ADVERTISEMENT

ಬಸವಣ್ಣನ ಹೆಸರಲ್ಲಿ ಲಿಂಗಾಯತರು ಒಂದಾಗಲಿ: ಸಭಾಪತಿ ಬಸವರಾಜ ಹೊರಟ್ಟಿ

ಅನುಭವ ಮಂಟಪ ಉತ್ಸವಕ್ಕೆ ಅದ್ದೂರಿ ಚಾಲನೆ; ವಿವಿಧ ಭಾಗಗಳ ಬಸವ ಭಕ್ತರ ಸಮಾಗಮ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 26 ನವೆಂಬರ್ 2023, 7:02 IST
Last Updated 26 ನವೆಂಬರ್ 2023, 7:02 IST
<div class="paragraphs"><p>ಎರಡು ದಿನಗಳ ಅನುಭವ ಮಂಟಪ ಉತ್ಸವಕ್ಕೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು ಬಸವಕಲ್ಯಾಣದಲ್ಲಿ ಶನಿವಾರ ದೀಪ ಬೆಳಗಿಸಿ ಚಾಲನೆ ನೀಡಿದರು</p></div>

ಎರಡು ದಿನಗಳ ಅನುಭವ ಮಂಟಪ ಉತ್ಸವಕ್ಕೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು ಬಸವಕಲ್ಯಾಣದಲ್ಲಿ ಶನಿವಾರ ದೀಪ ಬೆಳಗಿಸಿ ಚಾಲನೆ ನೀಡಿದರು

   

ಬಸವಕಲ್ಯಾಣ (ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ವೇದಿಕೆ): ಎರಡು ದಿನಗಳ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವಕ್ಕೆ ಶರಣಭೂಮಿ ಬಸವಕಲ್ಯಾಣದಲ್ಲಿ ಶನಿವಾರ ಚಾಲನೆ ನೀಡಲಾಯಿತು.

ವಿವಿಧ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸವ ಭಕ್ತರು ಬಂದದ್ದರಿಂದ ಅನುಭವ ಮಂಟಪದ ಪರಿಸರದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿತ್ತು. ಶ್ವೇತವರ್ಣದ ವಸ್ತ್ರ ತೊಟ್ಟು, ಹಣೆಯ ಮೇಲೆ ವಿಭೂತಿ ಧರಿಸಿ, ಶರಣು–ಶರಣಾರ್ಥಿ ಎಂದು ಕೈಮುಗಿಯುತ್ತ ಬಸವಾಭಿಮಾನಿಗಳು ಎಲ್ಲೆಡೆ ಓಡಾಡುತ್ತಿದ್ದರು. ಕೆಲವರು ಸಮಾರಂಭದಲ್ಲಿ ಭಾಗವಹಿಸಿ ಗೋಷ್ಠಿ ಕೇಳಿದರೆ, ಮತ್ತೆ ಕೆಲವರು ಲಿಂಗ, ವಿಭೂತಿ, ವಚನಗಳ ಪುಸ್ತಕಗಳನ್ನು ಖರೀದಿಸುತ್ತಿದ್ದರು. ಭಕ್ತರಿಗಾಗಿ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ಸಡಗರ, ಸಂಭ್ರಮದ ನಡುವೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿ, ‘ಒಳಪಂಗಡಗಳನ್ನು ಮರೆತು ಲಿಂಗಾಯತರು ಬಸವಣ್ಣನ ಹೆಸರಲ್ಲಿ ಒಂದಾಗಬೇಕು. ಲಿಂಗಾಯತರು ಇಡೀ ಜಗತ್ತನ್ನು ಆಳಬಲ್ಲರು. ಆದರೆ, ಅವರಲ್ಲಿ ಒಗ್ಗಟ್ಟಿಲ್ಲ ಎಂದು ಮಾಜಿಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಹೇಳಿದ್ದರು. ಹಾಗಾಗಿ ಲಿಂಗಾಯತರಲ್ಲಿ ಒಗ್ಗಟ್ಟು ಅಗತ್ಯ’ ಎಂದು ಹೇಳಿದರು.

