವಚನ ಸಂಗೀತ ಪ್ರಸ್ತುತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.