‘ರಾಜಕಾರಣ ದೂರವಿಟ್ಟು ಕಾಳಜಿ ವಹಿಸಿದರೆ ದೇಶ–ವಿದೇಶಗಳಲ್ಲಿ ಬಸವಾದಿ ಶರಣರು, ಅನುಭವ ಮಂಟಪದ ಕೀರ್ತಿ ಹರಡುತ್ತದೆ. ಅಲ್ಲಮಪ್ರಭು, ಬಸವಣ್ಣನವರು ಜಗತ್ತಿಗೆ ಮೊದಲ ಸಂಸತ್ತು ಕೊಟ್ಟವರು. ಆದರೆ, ಲಿಂಗಾಯತರು ಜಾಗೃತರಾಗಿಲ್ಲ’ ಎಂದರು.

‘ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೆ ಮುಖ್ಯಮಂತ್ರಿ ಇದ್ದಾಗ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಇಡಬೇಕೆಂದು ಆದೇಶಿಸಿದ್ದರು. ರಾಜ್ಯದಲ್ಲಿ ವಿಮಾನ ನಿಲ್ದಾಣವೊಂದಕ್ಕೆ ಬಸವೇಶ್ವರರ ಹೆಸರಿಡುವ ಸಂಬಂಧ ಅವರಿಗೆ ಮನವರಿಕೆ ಮಾಡಬೇಕು. ಈ ಉತ್ಸವದಲ್ಲಿ ಠರಾವು ಮಾಡಬೇಕು. ಅದಕ್ಕೆ ಎಲ್ಲರೂ ಶ್ರಮಿಸೋಣ. ಭಾಷಣ ಮಾಡಿದರೆ ಸಾಲದು’ ಎಂದು ಹೇಳಿದರು.

ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಬಸವಕಲ್ಯಾಣ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು. ದೇಶ–ವಿದೇಶಗಳ ಜನ ಇಲ್ಲಿಗೆ ಬರಬೇಕು. ಬೀದರ್‌ ಹಾಗೂ ಬಸವಕಲ್ಯಾಣದಲ್ಲಿ ಶರಣರು ನಡೆದಾಡಿದ ಅನೇಕ ಸ್ಥಳಗಳಿವೆ. ಅವುಗಳನ್ನು ಸಂರಕ್ಷಿಸಿ ಅಭಿವೃದ್ಧಿ ಪಡಿಸಬೇಕು. ಇಲ್ಲವಾದರೆ ಮುಂದಿನ ಜನಾಂಗ ಎಲ್ಲಾ ಮರೆತು ಹೋಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವದ ಪರಿಕಲ್ಪನೆ ಹುಟ್ಟಿದ್ದು ಇಂಗ್ಲೆಂಡ್‌ನಲ್ಲಿ ಎಂದು ಹಿಂದೆ ಹೇಳುತ್ತಿದ್ದರು. ಈಗ ಕರ್ನಾಟಕ ಎಂದು ಹೇಳುತ್ತಿದ್ದಾರೆ. ಅನೇಕ ಮೌಲಿಕ ತತ್ವಗಳು ವಚನ ಸಾಹಿತ್ಯದಲ್ಲಿವೆ. ಒಂದುವೇಳೆ ನಾವು ಜಾಗೃತರಾಗಿದ್ದರೆ ವಿಶ್ವಸಂಸ್ಥೆಯಲ್ಲಿ ಬಸವಣ್ಣನವರ ಹೆಸರು ಉಲ್ಲೇಖವಾಗುತ್ತಿತ್ತು. ನಮ್ಮ ತಪ್ಪಿನಿಂದ ಆ ಕೆಲಸವಾಗಿಲ್ಲ. ಈಗಲಾದರೂ ಜಾಗೃತರಾಗಬೇಕಿದೆ. ಮಾಡಿದ್ದು ಬಹಳ ಸ್ವಲ್ಪ. ಮಾಡಬೇಕಾದ ಕೆಲಸ ಬಹಳಷ್ಟಿದೆ ಎಂದರು.

ಬಸವ ಧ್ವಜಾರೋಹಣ ನೆರವೇರಿಸಿದ ಅನುಭವ ಮಂಟಪದ ಸಂಚಾಲಕ ವಿ. ಸಿದ್ದರಾಮಣ್ಣ ಶಾಸಕ ಶರಣು ಸಲಗರ

ಶಾಸಕ ಶರಣು ಸಲಗರ ಮಾತನಾಡಿ, ‘ಇದು ಕಾಯಕ, ಸಮಾನತೆ, ದಾಸೋಹದ ಉತ್ಸವವಾಗಿದೆ ಎಂದರು. ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಮಾತನಾಡಿ, ‘ಇದು ಅಸಾಮಾನ್ಯ ಉತ್ಸವ. ಜ್ಞಾನ ದಾಸೋಹ, ಜಾತಿರಹಿತ ಸಮ ಸಮಾಜ ಬಯಸಿದ, ಪ್ರಜಾಪ್ರಭುತ್ವದ ಮೊದಲ ಬೀಜ ಬಿತ್ತಿದ ತವರೂರು’ ಎಂದರು.

ಗಮನ ಸೆಳೆದ ವಚನ ನೃತ್ಯರೂಪಕ

ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ, ಐಎಫ್‌ಎಸ್‌ ಅಧಿಕಾರಿ ಆರ್‌.ಕೆ. ಸೂಗುರು ಅವರನ್ನು ಸನ್ಮಾನಿಸಲಾಯಿತು. ಹುಲಸೂರಿನ ಶಿವಾನಂದ ಸ್ವಾಮೀಜಿ, ಹಾರಕೂಡದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿ ಉಪಾಧ್ಯಕ್ಷ ಬಸವರಾಜ ಧನ್ನೂರ, ವಿಧಾನ ಪರಿಷತ್‌ ಸದಸ್ಯರಾದ ಚಂದ್ರಶೇಖರ ಪಾಟೀಲ, ಭೀಮರಾವ ಪಾಟೀಲ, ಮುಖಂಡರಾದ ಗುರುನಾಥ ಕೊಳ್ಳೂರ, ಆನಂದ ದೇವಪ್ಪ, ಬಾಬುವಾಲಿ ಇತರರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಸವ ಭಕ್ತರು

ಇದಕ್ಕೂ ಮುನ್ನ ಬಸವಗುರು ಪೂಜೆ, ವಚನ ಪಠಣಕ್ಕೆ ಲೋಕೋಪಯೋಗಿ ಇಲಾಖೆಯ ಆಂತರಿಕ ಆರ್ಥಿಕ ಸಲಹೆಗಾರ ಸೋಮನಾಥ ಪಟ್ನೆ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಚಾಲನೆ ನೀಡಿದರು. ಅನುಭವ ಮಂಟಪದ ಸಂಚಾಲಕ ವಿ. ಸಿದ್ದರಾಮಣ್ಣನವರು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಜಿಪಂ ಸಿಇಒ ಶಿಲ್ಪಾ ಎಂ., ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ಇದ್ದರು.

ದಾಸೋಹ ಸವಿದ ಬಸವ ಭಕ್ತರು ಚಿತ್ರಗಳು: ಲೋಕೇಶ ಮರಕಲ್‌
‘ಅನುಭವ ಮಂಟಪದಿಂದ ಭಾರತ ಮಂಟಪ’
‘ನವದೆಹಲಿಯಲ್ಲಿ ನಿರ್ಮಿಸಿರುವ ನೂತನ ಸಂಸತ್‌ ಭವನಕ್ಕೆ ಭಾರತ ಮಂಟಪ ಎಂದು ಹೆಸರಿಡಲು ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಜಗತ್ತಿನ ಮೊಟ್ಟ ಮೊದಲ ಸಂಸತ್‌ ಅನುಭವ ಮಂಟಪದ ಹೆಸರೇ ಪ್ರೇರಣೆ. ಸಂಸತ್ತಿನ ಉದ್ಘಾಟನಾ ಸಮಾರಂಭದಲ್ಲಿ ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಕೂಡ ಮಾತನಾಡಿದ್ದರು’ ಎಂದು ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಹೊಸ ಸಂಸತ್ತಿನಲ್ಲಿ ಅನುಭವ ಮಂಟಪದ ಚಿತ್ರ ಕೂಡ ಅಳವಡಿಸಲಾಗಿದೆ. ಬಸವಣ್ಣನವರ ಬೆಳಕು ಎಲ್ಲೆಡೆ ಹರಿಯುತ್ತಿದೆ. ಬಸವೇಶ್ವರರ ತತ್ವಾದರ್ಶಗಳು ಕರ್ನಾಟಕ ಬಿಟ್ಟು ಜಗತ್ತಿಗೆ ಪಸರಿಸಿದ್ದರೆ ಇರಾಕ್‌ ಹಮಾಸ್‌ ಉಕ್ರೇನ್‌ನಲ್ಲಿ ಯುದ್ಧಗಳು ಆಗುತ್ತಿರಲಿಲ್ಲ ಎಂದರು.
‘ಮುಂದಿನ ವರ್ಷದಿಂದ ಬಸವ ಭಾಸ್ಕರ ಪ್ರಶಸ್ತಿ’
‘ಬಸವತತ್ವದ ಪ್ರಚಾರ ಪ್ರಸಾರಕ್ಕಾಗಿ ಶ್ರಮಿಸಿದವರಿಗೆ ಮುಂದಿನ ವರ್ಷದಿಂದ ಅನುಭವ ಮಂಟಪ ಉತ್ಸವದಲ್ಲಿ ಹೊಸದಾಗಿ ಬಸವ ಭಾಸ್ಕರ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿ ಪತ್ರ ಹಾಗೂ ₹1 ಲಕ್ಷ ನೀಡಲಾಗುವುದು. ಈ ಪ್ರಶಸ್ತಿಯ ಮೊತ್ತವನ್ನು ಹಾರಕೂಡದ ಚನ್ನವೀರ ಶಿವಾಚಾರ್ಯರು ಭರಿಸುವರು. ಅವರೇ ಈ ವಿಷಯ ತಿಳಿಸಿದ್ದಾರೆ’ ಎಂದು ಬಸವಲಿಂಗ ಪಟ್ಟದ್ದೇವರು ತಿಳಿಸಿದರು.
‘ಇತರೆ ಸಮಾಜ ಗೌರವಿಸಿ ಬಸವತತ್ವ ಪಾಲಿಸಿ’
‘ಬಸವ ಭಕ್ತರು ಇತರೆ ಸಮಾಜದವರನ್ನು ಗೌರವಿಸಬೇಕು. ಆದರೆ ಕಟ್ಟುನಿಟ್ಟಿನಿಂದ ಬಸವತತ್ವ ಪಾಲಿಸಬೇಕು. ತಮ್ಮ ತತ್ವಗಳ ಮೂಲಕ ಬಸವಣ್ಣನವರು ಹೊಸ ಸಮಾಜ ಕಟ್ಟಿದ್ದಾರೆ. ಆದರೆ ಯಾರು ಕೂಡ ಅನುಸರಿಸುತ್ತಿಲ್ಲ’ ಎಂದು ಪೌರಾಡಳಿತ ಸಚಿವ ರಹೀಂ ಖಾನ್‌ ಹೇಳಿದರು. ವಚನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆಗ ಬಸವಣ್ಣ ಏನೆಂಬುದು ಗೊತ್ತಾಗುತ್ತದೆ. ಬಸವಣ್ಣ ನಮಗಾಗಿ ಎಲ್ಲಾ ಬಿಟ್ಟು ಬಂದಿದ್ದಾರೆ. ಆದರೆ ಅವರ ತತ್ವಗಳನ್ನು ನಾವು ಪಾಲಿಸುತ್ತಿಲ್ಲ ಎಂದರು.
‘ಕಾಲಮಿತಿಯಲ್ಲಿ ಅನುಭವ ಮಂಟಪ’:
ಅರಣ್ಯ ಖಾತೆ ಸಚಿವ ಈಶ್ವರ ಬಿ. ಖಂಡ್ರೆ ಮಾತನಾಡಿ ‘ಕಾಲಮಿತಿಯಲ್ಲಿ ಅನುಭವ ಮಂಟಪ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗುವುದು. ಬಸವಕಲ್ಯಾಣ ಪ್ರವಾಸಿ ಹಾಗೂ ಧಾರ್ಮಿಕ ತಾಣವಾಗಬೇಕು. ಜನ ಕಲ್ಯಾಣಕ್ಕೆ ಬಂದರೆ ಸಮಾಧಾನ ಆಗಬೇಕು’ ಎಂದರು. 1972ರಲ್ಲಿ ಚನ್ನಬಸವ ಪಟ್ಟದ್ದೇವರು ಭಾಲ್ಕಿಯಿಂದ ಬಸವಕಲ್ಯಾಣಕ್ಕೆ ಬಂದು ಅನುಭವ ಮಂಟಪ ಕಟ್ಟಲು ಸಾಕಷ್ಟು ಶ್ರಮ ವಹಿಸಿದ್ದರು. ಅವರಿಗೆ ಭೀಮಣ್ಣ ಖಂಡ್ರೆ ಸೇರಿದಂತೆ ಹಲವರು ನೆರವು ನೀಡಿದ್ದರು. ಈಗ ಇದೇ ಪರಿಸರದಲ್ಲಿ ನೂತನ ಅನುಭವ ಮಂಟಪ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.